ರಾಮ ಮಂದಿರ ನಿರ್ಮಿಸಲು ಮುಂದಾದರೆ ನಮ್ಮ ಬೆಂಬಲ ಕಾಂಗ್ರೆಸ್ ಗೆ! ವಿಎಚ್ ಪಿ ಈ ನಿರ್ಧಾರ ಯಾಕೆ?

ಡಿಜಿಟಲ್ ಕನ್ನಡ ಟೀಮ್:

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದ್ದ ರಾಮ ಮಂದಿರ ವಿಚಾರ ಈ ಬಾರಿಯ ಚುನಾವಣೆಯಲ್ಲಿ ಮಗ್ಗಲಿನ ಮುಳ್ಳಾಗಿ ಪರಿಣಮಿಸುತ್ತದೆ. ಈ ವಿಚಾರವಾಗಿ ಬಿಜೆಪಿಯ ಮಿತ್ರ ಪಕ್ಷಗಳು ಹಾಗೂ ಹಿಂದೂ ಪರ ಸಂಘಟನೆಗಳು ಕೇಂದ್ರದ ವಿರುದ್ಧ ಮನಿಸಿಕೊಂಡಿದ್ದು, ‘ಒಂದು ವೇಳೆ ಕಾಂಗ್ರೆಸ್ ರಾಮ ಮಂದಿರ ಕಟ್ಟುವುದಾದರೆ ಮುಂದಿನ ಚುನಾವಣೆಯಲ್ಲಿ ನಮ್ಮ ಬೆಂಬಲ ಕಾಂಗ್ರೆಸ್ ಗೆ ನೀಡಲಾಗುವುದು’ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದ್ದಾರೆ. ಇದು ಸಹಜವಾಗಿಯೇ ಬಿಜೆಪಿ ಮೇಲೆ ಒತ್ತಡ ಹೆಚ್ಚುವಂತೆ ಮಾಡಿದೆ.

ಕಳೆದ ಬಾರಿಗಿಂತ ಈ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಚಿತ್ರಣ ಸಂಪೂರ್ಣ ಭಿನ್ನವಾಗಿದೆ. ಇದಕ್ಕೆ ಪ್ರಮುಖ ಕಾರಣ 2014ರಲ್ಲಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದವರು ಈಗ ಬಿಜೆಪಿ ವಿರುದ್ಧವೇ ತಿರುಗಿ ಬಿದ್ದಿರುವುದು.

ಹೌದು, ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಶಿವಸೇನೆ ಹಾಗೂ ಟಿಡಿಪಿ ಬಹಿರಂಗವಾಗಿ ಕೇಂದ್ರದ ವಿರುದ್ಧ ಸಿಕ್ಕ ಸಿಕ್ಕಲ್ಲಿ ಬೈಯ್ದುಕೊಳ್ಳುತ್ತಿದೆ. ಈ ಮಧ್ಯೆ ರಾಮ ಮಂದಿರ ವಿಚಾರವಾಗಿ ಬಿಜೆಪಿ ತನ್ನವರಿಂದಲೇ ಟೀಕೆ ಎದುರಿಸುವಂತಾಗಿದೆ. ರಾಮ ಮಂದಿರ ವಿಚಾರವಾಗಿ ಬಿಜೆಪಿ ನಿರಾಸಕ್ತಿ ತೋರುತ್ತಿದೆ ಎಂದು ಈಗಾಗಲೇ ಶಿವಸೇನೆ ವಾಗ್ದಾಳಿ ನಡೆಸಿದ್ದು, ಈಗ ಆ ಸರದಿ ವಿಶ್ವ ಹಿಂದೂ ಪರಿಷತ್ ಆಗಿದೆ. ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅಲೋಕ್ ಕುಮಾರ್ ಹೇಳಿದ್ದಿಷ್ಟು…

‘ಒಂದುವೇಳೆ ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಸೇರಿಸಿಕೊಂಡರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬೆಂಬಲ ಸೂಚಿಸುತ್ತೇವೆ. ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಬಿಜೆಪಿ ಯಾವ ಆಸಕ್ತಿಯನ್ನೂ ತೋರುತ್ತಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ರಾಮ ಮಂದಿರ ನಿರ್ಮಾಣದ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ತನ್ನ ಮಾತು ಉಳಿಸಿಕೊಂಡಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ ಕಾಂಗ್ರೆಸ್​ ಭರವಸೆ ನೀಡಿದರೆ ತಾವು ಬೆಂಬಲ ನೀಡಲು ಸಿದ್ಧರಿದ್ದೇವೆ.

ಈ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಬೇಕು. ನಮ್ಮ ಬೇಡಿಕೆಯನ್ನು ಈಡೇರಿಸುವ ಪಕ್ಷಕ್ಕೆ ನಾವು ಬೆಂಬಲ ನೀಡಲಿದ್ದೇವೆ. ಕಾಂಗ್ರೆಸ್​ ಈ ವಿಷಯದಲ್ಲಿ ತನ್ನ ನಿಲುವು ಬದಲಾಯಿಸಿಕೊಂಡರೆ ಅವರಿಗೆ ನಾವು ಬೆಂಬಲ ನೀಡುವ ಬಗ್ಗೆ ಯೋಚಿಸುತ್ತೇವೆ. ರಾಮ ಮಂದಿರ ನಿರ್ಮಾಣ ಎಲ್ಲ ಹಿಂದುಗಳ ಕನಸು. ಇದಕ್ಕಾಗಿ ಅನೇಕ ಧರ್ಮಗುರುಗಳ ಆಶೀರ್ವಾದ ಪಡೆದಿದ್ದೇವೆ. ಈ ಬಗ್ಗೆ ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳನ್ನೂ ಸಂಪರ್ಕಿಸಿದ್ದೇವೆ. ಆದರೆ, ಅವರಾರೂ ಅಯೋಧ್ಯೆ ವಿವಾದದಲ್ಲಿ ಸ್ಪಷ್ಟ ನಿಲುವು ತಳೆಯುತ್ತಿಲ್ಲ. ನಮ್ಮ ಬೇಡಿಕೆಗಳು ಈಗ ರಾಜಕೀಯ ಮುಖವಾಡ ಧರಿಸುತ್ತಿವೆ. ಹೀಗಾಗಿ, ನಾವೂ ಒಂದು ನಿರ್ಧಾರಕ್ಕೆ ಬರಬೇಕಾಗಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಕೇಂದ್ರ ಸರ್ಕಾರ ಯಾವುದೇ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ ಎಂದು ನಮಗೆ ಅನಿಸುತ್ತಿದೆ. ಹಾಗಾಗಿ, ನಾವು ಪರ್ಯಾಯ ಪಕ್ಷವನ್ನು ಎದುರುನೋಡುತ್ತಿದ್ದೇವೆ.’

Leave a Reply