ದೇವರ ಕ್ರಿಯಾ ಸಮಾಧಿ ಹೇಗೆ ನಡೆಯುತ್ತದೆ?

ಡಿಜಿಟಲ್ ಕನ್ನಡ ಟೀಮ್:

ತುಮಕೂರಿನ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದು ಲಕ್ಷಾಂತರ ಭಕ್ತರು ಅಂತಿಮ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದಾರೆ. ಮಧ್ಯಾಹ್ನ 2 ಗಂಟೆ ತನಕ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದ್ದು, ಆ ಬಳಿಕ ಅಂತಿಮ ಕ್ರಿಯಾಸಮಾಧಿ ಕೆಲಸಗಳು ಆರಂಭವಾಗುತ್ತವೆ. ಸಂಜೆ 4.30ಕ್ಕೆ ಅಂತಿಮ ಕ್ರಿಯಾಸಮಾಧಿ ಕಾರ್ಯಗಳು ನೆರವೇರಲಿದ್ದು, ಮಠದ ಎಡಭಾಗದಲ್ಲಿರುವ ಕಟ್ಟಡದಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ದತೆ ನಡೆದಿದ್ದು, ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ವಿಧಿವಿಧಾನಗಳು ನೆರವೇರಿಸಲಾಗುತ್ತದೆ, ಈಗಾಗಲೇ 100 KG ಯಷ್ಟು ವಿಭೂತಿ, ಬಿಲ್ವಪತ್ರೆ, 80 ಚೀಲ ಮರಳು, 6 ಕ್ವಿಂಟಾಲ್ ಉಪ್ಪು ಹಾಗೂ ಹೂಗಳನ್ನು ಕ್ರಿಯಾಸಮಾಧಿ ತರಲಾಗಿದೆ. ಶ್ರೀಗಳ ಪಾದದ ಒಂಬತ್ತು ಪಾದದಷ್ಟು ಅಗಲವಾದ ಮಂಡಲ ನಿರ್ಮಾಣ ಮಾಡಲಾಗಿದೆ

ದೇವರ ಕ್ರಿಯಾಸಮಾಧಿ ಕಾರ್ಯಕ್ರಮ ವಿವಿಧ ಶ್ರೀಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅಂತ್ಯಕ್ರಿಯೆ ಕಟ್ಟಡಕ್ಕೆ ಸ್ವಾಮೀಜಿಗಳಿಗೆ ಮಾತ್ರ ಪ್ರವೇಶ ನೀಡಲಾಗ್ತಿದ್ದು, ಪ್ರಮುಖ ಜನಪ್ರತಿನಿಧಿಗಳು ಮಾತ್ರ ಹಾಜರಿರಲಿದ್ದಾರೆ. ಈಗಾಗಲೇ ಹೂವುಗಳಿಂದ ಗದ್ದುಗೆ ಅಲಂಕಾರಗೊಂಡಿದೆ. ಹಳೆಮಠದ ಮುಂಭಾಗ ಇರುವ ಗದ್ದುಗೆ ಹೊರಭಾಗದಲ್ಲಿ ಹಸಿರು ಚಪ್ಪರ ನಿರ್ಮಾಣ ಮಾಡಿದ್ದು, ಶ್ರೀಗಳಿಗೆ ಕೊನೆಯ ಬಾರಿಗೆ ಪಾದ ಪೂಜೆ ನೆರವೇಸಲಾಗುತ್ತದೆ. ಹೂವುಗಳಿಂದ ಓಂ ನಮಃ ಶಿವಾಯ ಎಂದು ಅಕ್ಷರ ರಚಿಸಿದ್ದಾರೆ. ಸಿದ್ಧಗಂಗಾ ಶ್ರೀಗಳ ಅಂತಿಮ ಕ್ರಿಯಾ ಪೂಜೆಗೆ ಸಕಲ ಸಿದ್ಧತೆ ನಡೆದಿದೆ. ಗದ್ದುಗೆ ಒಳಗೆ ಕೊನೆ‌ಹಂತದ ಸಿದ್ಧತೆಗಳು. ಗದ್ದುಗೆಯ ಒಳಭಾಗದಲ್ಲೂ ಹೂವುಗಳಿಂದ ಅಲಂಕಾರ ಮಾಡಲಾಗಿದೆ.

ಮಠದ ಸಿಬ್ಬಂದಿ ವೇದಮೂರ್ತಿ ನೇತೃತ್ವದಲ್ಲಿ ಗದ್ದುಗೆ ಅಲಂಕಾರ ಹಾಗೂ ಕ್ರಿಯಾಪೂಜೆಯ ಸಿದ್ಧತೆ ನಡೆದಿದ್ದು, 1982ರಲ್ಲಿ ಗದ್ದುಗೆ ನಿರ್ಮಾಣಕ್ಕೆ ಶ್ರೀಗಳೇ ಅಡಿಗಲ್ಲು ಹಾಕಿಸಿದ್ದು, ಇಂದಿನವರೆಗೂ ಒಂದೊಂದೇ ಕೆಲಸಗಳನ್ನ ಮುಗಿಸಲಾಗಿದೆ. ಪೂರ್ಣ ಕೆಲಸ ಮುಗಿಸಬಾರದು ಅನ್ನೋದು ಪ್ರತಿತಿ. ಅದಕ್ಕಾಗಿ ಒಂದಿಷ್ಟು ಕೆಲಸಗಳನ್ನ ಬಾಕಿ ಉಳಿಸಿಕೊಳ್ಳಲಾಗಿತ್ತು. ಶ್ರೀಗಳ ಆಸೆಯಂತೆ ಓಂ ನಮಃ ಶಿವಾಯ ಪರಿಕಲ್ಪನೆಯಲ್ಲಿ ಸಮಾಧಿ ನಿರ್ಮಾಣ ಆಗಿದೆ. 5 ಮೆಟ್ಟಿಲುಗಳನ್ನೊಳಗೊಂಡು ಸಮಾಧಿ ನಿರ್ಮಾಣ ಮಾಡಲಾಗಿದೆ. ಬಹುತೇಕ ಎಲ್ಲ ಸಿದ್ದತಾ ಕಾರ್ಯ ಮುಗಿದಿದೆ. ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಕೊನೆ ಪೂಜೆ ನಡೆಯಲಿದೆ. ಬಳಿಕ 15 ಮಂದಿ ಪುರೋಹಿತರಿಂದ ಶ್ರೀಗಳ‌ ಅಂತಿಮ ವಿಧಿವಿಧಾನ ನಡೆಸಲಿದ್ದಾರೆ.

ಸ್ವಾಮೀಜಿಗಳೇ ನೆಟ್ಟು ಬೆಳೆಸಿದ್ದ ಆಲದ ಮರದ ಬುಡದಲ್ಲೇ ಸ್ವಾಮೀಜಿ ಅವರ ಗದ್ದುಗೆ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಆ ವೇಳೆ ಮರ ಕಡಿಯೋದು ಸದ್ಯಕ್ಕೆ ಬೇಡ ಅಂದಿದ್ದರಂತೆ ಶ್ರೀಗಳು. ಅಂದಿನ ರಾತ್ರಿ ಬಿರುಗಾಳಿಯೇ ಸೃಷ್ಟಿಯಾಗಿ ಆಲದ ಮರ ನೆಲಕ್ಕುರುಳಿತ್ತು. ಆ ಬಳಿಕ ಅದೇ ಮರದಿಂದ ಗದ್ದುಗೆ ನಿರ್ಮಾಣ ಮಾಡಲಾಗಿತ್ತು. ಅಂದಿನಿಂದಲೇ‌ ಗದ್ದುಗೆ ಕೆಲಸಗಳು ಶುರುವಾಗಿದ್ದವು ಎನ್ನುವ ಮಾತುಗಳೂ ಕೇಳಿ ಬಂದಿದೆ.

Leave a Reply