ನೀವು ಹಾಕಿದವರಿಗೇ ವೋಟು ಹೋಗುತ್ತಾ…?!

ಡಿಜಿಟಲ್ ಕನ್ನಡ ಟೀಮ್:

ಭಾರತದಲ್ಲಿ ಕಳೆದೊಂದು ದಶಕದ ಹಿಂದೆ ಮತಪತ್ರದಲ್ಲಿ ಮತಚಲಾವಣೆ ಮಾಡಲಾಗ್ತಿತ್ತು. ಕಾಲಕ್ರಮೇಣ ಚುನಾವಣೆಯಲ್ಲಿ ಮತಪತ್ರದ ಬದಲು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ( ಇವಿಎಂ) ಬಳಸುವ ಪದ್ಧತಿ ಜಾರಿಯಲ್ಲಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಒಂದು ಆರೋಪವೊಂದು ಕೇಳಿಬಂದಿದ್ದು, ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಹಿಂದೆ ಇವಿಎಂ ಹ್ಯಾಕ್ ಆಗಿದೆ ಅನ್ನೋದು ಕಾಂಗ್ರೆಸ್ ಆರೋಪ. ಕಳೆದ ಐದು ವರ್ಷಗಳಿಂದಲೂ ಕಾಂಗ್ರೆಸ್ ಸಿಕ್ಕಸಿಕ್ಕಾಗ ಈ ದಾಳಿ ನಡೆಸುತ್ತಲೇ ಇದೆ.‌ ಇದೀಗ ಕಾಂಗ್ರೆಸ್ ಆರೋಪಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

2014ರಲ್ಲಿ ಮತಯಂತ್ರವನ್ನು ತಿರುಚಲಾಗಿತ್ತು ಎಂದು ಸೈಬರ್ ತಜ್ಞ ಸೈಯದ್ ಸುಜಾ ಆರೋಪಿಸಿದ್ರು. ಭಾರತೀಯ ಮೂಲದ ಸೈಯದ್ ಸುಜಾ, ಅಮೆರಿಕದ ಲಂಡನ್‌ನಲ್ಲಿ ಆಶ್ರಯ ಪಡೆದಿದ್ದು, ಭಾರತೀಯ ಪತ್ರಕರ್ತರ ಸಂಘ ಏರ್ಪಡಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ಈ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬಿಜೆಪಿ ಇವಿಎಂ ಹ್ಯಾಕ್ ಮಾಡಲು ಟೆಲಿಕಾಂ ದೈತ್ಯ ಸಂಸ್ಥೆ ಜಿಯೋ ನೆರವು ನೀಡಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಇವಿಎಂ ಹ್ಯಾಕ್ ಮಾಡಿದ ವಿಚಾರ ಬಿಜೆಪಿಯ ಗೋಪಿನಾಥ್ ಮುಂಡೆ ಅವರಿಗೆ ತಿಳಿದಿತ್ತು. ಅದೇ ಕಾರಣಕ್ಕಾಗಿ ಅವರನ್ನು ಹತ್ಯೆ ಮಾಡಲಾಯ್ತು. ಗೋಪಿನಾಥ್ ಮುಂಡೆ ಸಾವಿನ ಪ್ರಕರಣ ತನಿಖೆ ಮಾಡುತ್ತಿದ್ದ ಎನ್‌ಐಎ ಅಧಿಕಾರಿ ಎಫ್‌ಐಆರ್ ದಾಖಲು ಮಾಡುವ ಚಿಂತನೆಯಲ್ಲಿ ಇದ್ದಾಗಲೇ ಕೊಲೆ ಮಾಡಲಾಯ್ತು. ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲಾಯ್ತು ಎಂದಿದ್ದಾರೆ. ಇನ್ನು ಚುನಾವಣಾ ಫಲಿತಾಂಶ ಬಂದ ಬಳಿಕ ನಮ್ಮ ತಂಡದವರನ್ನೂ ಹತ್ಯೆ ಮಾಡಲಾಯ್ತು. ಹೀಗಾಗಿ ಪ್ರಾಣಭಯದ ಕಾರಣಕ್ಕಾಗಿ ನಾನು ದೇಶ ತೊರೆದು ಅಮೆರಿಕದಲ್ಲಿ ಆಶ್ರಯ ಬೇಡಿದ್ದೇನೆ ಎಂದಿದ್ದಾರೆ. ಈ ಮಾತುಗಳು ದೇಶದಲ್ಲಿ ನಡೆಯುತ್ತಿದ್ದ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ತುಪ್ಪ ಸುರಿದಂತಾಗಿದೆ.

ಎಲ್ಲಾ ಆರೋಪಗಳನ್ನು ಬಿಜೆಪಿ ಅಲ್ಲಗಳೆದಿದ್ದು, ಈ ಇಡೀ ನಾಟಕವೇ ಅರ್ಥವಾಗ್ತಿಲ್ಲ ಎಂದು ವ್ಯಂಗ್ಯ ಮಾಡಿದೆ. ಆದ್ರೆ ಕಾಂಗ್ರೆಸ್ ಇದಕ್ಕೆ ಪ್ರತ್ಯುತ್ತರ ನೀಡಿದ್ದು, ಒಂದು ರೀತಿಯ ವೈಜ್ಞಾನಿಕ ಕಾದಂಬರಿ ರೀತಿ ಕಂಡರೂ ಚುನಾವಣಾ ಅಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ. ಪರಿಶೀಲನೆ ಅಗತ್ಯ ಎಂದಿದ್ದಾರೆ. ಇನ್ನು ಬಿಎಸ್‌ಪಿ ಅಧಿನಾಯಕಿ ಮಾಯವತಿ, ಇವಿಎಂ ಬಗ್ಗೆ ಗಂಭೀರ ಆರೋಗಳು ಕೇಳಿಬಂದಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ‌ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸುವುದು ಉತ್ತಮ ಎಂದಿದ್ದಾರೆ. ಇನ್ನು ಇದೇ ಅನುಮಾನದಲ್ಲಿ ಪ್ರಪಂಚದ 120 ದೇಶಗಳು ಇವಿಎಂ ಬಳಕೆ ಮಾಡ್ತಿಲ್ಲ. ಕೇವಲ 20 ದೇಶಗಳಲ್ಲಿ ಇವಿಎಂ ಬಳಕೆಯಾಗ್ತಿದೆ. ನಾನು ಇವಿಎಂ ಬಗ್ಗೆ ಎಚ್ಚರದಿಂದ ಇರುವುದು ಅಗತ್ಯ ಎಂದಿದ್ದಾರೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು. ಆದ್ರೆ ಚುನಾವಣಾ ಆಯೋಗ ಮಾತ್ರ ಹ್ಯಾಕರ್ ತಜ್ಞನ ಮಾತನ್ನು ಅಲ್ಲಗಳೆದಿದ್ದು ಕ್ರಮಕೈಗೊಳ್ಳಲು ದೆಹಲಿ ಪೊಲೀಸರಿಗೆ ದೂರು ನೀಡಿದೆ.

ಇಷ್ಟೆಲ್ಲದರ ನಡುವೆ ನಾವು ಯಾರಿಗೆ ಮತ ಹಾಕ್ತೀವಿ ಅದು ಆ ವ್ಯಕ್ತಿಗೆ ಹೋಗುತಿದ್ಯ ಅನ್ನೋ ಗೊಂದಲಕ್ಕೆ ಸಿಲುಕಿದ್ದಾರೆ ಮತದಾರರು.

Leave a Reply