ವಿಶ್ವರತ್ನನ ಮುಡಿಗೆ ಸೇರದೆ ಬಡವಾದ ಭಾರತ ರತ್ನ!

ಡಿಜಿಟಲ್ ಕನ್ನಡ ಟೀಮ್:

ಪ್ರಸಕ್ತ ಸಾಲಿನ ಭಾರತ ರತ್ನ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ. ಈ ವರ್ಷ ಮೂವರು ಸಾಧಕರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ದಿವಂಗತ ಗಾಯಕ ಭುಪೇನ್ ಹಜಾರಿಕ ಹಾಗೂ ಸಾಮಾಜಿಕ ಹೋರಾಟಗಾರ ನಾನಾಜಿ ದೇಶಮುಖ್ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿ ದೊರೆತಿದೆ.

ಈ ಬಾರಿ ಪ್ರಶಸ್ತಿ ಪಟ್ಟಿ ಕುರಿತಾಗಿ ಕೋಟ್ಯಂತರ ಕನ್ನಡಿಗರ ನಿರೀಕ್ಷೆ ಮೂಡಿತ್ತು. ಕಾರಣ ಭಕ್ತರ ಪಾಲಿನ ನಡೆದಾಡುವ ದೇವರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಈ ಪ್ರಶಸ್ತಿ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ.

ಪ್ರಶಸ್ತಿ ಪಡೆದಿರುವ ಮೂವರೂ ಕೂಡ ದೊಡ್ಡ ಸಾಧಕರೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಶಿವಕುಮಾರ ಸ್ವಾಮೀಜಿ ಅವರಿಗೆ ಈ ಗೌರವ ನೀಡಲು ಕೇಂದ್ರ ವಿಫಲವಾಗಿದೆ. ಸ್ವಾಮೀಜಿಗಳು ಎಂದಿಗೂ ಇಂತಹ ಗೌರವವನ್ನು ನಿರೀಕ್ಷೀಸಿದವರಲ್ಲ. ಆದರೆ ಇಂತಹ ಮಹಾನ್ ಚೇತನರ ಮುಡಿಗೆ ಸೇರದ ಭಾರತ ರತ್ನ ಪ್ರಶಸ್ತಿ ಇಂದು ನಿಜಕ್ಕೂ ಬಡವಾಗಿದೆ.

ಇನ್ನು ಈ ಬಾರಿಯ ಪ್ರಶಸ್ತಿ ಪುರಸ್ಕೃತರ ಆಯ್ಕೆಯಲ್ಲಿ ಕೇಂದ್ರದ ಲೆಕ್ಕಾಚಾರ ದೊಡ್ಡದಾಗಿಯೇ ಇದೇ. ಕಾಂಗ್ರೆಸ್ ಕಟ್ಟಾಳುವಾಗಿ ಜೀವನ ಸವೆದ ಪ್ರಣಬ್ ಮುಖರ್ಜಿ, ಪಶ್ಚಿಮ ಬಂಗಾಳದ ಸಂಗೀತ ಸಾಧಕ ಭುಪೆನ್ ಹಜಾರಿಕ ಹಾಗೂ ಆರ್ ಎಸ್ ಎಸ್ ಹಿನ್ನೆಲೆ ಇರುವ ಸಾಮಾಜಿಕ ಸುಧಾರಕ ನಾನಾಜಿ ದೇಶಮುಖ್ ಅವರಿಗೆ ಈ ಬಾರಿಯ ಪ್ರಶಸ್ತಿ ಸಿಕ್ಕಿದೆ. ಇದರಿಂದ ಮೋದಿ ತಾನು ಪಕ್ಷಾತೀತ ನಾಯಕ ಎಂಬ ಸಂದೇಶ ರವಾನಿಸಿದ್ದಾರೆ. ಇನ್ನು ಪಶ್ಚಿಮ ಬಂಗಾಳ ಸಾಧಕನನ್ನು ಗುರುತಿಸಿ ಪೂರ್ವ ಭಾಗದ ರಾಜ್ಯಗಳಿಗೆ ಮನ್ನಣೆ ನೀಡಿದೆ. ಇನ್ನು ನಾನಾಜಿ ದೇಶಮುಖ್ ಅವರಿಗೆ ಈ ಗೌರವ ನೀಡಿ ತನ್ನ ಮೂಲ ಸಂಘಟನೆ ಆರ್ ಎಸ್ ಎಸ್ ಗೂ ಪ್ರಾಶಸ್ತ್ಯ ನೀಡಿದ್ದಾರೆ.

ಭಾರತದ ಅತ್ಯುನ್ನತ ನಾಗರಿಕ ಗೌರವಕ್ಕೆ ಭಾಜನರಾದವರು

ಪ್ರಣಬ್​ ಮುಖರ್ಜಿ
ಕಾಂಗ್ರೆಸ್​ ನಾಯಕ ಹಾಗೂ ಮಾಜಿ ರಾಷ್ಟ್ರಪತಿ ಡಿಸೆಂಬರ್​ 11, 1935 ಜನಿಸಿದ್ದು, ವಿದ್ಯಾರ್ಥಿ ಹೋರಾಟಗಲ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು. ಬಳಿಕ ಕಾಂಗ್ರೆಸ್​ ಸೇರಿ, 2009 ರಿಂದ 2012 ರವರೆಗೆ ಕೇಂದ್ರದಲ್ಲಿ ಆರ್ಥಿಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ರು. ಬಳಿಕ 2012 ರಿಂದ 2017 ರವರೆಗೆ ಭಾರತದ ದೇಶದ 13 ನೇ ರಾಷ್ಟ್ರಪತಿ ಕಾರ್ಯನಿರ್ವಹಿಸಿದ್ರು. ಕಾಂಗ್ರೆಸ್​ ಪಾಲಿನ ಟ್ರಬಲ್​ ಶೂಟರ್​ ಎಂದೇ ಪ್ರಣಬ್​ ಮುಖರ್ಜಿ ಖ್ಯಾತಿ ಪಡೆದಿದ್ರು.

ನಾನಾಜಿ ದೇಶಮುಖ್​
ಮಹಾರಾಷ್ಟ್ರ ಮೂಲದ ಸಾಮಾಜಿಕ ಕಾರ್ಯಕರ್ತ. ಅಕ್ಟೋಬರ್​ 10,1916 ರಂದು ಜನಿಸಿದ್ದು, ಫೆಬ್ರವರಿ 27, 2010ರಲ್ಲಿ ನಿಧನರಾದರು. ಶಿಕ್ಷಣ, ಆರೋಗ್ಯ, ಗ್ರಾಮೀಣ ಸ್ವಾವಲಂಬಿ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿರುವ ನಾನಾಜಿ ದೇಶಮುಖ್​, ಭಾರತೀಯ ಜನಸಂಘದ ಸದಸ್ಯರಾಗಿದ್ರು. ಇವ್ರಿಗೆ ಕೇಂದ್ರ ಸರ್ಕಾರದಿಂದ ಪದ್ಮವಿಭೂಷಣ ಗೌರವ ಸಂದಿತ್ತು. 1999 ರಿಂದ 2005 ರವರೆಗೆ ರಾಜ್ಯಸಭಾ ಸದಸ್ಯರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.

ಭುಪೇನ್ ಹಜಾರಿಕಾ
ಅಸ್ಸಾಂ ಮೂಲದ ಗಾಯಕ, ಸಂಗೀತ ನಿರ್ದೇಶಕ , ಕವಿ, ಸಿನಿಮಾ ನಿರ್ದೇಶಕ. ಆಗಸ್ಟ್​ 8 , 1926 ರಂದು ಜನಿಸಿದ್ರು. ನವೆಂಬರ್​ 5, 2011ರಲ್ಲಿ ದೈವಾಧೀನರಾದರು. ಸುಧಾಕಾಂತ ಎಂಬ ನಾಮಧೇಯದಿಂದಲೇ ಪ್ರಖ್ಯಾತಿ ಪಡೆದಿದ್ದ ಭುಪೇನ್​ ಹಜಾರಿಕಾ, ಅಸ್ಸಾಂ, ಬೆಂಗಾಳಿ, ಹಿಂದಿ ಭಾಷೆಯಲ್ಲಿ ಹೆಚ್ಚು ಗೀತೆ ಹಾಡಿದ್ದು, ಈ ಹಿಂದೆ ಪದ್ಮಶ್ರೀ , ಪದ್ಮಭೂಷಣ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದರು. ಜೊತೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ, ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ರಾಷ್ಟ್ರಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಕೂಡ ಪಡೆದಿದ್ದರು.

Leave a Reply