ಕಾಂಗ್ರೆಸ್ ಗೆ ಹೊಸ ಹುಮ್ಮಸ್ಸು ತಂದ ಪ್ರಿಯಾಂಕಾ! ಇದು ರಾಹುಲ್ ವೈಫಲ್ಯ ಅಂತಿದೆ ಬಿಜೆಪಿ

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಎಲ್ಲ ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿವೆ. ಒಂದೆಡೆ ಬಿಜೆಪಿಯನ್ನು ಎದುರಿಸುವ ಸವಾಲು ಮತ್ತೊಂದೆಡೆ ಪ್ರಾದೇಶಿಕ ಪಕ್ಷಗಳು ತಮ್ಮನ್ನು ಬಿಟ್ಟು ಮೈತ್ರಿ ಮಾಡಿಕೊಳ್ಳುವ ಕಸರತ್ತು ಮಾಡುತ್ತಿರುವುದು ಕಾಂಗ್ರೆಸ್ ಕಥೆ ಏನಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಈಗ ಪ್ರಿಯಾಂಕ ಗಾಂಧಿ ರಾಜಕೀಯಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡುವ ಮೂಲಕ ಕಾಂಗ್ರೆಸ್ ನಲ್ಲಿ ಹೊಸ ರಣೋತ್ಸಾಹವನ್ನು ತಂದಿದೆ.

ಪ್ರಿಯಾಂಕಾ ಗಾಂಧಿ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಯಾಗಿ ಆಯ್ಕೆ ಮಾಡಿರುವ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ ಜವಾಬ್ದಾರಿಯನ್ನೂ ಇವರ ಹೆಗಲಿಗೆ ವಹಿಸಲಾಗಿದೆ.

ನಿಜ, ರಾಜಕೀಯದಲ್ಲಿ ರಾಹುಲ್ ಗಾಂಧಿಗಿಂತ ಪ್ರಿಯಾಂಕ ಹೆಚ್ಚಿನ ಜ್ಞಾನ ಹಾಗೂ ತಂತ್ರಗಾರಿಕೆ ಶಕ್ತಿ ಹೊಂದಿದ್ದಾರೆ. ಹೀಗಾಗಿ ರಾಹುಲ್ ಗಿಂತ ಪ್ರಿಯಾಂಕಾ ಅವರ ಅಗತ್ಯ ಕಾಂಗ್ರೆಸ್ ಗೆ ಹೆಚ್ಚು ಅಗತ್ಯವಾಗಿದೆ ಎಂದು ವಿಶ್ಲೇಷಣೆ ಮಾಡಲಾಗಿತ್ತು. ಆದರೂ ಕಾಂಗ್ರೆಸ್ ಅಧ್ಯಕ್ಷ ಗಾಧಿಯನ್ನು ರಾಹುಲ್ ಗೆ ನೀಡಲಾಗಿತ್ತು. ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಿಕ್ಕ ಜಯ ಮರು ಜನ್ಮದಂತೆ ಪರಿಗನಿಸಿದರೂ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಯಾವುದೇ ಕಾರಣಕ್ಕೂ ಮೈ ಮರೆಯುವಂತಿಲ್ಲ.

ಬಿಜೆಪಿಯನ್ನು ಮಣಿಸಲು ಮಹಾಗಠಬಂಧನದ ಮೂಲಕ ವಿರೋಧ ಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಮತ್ತೊಂದೆಡೆ ಕಾಂಗ್ರೆಸ್ ಅನ್ನು ಹೊರಗಿಟ್ಟು ಪ್ರಾದೇಶಿಕ ಪಕ್ಷಗಳು ಮೈತ್ರಿಗೆ ಮುಂದಾಗಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡಿನ ಡಿಎಂಕೆ, ಬಿಹಾರದಲ್ಲಿ ಜೆಡಿಯು, ಉತ್ತರ ಪ್ರದೇಶದಲ್ಲಿ ಎಸ್ಪಿ ಹಾಗೂ ಬಿಎಸ್ಪಿ ಪಕ್ಷಗಳು ಕಾಂಗ್ರೆಸ್ ಅನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಈ ಪಕ್ಷಗಳು ರಾಹುಲ್ ನಾಯಕತ್ವ ಒಪ್ಪುವ ಮನಸ್ಥಿತಿಯಲ್ಲಿ ಇಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಮಣಿಸುವ ನೆಪದಲ್ಲಿ ಎಸ್ಪಿ ಹಾಗೂ ಬಿಎಸ್ಪಿ ಕೈ ಜೋಡಿಸಿರೋದು ಕಾಂಗ್ರೆಸ್ ಗೆ ದೊಡ್ಡ ಸವಾಲಾಗಿದೆ. ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಮಹತ್ವವಾಗಿದೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಆದಷ್ಟು ಹೆಚ್ಚು ನಿಯಂತ್ರಣ ಸಾಧಿಸಬೇಕಿದೆ. ಅದೇ ಕಾರಣಕ್ಕೆ ಉತ್ತರ ಪ್ರದೇಶಕ್ಕೆ ಪ್ರಿಯಾಂಕ ಗಾಂಧಿ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಉಸ್ತುವಾರಿ ವಹಿಸಲಾಗಿದೆ.

ಬಿಜೆಪಿ ವ್ಯಂಗ್ಯ
ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ, ‘ರಾಹುಲ್ ಗಾಂಧಿ ವೈಫಲ್ಯ ಕಾಂಗ್ರೆಸ್ ಅನ್ನು ಕಾಡುತ್ತಿದೆ. ಹೀಗಾಗಿ ಪ್ರಿಯಾಂಕಾ ಗಾಂಧಿ ಪ್ರವೇಶವಾಗಿದೆ. ಇದು ನಿರೀಕ್ಷಿತ ಬೆಳವಣಿಗೆ’ ಎಂದು ಲೇವಡಿ ಮಾಡಿದೆ.

‘ಈ ಬಗ್ಗೆ ಮುಂಚೆಯೇ ನಿರೀಕ್ಷೆ ಮಾಡಲಾಗಿತ್ತು. ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಮತ್ತೇ ಸಾಬೀತಾಗಿದೆ. ಕಾಂಗ್ರೆಸ್ ಗೆ ಒಂದು ಕುಟುಂಬವೇ ಪಕ್ಷವಾದರೆ ಬಿಜೆಪಿಗೆ ಇಡೀ ಪಕ್ಷವೇ ಒಂದು ಕುಟುಂಬವಾಗಿದೆ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟೀಕಿಸಿದ್ದಾರೆ.

Leave a Reply