ಹಲ್ಲೆ ಪ್ರಕರಣ: ಮೌನ ಮುರಿದ ಕಂಪ್ಲಿ ಶಾಸಕ ಗಣೇಶ್ ಕ್ಷೇತ್ರದ ಜನರಿಗೆ ಮಾಡಿಕೊಂಡ ಮನವಿ ಏನು?

ಡಿಜಿಟಲ್ ಕನ್ನಡ ಟೀಮ್:

ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಕಂಪ್ಲಿ ಶಾಸಕ ಗಣೇಶ್ ಕೊನೆಗೂ ಪ್ರಕರಣದ ಕುರಿತು ಮೌನ ಮುರಿದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿರುವ ಗಣೇಶ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕ್ಷೇತ್ರದ ಮತದಾರರಿಗೆ ಬಹಿರಂಗ ಪತ್ರ ಬರೆದು ಘಟನೆಯನ್ನು ವಿವರಿಸಿದ್ದಾರೆ. ‘ಆನಂದ್ ಸಿಂಗ್ ತಮ್ಮ ಮೇಲೆ ಕೈ ಮಾಡಿದ್ದಕ್ಕೆ ನಾನು ಪ್ರತಿಯಾಗಿ ದಾಳಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಘಟನೆಯ ಕುರಿತು ವಿವರಣೆ ನೀಡಿರುವ ಗಣೇಶ್ ಹೇಳಿದ್ದಿಷ್ಟು…

‘ಕಂಪ್ಲಿ ವಿಧಾನಸಭಾ ಕ್ಷೇತ್ರದ ಜನತೆಗೆ ನನ್ನ ನಮಸ್ಕಾರಗಳು..

ಈಗಲ್ಟನ್ ರೆಸಾರ್ಟ್​ನಲ್ಲಿ ನಾನು ಹಾಗೂ ಆನಂದ್ ಸಿಂಗ್ ಪಾರ್ಟಿ ಮಾಡಿದ್ದು ನಿಜಾನೇ. ಆದರೆ, ಅಂದು ನಡೆದಿದ್ದ ಘಟನೆ? ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸುಳ್ಳು. ಪಾರ್ಟಿ ಮುಗಿದ ನಂತರ ಆನಂದ್ ಸಿಂಗ್ ಅವರೇ ನನ್ನನ್ನು ರೂಮ್​ಗೆ ಕರೆದುಕೊಂಡು ಹೋದರು. ರಾತ್ರಿ ಸುಮಾರು 11:00 ಘಂಟೆಯಿಂದ 2:30 ರವೆರಗೂ ಕೂರಿಸಿ ನನ್ನೊಂದಿಗೆ ಮಾತನಾಡಿದರು.

ನೀನೊಬ್ಬ ಸಾಮಾನ್ಯ ವ್ಯಕ್ತಿ. ನೀನು ಶಾಸಕ ಆಗಿದ್ದು ನನಗೆ ಸಹಿಸಲಾಗುತ್ತಿಲ್ಲ. ನನ್ನ ಮುಂದೆಯೇ ಕೂರುವಷ್ಟು ಧೈರ್ಯ ಬಂತ ಮಗನೇ. ಕಳೆದ ಚುನಾವಣೆಯಲ್ಲಿ ನೀನು ಪಕ್ಷೇತರನಾಗಿ ನಿಂತು ಸೋಲಲು ನಾನೇ ಕಾರಣ. ನಿನ್ನನ್ನು ಸೋಲಿಸಿದ್ದು ನಾನೇ. 81 ವರ್ಷದ ರೆಹಮಾನ್ ಸಾಬ್​​ನನ್ನು ನಿನ್ನ ಅಪ್ಪನ ಬಳಿ ಕಳಿಹಿಸಿ, ನಿಮ್ಮ ಮಗನನ್ನು ಪಕ್ಷೇತರರಾಗಿ ನಿಲ್ಲಿಸಿ ಎಂದು ಹೇಳಿದ್ದು ನಾನೇ. ನೀನು ಸೋಲಲು, ಆರ್ಥಿಕವಾಗಿ ಕುಗ್ಗಿ ಇನ್ನೊಬ್ಬರ ಬಳಿ ಭಿಕ್ಷೆ ಬೇಡುವಂತೆ ಮಾಡುವ ಹಾಗೇ ಮಾಡಿದೆ ಎಂದರು.

ಇ. ತುಕಾರಂನನ್ನು ಸಚಿವನನ್ನಾಗಿಸಲು ದೆಹಲಿಗೆ ಹೋಗುತ್ತೀಯ ಸೂ.. ಮ.. ಎಂದು ನಿಂದಿಸಿದರು. ಅಲ್ಲದೇ ಎಂ.ಪಿ ರವೀಂದ್ರರ ಬಳಿ 2 ಎಕರೆ ಜಾಗ ತೆಗೆದುಕೊಂಡು ಹಗರಿಬೊಮ್ಮನಹಳ್ಳಿಯಲ್ಲಿ ಕಚೇರಿ ಮಾಡಿದ್ದೆ. ಅಲ್ಲಿಯೇ ಕೂತು ಭೀಮಾ ನಾಯ್ಕ್​​ನನ್ನು ಸೋಲಿಸಲು ಪ್ರಯತ್ನಿದೆ. ಆದರೆ, ಸೋಲಿಸಲಾಗಲಿಲ್ಲ. ಈಗ ಕಂಪ್ಲಿಯಲ್ಲಿಯೇ ಕಚೇರಿ ತೆಗೆದು ನಿನ್ನನ್ನು ಮುಗಿಸುತ್ತೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ನನ್ನ ವಿರುದ್ಧ ಇದ್ದರೂ, ಒಂದೇ ಒಂದು ಕೂದಲು ಕೀಳಲಾಗಲಿಲ್ಲ. ಅವರ ಮುಂದೆಯೇ ಗೆದ್ದು ಬಂದೆ. ನೀನು ಕೀಳು ಜಾತಿಗೆ ಸೇರಿದವನು ಎಂದು ಅವಾಚ್ಯ ಶಬ್ಧ ಬಳಸಿದರು.

ಕೆಳಗೆ ಕೂತಿದ್ದ ನನ್ನ ಎದೆಗೆ ಜೋರಾಗಿ ಕಾಲಿನಿಂದ ಒದ್ದರು. ಬಳಿಕ ನಾನು ಅಲ್ಲಿಂದ ರೂಮಿಗೆ ಹೊರಟೆ. ಮತ್ತೆ ಆನಂದ್​​ ಸಿಂಗ್​​ ನನ್ನ ರೂಮಿನ ಬಳಿ ಬಂದು, ಅಲ್ಲಿದ್ದ ಪಾಟ್​​ ಹೊಡೆದು ಹಾಕಿದರು. ಬಾ ಸೂ.. ಮ.. ಭೀಮಾ ನಾಯ್ಕ್​​ ರೂಮ್​​ ತೋರಿಸು ಬಾ ಎಂದರು. ಎಲ್ಲರ ಮುಂದೆಯೂ ಸೂ.. ಮ.. ಎಂದು ನಿಂದಿಸಿದರು. ಭೀಮಾ ನಾಯ್ಕ್​​ನನ್ನು ಬಿಡಲ್ಲ. ನನ್ನ ಬಲವತವಾಗಿ ಭೀಮಾ ನಾಯ್ಕ್​​ ರೂಮಿಗೆ ಕರೆದುಕೊಂಡು ಹೋದರು. ಅಲ್ಲಿ ಭೀಮಾನನ್ನು ಕೂಡ ಸೂ.. ಮ.. ಎಂದು ಹಲ್ಲೆ ನಡೆಸಿದರು. ಸಿಎಲ್​​ಪಿ ಸಭೆಯಲ್ಲಿ ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕೆಂದು ತಾಖೀತು ಮಾಡಿದರು.

ಆನಂದ್​​ ಸಿಂಗ್​​​ ಭೀಮಾ ಮೇಲೆ ಹಲ್ಲೆ ನಡೆಸಿದಾಗ ಮಧ್ಯಪ್ರವೇಶಿಸಿ ಸಾಂತ್ವನ ಮಾಡಿದೆ. ಬಳಿಕ ಮತ್ತೆ ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ತಾಯಿ, ಅಕ್ಕ ಮತ್ತು ಕುಟುಂಬದ ಬಗ್ಗೆಯೂ ಬೈದರು. ಜಾತಿ ನಿಂದನೆ ಮಾಡಿದರು. ನನ್ನ ಶರ್ಟ್ ಹರಿದು, ನನ್ನ ಬಲಗೈ ಹೆಬ್ಬೆರಳನ್ನು ಮುರಿದರು. ಅಲ್ಲದೇ ಲೈಟ್​​ ತಗೆದುಕೊಂಡು ನನ್ನ ಬೆನ್ನಿಗೆ ಕೂಡ ಹೊಡೆದರು. ಅವರು ನನ್ನ ಮೇಲೆ ಮೊದಲು ಕೈ ಎತ್ತಿದಕ್ಕೆ, ನಾನು ಅವರ ಮೇಲೆ ಕೈ ಎತ್ತಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ಭೀಮಾ ನಾಯ್ಕ, ವಿಶ್ವ ಹಾಗೂ ಶರಣಪ್ಪ.

ಈ ಎಲ್ಲಾ ವಿಷಯವೂ ಮುಖಂಡರಿಗೆ ತಿಳಿಯಿತು. ನಿಮ್ಮಿಬ್ಬರದು ತಪ್ಪಿದೆ ಎಂದರು. ನಿಮ್ಮಿಂದ ಪಕ್ಷಕ್ಕೆ ಮುಜುಗರ ಆಗಿದೆ ಎಂದು ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಿದರು. ನನ್ನ ಜಾತಿ ಬಗ್ಗೆ ಕೆಟ್ಟದಾಗಿ ಮಾತಾಡಿದ್ದ ಮಾತ್ರಕ್ಕೆ ಆನಂದ ಸಿಂಗ್​​ಗೆ ಹೊಡೆಯ ಬೇಕು ಎಂಬ ಉದ್ದೇಶ ನನ್ನಲ್ಲಿರಲಿಲ್ಲ. ಹಾಗೇ ಇದ್ದಲ್ಲಿ, ಅವರ ರೂಮಿನಲ್ಲಿಯೇ ಹಲ್ಲೆ ಮಾಡುತ್ತಿದ್ದೆ. ನನ್ನ ರಾಜಕೀಯವಾಗಿ ಮುಗಿಸಲು ಆನಂದ್ ಸಿಂಗ್ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಹಾಗೂ ನನ್ನ ಕುಟುಂಬದವರಿಗೆ ಜೀವ ಬೆದರಿಕೆಗಳು ಬರುತ್ತಿವೆ. ಕಂಪ್ಲಿ ಕ್ಷೇತ್ರದ ಜನರಿಗೆ ನನ್ನ ಮನವಿ. ಕಂಪ್ಲಿ ಕ್ಷೇತ್ರದ ಜನ ಸುಳ್ಳು ಸುದ್ದಿಗಳನ್ನು ನಂಬಬಾರದು. ನಾನು ಕಂಪ್ಲಿ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ. ಕಂಪ್ಲಿ ಕಲ್ಯಾಣವೇ ನನ್ನ ಗುರಿ.’

ಇಂತಿ ನಿಮ್ಮ ವಿಶ್ವಾಸಿ ಜೆ.ಎನ್​​ ಗಣೇಶ್​.

Leave a Reply