ಅತಿ ಹೆಚ್ಚು ಚೆಕ್ ಡ್ಯಾಂ ನಿರ್ಮಿಸುವ 60 ಗ್ರಾ.ಪಂ.ಗಳಿಗೆ ತಲಾ 1 ಕೋಟಿ ರು. ಬಹುಮಾನ; ಡಿಕೆಶಿ ಘೋಷಣೆ

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಅಂತರ್ಜಲ ಸಂರಕ್ಷಣೆ ಯೋಜನೆಗಳಿಗೆ ಪ್ರೇರಣೆ ನೀಡುವ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು, ಅತಿ ಹೆಚ್ಚು ಚೆಕ್ ಡ್ಯಾಂ ನಿರ್ಮಿಸುವ 60 ಗ್ರಾಮ ಪಂಚಾಯತಿಗಳಿಗೆ ತಲಾ ಒಂದು ಕೋಟಿ ರೂ. ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ರಾಷ್ಟೀಯ ಜಲ ಮಿಷನ್ ಮತ್ತು ರಾಜ್ಯದ ಜಲ ಸಂಪನ್ಮೂಲ ಇಲಾಖೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಗುರುವಾರ ಏರ್ಪಡಿಸಿದ್ದ ‘ಅಂತರ್ಜಲ ಶೋಷಿತ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ’ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಅಂತರ್ಜಲ ಸಂರಕ್ಷಣೆಗೆ ಜಲಸಂಪನ್ಮೂಲ ಇಲಾಖೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಚೆಕ್ ಡ್ಯಾಂ ನಿರ್ಮಾಣ ಕೂಡ ಒಂದು. ಪ್ರತಿ ಜಿಲ್ಲೆಯಲ್ಲಿ ಅತಿ ಹೆಚ್ಚು ಚೆಕ್ ಡ್ಯಾಂ ನಿರ್ಮಾಣ ಮಾಡಿದ ಎರಡು ಗ್ರಾಮ ಪಂಚಾಯತಿಗಳಿಗೆ ತಲಾ ಒಂದು ಕೋಟಿ ರುಪಾಯಿಯನ್ನು ಬಹುಮಾನವಾಗಿ ನೀಡಲಾಗುವುದು ಎಂದರು.

ರೈತರ ಕೃಷಿ ಪಂಪ್ ಸೆಟ್ ಗಳು, ವಿದ್ಯುತ್ ಸಬ್ಸಿಡಿಗೆ ರಾಜ್ಯ ಸರಕಾರ 75 ಸಾವಿರ ಕೋಟಿ ರುಪಾಯಿ ವೆಚ್ಚ ಮಾಡುತ್ತಿದೆ. ಆದರೆ ನಾವ್ಯಾರೂ ರೈತರು ಸರಕಾರಕ್ಕೆ ತೆರಿಗೆ ಕಟ್ಟುತ್ತಿಲ್ಲ. ಅದರ ಬದಲು ರಾಜ್ಯದ ಹಲವೆಡೆ ನದಿ ನೀರು, ನಾಲೆ, ಕಾಲುವೆಗಳಿಗೆ ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿ, ನೀರು ಎತ್ತಲಾಗುತ್ತಿದೆ. ಇನ್ನೂ ಕೆಲವು ಕಡೆ ಕೃತಕ ಕೆರೆಗಳನ್ನು ನಿರ್ಮಿಸಿಕೊಂಡು, ಅಲ್ಲಿ ನಾಲೆಗಳಿಂದ ಅಕ್ರಮವಾಗಿ ಪಂಪ್ ಮಾಡಿ, ನೀರು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ನಾಲೆ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಹೀಗಾದರೆ ಉದ್ಧಾರ ಆಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಇಂಥ ಅಕ್ರಮ ನೀರು ಸಂಪರ್ಕಗಳನ್ನು ಪತ್ತೆ ಮಾಡಿ, ತಪ್ಪಿತಸ್ಥರ ವಿರುದ್ಧ ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ನಿರ್ಣಯಿಸಲು ಸಮಿತಿ ರಚಿಸಲಾಗುವುದು ಎಂದು ಸಚಿವ ಶಿವಕುಮಾರ್ ತಿಳಿಸಿದರು.

ಮಹಾದಾಯಿ, ಕೃಷ್ಣ, ಕಾವೇರಿ ಸೇರಿದಂತೆ ಹಲವು ನದಿ ನೀರಿನ ಹಂಚಿಕೆ ವಿಚಾರದಲ್ಲಿ ಅಂತಾರಾಜ್ಯ ಜಗಳ ಚಾಲ್ತಿಯಲ್ಲಿದೆ. ಮೇಕೆದಾಟು ಹೊಸ ಸೇರ್ಪಡೆ. ಅಂತಾರಾಜ್ಯ ನದಿ ನೀರು ನೀರು ಹಂಚಿಕೆ ಹಾಗೂ ಬಳಕೆ ಪ್ರಮಾಣ ನಿಗದಿ ಕೀಲಿಕೈ ಕೇಂದ್ರ ಸರಕಾರದ ಕೈಯಲ್ಲಿದ್ದರೂ ವ್ಯಾಜ್ಯಗಳು ಕಡಿಮೆ ಆಗುತ್ತಿಲ್ಲ. ಮತ್ತೊಬ್ಬರಿಗೆ ಹಾನಿಯಾಗದ ಯೋಜನೆಗಳನ್ನು ನಾವು ಕೈಗೆತ್ತಿಕೊಂಡೂರ ವಿನಾಕಾರಣ ತಗಾದೆ. ದಿನೇ ದಿನೇ ನೀರು ಅಮೂಲ್ಯ ಆಗುತ್ತಿರುವುದರ ಪರಿಣಾಮ ಇದು. ಅದು ಯಾರೇ ಆಗಿರಲಿ, ಜಲಮೂಲ ಹಾಗೂ ನೀರಿನ ಸಂರಕ್ಷಣೆಗೆ ಒತ್ತು ಕೊಟ್ಟರೆ ಪರಾವಲಂಬನೆ ಕಡಿಮೆ ಆಗುತ್ತದೆ. ಕಲಹ ಪರಿಸ್ಥಿತಿಯೂ ಉದ್ಭವಿಸುವುದಿಲ್ಲ. ಹೀಗಾಗಿ ಜಲ ಸಂರಕ್ಷಣೆಗೆ ನಾವು-ನೀವೆಲ್ಲರೂ ಸೇರಿ ಶ್ರಮಿಸಬೇಕು. ಬರೀ ಸರಕಾರದ ಮೇಲೆ ಜವಾಬ್ದಾರಿ ಹೊರಿಸಿ ಸುಮ್ಮನಾಗಬಾರದು ಎಂದು ಕಿವಿಮಾತು ಹೇಳಿದರು.

ನೀರು ಸದ್ಬಳಕೆ ವಿಚಾರದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜನತೆಯನ್ನು ನೋಡಿ ಕಲಿಯುವುದು ಸಾಕಷ್ಟಿದೆ. 2000 ಅಡಿಗಿಂತಲೂ ಕೆಳಗೆ ನೀರಿದ್ದರೂ ಹನಿ ನೀರಾವರಿ ಮೂಲಕ ಹಣ್ಣು-ತರಕಾರಿ ಬೆಳೆದು, ಇಡೀ ಬೆಂಗಳೂರಿಗೆ ಸರಬರಾಜು ಮಾಡುತ್ತಾ ಅನ್ಯರಿಗೆ ಮಾದರಿಯಾಗಿದ್ದಾರೆ. ರೇಷ್ಮೆ ಬೆಳೆಯಲ್ಲೂ ಅವರು ಮುಂದಿದ್ದಾರೆ. ಮಿಲ್ಕು ಮತ್ತು ಸಿಲ್ಕು ಉತ್ಪಾದನೆ ಎರಡರಲ್ಲೂ ಸಾಧನೆ ಮಾಡಿದ್ದಾರೆ. ಕೋಲಾರಕ್ಕಿಂತಲೂ ಹೆಚ್ಚು ಮಟ್ಟದಲ್ಲಿ ಅಂತರ್ಜಲ ಪ್ರಮಾಣ ಹೊಂದಿರುವ ಕಡೆ ಇದು ಕಂಡು ಬರದಿರಲು ಶ್ರಮದ ಕೊರತೆಯೇ ಕಾರಣ ಎಂದು ವಿಶ್ಲೇಷಿಸಿದರು.

ನಮ್ಮ ರಾಜ್ಯದ ನದಿಗಳ ನೀರನ್ನು ನಾವೇ ಬಳಕೆ ಮಾಡಿಕೊಳ್ಳುವ ಸಂಬಂಧ ಆಂತರಿಕ ಜಗಳ ನಡೆದರೂ, ಎತ್ತಿನಹೊಳೆ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಕೋಲಾರ, ತುಮಕೂರು, ಚಿಕ್ಕಬಳ್ಳಾಪುರದಂಥ ಬರಪೀಡಿತ ಜಿಲ್ಲೆಗಳಿಗೆ ನೀರುಣಿಸುವ ಸದುದ್ದೇಶದ ಇಂಥ ಯೋಜನೆಗಳ ಜಾರಿಗೆ ಎಲ್ಲರೂ ಸಹಕರಿಸಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಇವತ್ತು ಲೀಟರ್ ಹಾಲಿನಷ್ಟೇ ಲೀಟರ್ ನೀರಿನ ದರ ಕೂಡ ಇದೆ. ನೀರಿನ ಮೌಲ್ಯ ಚಿಮ್ಮುತ್ತಿರುವುದರ ಪ್ರತೀಕ ಇದು. ಹಳ್ಳಿಗಾಡಿನಲ್ಲೂ ಬಾಟಲಿ ನೀರು ಬಳಸುವ ಸಂಪ್ರದಾಯ ಹೆಚ್ಚಾಗುತ್ತಿದೆ. ಇದು ಖುಷಿಪಡುವ ವಿಚಾರವಲ್ಲ. ಹಿಂದೆ ಹಳ್ಳಿಗಳಲ್ಲಿ ಜನ-ಜಾನುವಾರುಗಳ ಕುಡಿಯುವ ಉದ್ದೇಶಕ್ಕೆ, ಬಟ್ಟೆ, ಪಾತ್ರೆ ತೊಳೆಯಲು, ಸಣ್ಣ ಪ್ರಮಾಣದ ಕೃಷಿ-ತೋಟಗಾರಿಕೆಗೆ ನೀರು ಹುಡುಕಿಕೊಂಡು ಕೆರೆ-ಕಟ್ಟೆಗಳಿಗೆ ಹೋಗುವ ಪರಿಪಾಠವಿತ್ತು. ಆದರೆ ಇವತ್ತು ಯಾರೂ ಕೆರೆಕಟ್ಟಿಗಳಿಗೆ ಹೋಗುವುದಿಲ್ಲ. ಅನೇಕ ಕೆರೆಕಟ್ಟೆಗಳು ಮಾಯವಾಗಿದ್ದರೆ, ಹೊಳೆ-ಕೊಳ್ಳಗಳಿಂದ ತಾವಿದ್ದಲ್ಲಿಗೆ ಸಿಮೆಂಟ್ ಕಾಲುವೆ, ಕೊಳವೆ ಬಾವಿ, ನಲ್ಲಿಗಳ ಮೂಲಕ ನೀರು ಪೂರೈಸಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸ್ವಾಭಾವಿಕ ಅಂತರ್ಜಲ ಮಟ್ಟ ವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಅಂತರ್ಜಲ ಮಟ್ಟ ವೃದ್ಧಿಗೆ ಹೆಚ್ಚು-ಹೆಚ್ಚು ಇಂಗು ಗುಂಡಿ, ಚೆಕ್ ಡ್ಯಾಂ ನಿರ್ಮಾಣಕ್ಕೆ ರೈತರು ಮುಂದಾಗಬೇಕು. ಅವರಲ್ಲಿ ನೀರಿನ ಸಂರಕ್ಷಣೆ ಮತ್ತು ಬಳಕೆ ಬಗ್ಗೆ ಅರಿವು ಮೂಡಿಸಲು ಪ್ರತಿತಾಲೂಕಿನಲ್ಲೂ ಇಂಥದ್ದೇ ಕಾರ್ಯಾಗಾರ ಆಯೋಜಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೀರಿಲ್ಲದಿದ್ದರೆ ಎಲ್ಲವೂ ಶೂನ್ಯ. ಏನೇನೂ ಮಾಡಲು ಸಾಧ್ಯವಿಲ್ಲ. ಜಲಸಂರಕ್ಷಣೆ ಬಗ್ಗೆ ಜನತೆಗೆ ಅರಿವು ಮೂಡಿಸಲು ರಾಷ್ಟ್ರೀಯ ಜಲ ಮಿಷನ್ ಈ ಹಿಂದೆ ಉತ್ತರ ಪ್ರದೇಶ ದ ಬಂದೆಲ್ ಖಂಡ್ ನಲ್ಲಿ ಇಂಥದ್ದೇ ಕಾರ್ಯಾಗಾರ ಹಮ್ಮಿಕೊಂಡಿತ್ತು. ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ ಎಂದು ಕೇಂದ್ರ ಜಲ ಮಿಷನ್ ನಿರ್ದೇಶಕ ನಿತೀಶ್ವರ್ ಕುಮಾರ್‌ ಹೇಳಿದರು.

ಕಾರ್ಯಾಗಾರಕ್ಕೆ ಮೊದಲು ವಸ್ತುಪ್ರದರ್ಶನವನ್ನು ಸಚಿವರು ಉದ್ಘಾಟಿಸಿದರು. ಎತ್ತಿನಹೊಳೆ ಯೋಜನೆ ಪ್ರತಿರೂಪ ಎಲ್ಲರ ಕಣ್ಮನ ಸೆಳೆಯಿತು.

ಶಾಸಕ ಅಜೇಯ್ ಸಿಂಗ್ ಭಾಗವಹಿಸಿದ್ದರು. ಕೃಷಿ ವಿವಿ ಉಪಕುಲಪತಿ ಡಾ.ರಾಜೇಂದ್ರ ಪ್ರಸಾದ್ ಮಾತನಾಡಿದರು. ವಿಶ್ವೇಶ್ವರಯ್ಯ ಜಲ ನಿಗಮ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್,  ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಮತ್ತಿತತರು ಉಪಸ್ಥಿತರಿದ್ದರು.

ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿ 6 ಜಿಲ್ಲೆಗಳ 750 ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Leave a Reply