ರೋಹಿತ್ ಟೀಮ್ ಇಂಡಿಯಾ ನಾಯಕ! ಕಿವೀಸ್ ಸರಣಿಯಿಂದ ಕೊಹ್ಲಿ ಅರ್ಧದಲ್ಲೇ ಹಿಂದೆ ಸರಿಯೋದ್ಯಾಕೆ?

ಡಿಜಿಟಲ್ ಕನ್ನಡ ಟೀಮ್

ಆಸ್ಟ್ರೇಲಿಯಾ ಪ್ರವಾಸದಲ್ಲಿ ಐತಿಹಾಸಿಕ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಗೆದ್ದಿದ್ದ ಟೀಮ್ ಇಂಡಿಯಾ ಈಗ ನ್ಯೂಜಿಲೆಂಡ್ ಪ್ರವಾಸದ ಮೊದಲ ಏಕದಿನ ಪಂದ್ಯವನ್ನು ಗೆದ್ದು ತನ್ನ ಗೆಲುವಿನ ಯಾತ್ರೆ ಮುಂದುವರಿಸಿದೆ. ಆದರೆ ದಿಢೀರ್ ಬೆಳವಣಿಗೆಯಲ್ಲಿ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಎರಡು ಏಕದಿನ ಹಾಗೂ ಟಿ20 ಸರಣಿಯಿಂದ ಹಿಂದೆ ಸರಿದು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಕೊಹ್ಲಿ ಹೀಗೆ ಸರಣಿಯಿಂದ ಹಿಂದೆ ಸರಿಯಲು ಕಾರಣ ಬಿಸಿಸಿಐ ಕೊಹ್ಲಿಗೆ ವಿಶ್ರಾಂತಿ ನೀಡಲು ನಿರ್ಧರಿಸಿರುವುದು. ಹೌದು, ಮುಂದಿನ ದಿನಗಳಲ್ಲಿ ಅಂದರೆ ಜೂನ್ ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿ ಮುಗಿಯುವವರೆಗೂ ಟೀಮ್ ಇಂಡಿಯಾ ಆಟಗಾರರ ವೇಳಾಪಟ್ಟಿ ದೊಡ್ಡದಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ 4 ಟೆಸ್ಟ್ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಿದ್ದು, ನ್ಯೂಜಿಲೆಂಡ್ ವಿರುದ್ಧ 5 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

ಈ ಸರಣಿ ಮುಗಿಸಿ ತವರಿಗೆ ಮರಳುತ್ತಿದ್ದಂತೆ ಆಸ್ಟ್ರೇಲಿಯಾ ಭಾರತ ಪ್ರವಾಸ ಮಾಡಲಿದ್ದು, 2 ಟಿ20 ಹಾಗೂ 5 ಏಕದಿನ ಪಂದ್ಯಗಳ ಸರಣಿ ಎದುರಾಗಲಿದೆ. ಈ ಸರಣಿ ಮಾರ್ಚ್ 13ಕ್ಕೆ ಮುಕ್ತಾಯವಾದರೆ ಮಾರ್ಚ್ 23ರಿಂದ ಸುಮಾರು ಒಂದೂವರೆ ತಿಂಗಳು ಐಪಿಎಲ್ ನಡೆಯಲಿದೆ. ಮೇ 15ರ ಆಸುಪಾಸಿನಲ್ಲಿ ಐಪಿಎಲ್ ಮುಗಿದರೆ ಮೇ 30ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಸಮರ ಶುರು. ಸರಣಿಗಳ ಮಧ್ಯೆ ಸಿಗುವ ಬೆರಳೆಣಿಕೆ ದಿನಗಳಲ್ಲಿ ಪ್ರಾಕ್ಟೀಸ್ ಸೆಷನ್ ಗಳಲ್ಲಿ ಭಾಗವಹಿಸಬೇಕು. ಹೀಗೆ ಮುಂದಿನ ಆರು ತಿಂಗಳು ಆಟಗಾರರಿಗೆ ಬಿಡುವಿನ ಮಾತೇ ಇಲ್ಲ. ಈ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

Leave a Reply