ಡೈಗ್ನೊಸ್ಟಿಕ್ ಲ್ಯಾಪ್ರೊಸ್ಕೋಪಿ ಪರೀಕ್ಷೆಯ ಅಗತ್ಯವೇನು?

ಡಾ.ಬಿ.ರಮೇಶ್

ಡೈಗ್ನೊಸ್ಟಿಕ್ ಲ್ಯಾಪ್ರೊಸ್ಕೋಪಿ

ಹೊಟ್ಟೆ ಹಾಗೂ ಕಿಬ್ಬೊಟ್ಟೆ ಭಾಗದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳಲು ತಜ್ಞ ವೈದ್ಯರು ಡೈಗ್ನೊಸ್ಟಿಕ್ ಲ್ಯಾಪ್ರೊಸ್ಕೋಪಿಯ ನೆರವು ಪಡೆದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದೊಂದು ಸುರಕ್ಷಿತ, ಕಡಿಮೆ ಗಾಯವುಂಟು ಮಾಡುವ ಪರೀಕ್ಷಾ ವಿಧಾನವಾಗಿದೆ.

ಈ ಪರೀಕ್ಷೆಗೆ ಶಿಫಾರಸು ಏಕೆ?

ರೋಗಿಯನ್ನು ಅಡ್ಮಿಟ್ ಮಾಡಿಕೊಂಡು ಇಲ್ಲವೆ ಹೊರರೋಗಿಯಾಗಿ ಅನಸ್ಥೇಶಿಯಾ ನೀಡುವುದರ ಮೂಲಕ ಈ ಪರೀಕ್ಷೆಯನ್ನು ಮಾಡಬಹುದು. ಅದನ್ನು ಕೆಳಕಂಡ ವಿಧಾನದಲ್ಲಿ ಮಾಡಲಾಗುತ್ತದೆ:

 • ಹೊಕ್ಕಳಿನ ಕೆಳಭಾಗದಲ್ಲಿ ಒಂದು ಸಣ್ಣ ರಂಧ್ರ (5 ಮಿ.ಮೀ) ಮಾಡುತ್ತಾರೆ.
 • ಒಂದು ಸಣ್ಣ ಸೂಜಿ/ನಳಿಕೆಯನ್ನು ಗ್ಯಾಸ್’ಗೆ ಸಂಪರ್ಕಿಸಿ ಹೊಟ್ಟೆಯ ಒಳಭಾಗದಲ್ಲಿ ತೂರಿಸಿ, ಕಾರ್ಬನ್ ಡೈ ಆಕ್ಸೈಡ್’ನ್ನು ಬಿಡುಗಡೆ ಮಾಡಲಾಗುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಭರ್ತಿಯಾಗಿ ಒಳಭಾಗದ ಸಂಪೂರ್ಣ ಚಿತ್ರಣ ವೈದ್ಯರಿಗೆ ಗೊತ್ತಾಗುತ್ತದೆ.
 • ರಂಧ್ರದ ಮೂಲಕ ವಿಡಿಯೊ ಕ್ಯಾಮೆರಾ (ಲ್ಯಾಪ್ರೊಸ್ಕೋಪ್)ವನ್ನು ಒಳಗೆ ಕಳಿಸುತ್ತಾರೆ. ಬಳಿಕ ಹೊಟ್ಟೆ ಹಾಗೂ ಕಿಬ್ಬೊಟ್ಟೆಯಲ್ಲಿ ಸ್ಥಿತಿ ಹೇಗಿದೆ ಎನ್ನುವುದು ವೈದ್ಯರಿಗೆ ಸ್ಕ್ರೀನ್ ಮೇಲೆ ಕಂಡುಬರುತ್ತದೆ. ಇನ್ನೂ ಎರಡು ಮೂರು ರಂಧ್ರಗಳ ಮೂಲಕ ಒಳಭಾಗದಲ್ಲಿ ಮತ್ತಷ್ಟು ಉಪಕರಣಗಳನ್ನು ಕಳಿಸಿ ಸ್ಪಷ್ಟವಾದ ಚಿತ್ರಣವನ್ನು ಕಾಣಬಹುದು.
 • ಸಂತಾನಹೀನ ಮಹಿಳೆಯ ಅಂಡನಾಳಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಕಂಡುಕೊಳ್ಳಲು ಒಂದು ಬಗೆಯ ಬಣ್ಣ(ಡೈ)ವನ್ನು ಎರಡೂ ಗರ್ಭನಾಳಗಳ ಮೂಲಕ ಹಾಯಿಸಿ ನೋಡಲಾಗುತ್ತದೆ.
 • ಪರೀಕ್ಷೆಯ ಬಳಿಕ ಗ್ಯಾಸ್, ಲ್ಯಾಪ್ರೊಸ್ಕೋಪ್ ಮತ್ತು ಇತರೆ ಉಪಕರಣಗಳನ್ನು ಹೊರತೆಗೆಯಲಾಗುತ್ತದೆ. ಬಳಿಕ ರಂಧ್ರ ಮಾಡಿದ ಜಾಗಕ್ಕೆ ಬ್ಯಾಂಡೇಜ್ ಹಾಕಲಾಗುತ್ತದೆ.

ಪರೀಕ್ಷೆಯ ಸಿದ್ಧತೆ ಹೇಗೆ?

ಮುಂಜಾನೆ ಬಂದು ಸಂಜೆ ಮನೆಗೆ ಹೋಗುವ ಒಂದು ದಿನದ ಪ್ರಕ್ರಿಯೆಯಿದು.  ಹಿಂದಿನ ರಾತ್ರಿ ಯಾವುದೇ ಆಹಾರ ಪಾನೀಯ ಸೇವಿಸಿರಬಾರದು. ವೈದ್ಯರ ಅನುಮತಿ ಇಲ್ಲದೆ ಯಾವುದೇ ಔಷಧಿ – ಮಾತ್ರೆ ಕೂಡ ಸೇವಿಸಿರಬಾರದು.

ಪರೀಕ್ಷೆಯ ಅನುಭೂತಿ ಹೇಗೆ?

ಅನಸ್ಥೇಶಿಯಾ ಕೊಟ್ಟು ಪರೀಕ್ಷೆ ನಡೆಸುವುದರಿಂದ ಯಾವುದೇ ನೋವು ಅನಿಸುವುದಿಲ್ಲ. ಪರೀಕ್ಷೆಯ ಸಂದರ್ಭದಲ್ಲಿ ಹೊಟ್ಟೆಯ ಒಳಭಾಗದಲ್ಲಿ ಕಾರ್ಬನ್ ಡೈ ಆಕ್ಸೈಡ್ ಗ್ಯಾಸ್ ಬಿಡುವ ಕಾರಣದಿಂದ ಕೆಲವು ದಿನಗಳ ಕಾಲ ಭುಜದ ನರಗಳಲ್ಲಿ ಸ್ವಲ್ಪ ನೋವು ಇರಬಹುದಾಗಿದೆ.

ಪರೀಕ್ಷೆಯ ಶಿಫಾರಸು ಏಕೆ?

ಬಂಜೆತನದ ಸಮಸ್ಯೆ ಇರುವವರಿಗೆ, ಅಂಡನಾಳದ ಸಮಸ್ಯೆ ಇರುವವರಿಗೆ, ಎಂಡೋಮೆಟ್ರಿಯೋಸಿಸ್ ಸಮಸ್ಯೆ, ಆರು ತಿಂಗಳಿಗಿಂತಲೂ ಹೆಚ್ಚು ಕಾಲ ಕೆಳಹೊಟ್ಟೆಯ ನೋವು ಇರುವವರಿಗೆ, ಅಂಡಕೋಶ, ಅಂಡನಾಳದಲ್ಲಿ ಗೆಡ್ಡೆ ಇದೆಯೇ, ಗರ್ಭಕೋಶದಲ್ಲಿ ಅಸಾಮಾನ್ಯ ಸ್ಥಿತಿ ಇದೆಯೇ ಎಂದು ಕಂಡುಕೊಳ್ಳಲು ಈ ಪರೀಕ್ಷೆಗೆ ಶಿಫಾರಸು ಮಾಡಲಾಗುತ್ತದೆ.

ಸಾಮಾನ್ಯ ಪರಿಣಾಮ (Normal Results)

ಹೊಟ್ಟೆಯ ಒಳಗಡೆ ಎಲ್ಲೂ ರಕ್ತ ಸಂಗ್ರಹ ಆಗಿರದೇ ಇದ್ದರೆ, ಅಂಗಗಳು ಪರಸ್ಪರ ಅಂಟಿಕೊಂಡಿರದೇ ಇದ್ದರೆ, ಕ್ಯಾನ್ಸರಿನ ಯಾವುದೇ ಲಕ್ಷಣ ಕಂಡುಬರದಿದ್ದರೆ, ಗರ್ಭಕೋಶ ಗರ್ಭನಾಳಗಳ ಆಕಾರ ಗಾತ್ರ ಹಾಗೂ ಬಣ್ಣದಲ್ಲಿ ಏನು ವ್ಯತ್ಯಾಸ ಇರದಿದ್ದರೆ ಪರೀಕ್ಷೆಯ ಪರಿಣಾಮ ಸಾಮಾನ್ಯ ಎಂದರ್ಥ.

ಅಸಾಮಾನ್ಯ ಪರಿಣಾಮ

ಕೆಳಕಂಡ ಸ್ಥಿತಿಯಲ್ಲಿ ಅದನ್ನು ಅಸಾಮಾನ್ಯ ಸ್ಥಿತಿ ಎನ್ನಬಹುದು.

 • ಹೊಟ್ಟೆ ಮತ್ತು ಕಿಬ್ಬೊಟ್ಟೆ ಭಾಗದಲ್ಲಿ ಅಂಗಗಳು ಪರಸ್ಪರ ಅಂಟಿಕೊಂಡಿದ್ದರೆ.
 • ಗರ್ಭಕೋಶದ ಗೋಡೆಯ ಮೇಲೆ ಎಂಡೋಮೆಟ್ರಿಯೋಸಿಸ್ ಬೆಳೆದಿದ್ದರೆ, ಅಂಡಕೋಶದಲ್ಲಿ ಚಾಕ್ಲೇಟ್ ಸಿಸ್ಟ್ ಅಂದರೆ ಗೆಡ್ಡೆಯಂಥದು ಕಂಡುಬಂದರೆ
 • ಗರ್ಭಕೋಶದ ಸೋಂಕು, ಅಂಡಕೋಶ ಹಾಗೂ ಅಂಡನಾಳಗಳಲ್ಲಿ ಸೋಂಕು ಇರುವುದು ಕಂಡುಬಂದರೆ
 • ಗರ್ಭಕೋಶದ ಗೆಡ್ಡೆ
 • ಅಪೆಂಡಿಕ್ಸ್ ಸಮಸ್ಯೆ
 • ಗರ್ಭನಾಳಗಳು ಮುಚ್ಚಿಕೊಂಡಿರುವುದು,
 • ನೀರು ತುಂಬಿಕೊಂಡಿರುವುದು.
 • ಟಿ.ಬಿ. ಲಕ್ಷಣ ಇರುವುದು.

ಮಾಹಿತಿಗೆ :
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

altiushospital@yahoo.com, www.altiushospital.com

Leave a Reply