ಭಕ್ತರನ್ನು ಬಿಟ್ಟು ಹೊರಟ ನಡೆದಾಡುವ ದೇವರು

ಡಿಜಿಟಲ್ ಕನ್ನಡ ಟೀಮ್:

ನಡೆದಾಡುವ ದೇವರು ಅಂದೇ ಅನ್ವರ್ಥ ನಾಮಾಂಕಿತರಾಗಿದ್ದ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಇನ್ನಿಲ್ಲ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶಿವಕುಮಾರ ಸ್ವಾಮಿಗಳು ಬಿಜಿಎಸ್ ಆಸ್ಪತ್ರೆಯಲ್ಲಿ ಹಲವಾರು ಬಾರಿ ಚಿಕಿತ್ಸೆ ಪಡೆದ ಶಿವಕುಮಾರ ಶ್ರೀಗಳ 11 ಸ್ಟಂಟ್ಸ್‌ಗಳನ್ನು ಅಳವಡಿಸಲಾಗಿತ್ತು. ಆ ಬಳಿಕ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಸ್ಟಂಟ್ ಅಳವಡಿಕೆ ಸಾಧ್ಯವಿಲ್ಲ, ಈಗಾಗಲೇ ಅಳವಡಿಸಿದ ಸ್ಟಂಟ್‌ಗಳನ್ನೂ ಹೊರಗೆ ತೆಗೆಯಬೇಕು ಎಂದು ವೈದ್ಯರು ಸೂಚಿಸಿದ್ರು. ಅದರಂತೆ ಚೆನ್ನೈನ ಡಾ ರೇಲಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಪರೇಷನ್ ನಡೆಸಲಾಗಿತ್ತು. ಆ ಬಳಿಕ ಅಚ್ಚರಿಯ ರೀತಿಯಲ್ಲಿ ಚೇತರಿಸಿಕೊಂಡ ನಡೆದಾಡುವ ದೇವರು, ಕೆಲವೇ ದಿನಗಳಲ್ಲಿ ಎಂದಿನಂತೆ ಲವಲವಿಕೆಯಿಂದ ಇದ್ದರು. ತದನಂತರ ಸೋಕು ಹೆಚ್ಚಾದ ಕಾರಣ ಶ್ರೀಗಳು ಪುನಃ ಉಸಿರಾಟದ ತೊಂದರೆಗೆ ಸಿಲುಕಿದ್ರು.

ಶ್ರೀಗಳ ಆರೋಗ್ಯ ಹದಗೆಡುತ್ತಿದ್ದ ಹಾಗೆ ಮಠಕ್ಕೆ ಆಗಮಿಸಿದ ವೈದ್ಯರ ತಂಡ, ಶ್ರೀಗಳ‌ ಆರೋಗ್ಯದ ದೃಷ್ಟಿಯಿಂದ ಮಠದಲ್ಲೇ‌ ಚಿಕಿತ್ಸೆ ನೀಡಲು ನಿರ್ಧರಿಸಿದ್ರು. ವೈದ್ಯರ ತಂಡದ ಸೂಚನೆಯಂಯೆ ಹಳೇ ಮಠವನ್ನೇ ಹಾಸ್ಪಿಟಲ್ ರೀತಿ ಸಜ್ಜುಗೊಳಿಸಲಾಗಿತ್ತು. ಶ್ರೀಗಳ ಆಪ್ತ ವೈದ್ಯ ಡಾ ಪರಮೇಶ್ ನೇತೃತ್ವದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಸಾಕಷ್ಟು ಏರುಪೇರುಗಳ ನಡುವೆ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳಲು ಶುರುವಾಯಿತು.

ಕೆಲವು ದಿನಗಳ ಕಾಲ ಶ್ವಾಸಕೋಶದ ನೀರನ್ನು ತೆಗೆದು ಚಿಕಿತ್ಸೆ ನೀಡಿದರೂ ಸೋಂಕು ನಿವಾರಣೆ ಆಗಲಿಲ್ಲ. ಉಸಿರಾಟ ಶಕ್ತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಸಾಗಿತ್ತು. ಇವತ್ತು ಸೋಮವಾರ ಶಿವನಿಗೆ ಪ್ರಿಯವಾದ ದಿನ. ಈ ದಿನವೇ ಶಿವಭಕ್ತ ಶ್ರೀಗಳು ದೇವರ ಬಳಿಗೆ ಹೋಗಿದ್ದು, ಶಿವನಲ್ಲಿ ಲೀನವಾಗಿದ್ದಾರೆ. ಅಪಾರ ಭಕ್ತರಲ್ಲಿ ಅನಾಥ ಭಾವನೆ ಉಂಟಾಗಿದೆ.

ತುಮಕೂರು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಶ್ರೀಗಳ ಅಂತಿಮ ದರ್ಶನಕ್ಕೆ ಬರುವ ವಿವಿಐಪಿಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, 14 ಹೆಲಿಕಾಪ್ಟರ್ ಇಳಿಯಲು ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಭಕ್ತರು ಸಾವಧಾನದಿಂದ ಅಂತಿಮ ದರ್ಶನ ಪಡೆಯಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ಇಪತ್ತು ಸಾವಿರ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.. ಮಧ್ಯಾಹ್ನ ಮಠಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ, ಪ್ರಮುಖರ ಸಭೆ ನಡೆಸಿದ್ರು. ತುರ್ತುಸಭೆಯಲ್ಲಿ ಸಿಎಂ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಡಿಸಿಎಂ ಪರಮೇಶ್ವರ್, ಸಿದ್ಧಗಂಗಾ ಕಿರಿಯ ಶ್ರೀ, ಗೃಹಸಚಿವ ಎಂ.ಬಿ .ಪಾಟೀಲ್, ಕೇಂದ್ರ ವಲಯ ಐಜಿಪಿ ದಯಾನಂದ್, ಸುತ್ತೂರು ಶ್ರೀ, ಆದಿಚುಂಚನಗಿರಿ ಶ್ರೀ, ತುಮಕೂರು ಜಿಲ್ಲಾಧಿಕಾರಿ, ತುಮಕೂರು ಎಸ್‌ಪಿ, ಡಿಜಿಪಿ ನೀಲಮಣಿ ರಾಜು ಭಾಗಿಯಾಗಿದ್ರು. ಶ್ರೀಗಳ ಅಂತಿಮ ಯಾತ್ರೆ ಬಗ್ಗೆ ಚರ್ಚೆ ಮಾಡಲಾಗಿದೆ.

Leave a Reply