ಮಹಿಳೆ ವಿರುದ್ಧ ಸಿದ್ದರಾಮಯ್ಯ ಸಿಟ್ಟಾಗಲು ಕಾರಣವೇನು?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮಹಿಳೆ ಒಬ್ಬರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕೆಯ ಕೈಯ್ಯಲ್ಲಿದ್ದ ಮೈಕ್​ ಕಿತ್ತುಕೊಂಡು, ಕೋಪಾತಾಪ ಪ್ರದರ್ಶನ ಮಾಡಿರುವುದು ಸಾಕಷ್ಟು ಚರ್ಚೆಯಾಗುತ್ತಿದೆ. ಟಿ ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ ಕೆಪಿಟಿಸಿಎಲ್​​ ಪವರ್​ ಸ್ಟೇಷನ್​ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ರು. ಈ ಗ್ರಾಮ ಸಿದ್ದರಾಮಯ್ಯ ಅವರ ಪುತ್ರ ಡಾ ಯತೀಂಧ್ರ ಅವರ ಕ್ಷೇತ್ರವಾಗಿದ್ದು, ಅಭಿವೃದ್ಧಿ ಕಾರ್ಯಕ್ರಮಕ್ಕೆ ಹಾಜರಾಗಿದ್ರು. ಈ ವೇಳೆ ಎಂಎಲ್​ಎ ನಮ್ಮ ಕೈಗೆ ಸಿಗೋದಿಲ್ಲ ಎಂದು ಮಹಿಳೆವೊಬ್ಬರು ಪ್ರಶ್ನಿಸಿದ್ರು. ಹೀಗೆ ಹೇಳ್ತಿದ್ದ ಹಾಗೆ ಕುಪಿತಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ, ಏಯ್, ಏನಮ್ಮ ಮಾತನಾಡ್ತಿದ್ಯಾ..? ಯಾವತ್ತಾದ್ರು ನೀನು ಸಮಸ್ಯೆ ಹೇಳಿಕೊಂಡು ನನ್ನ ಬಳಿ ಬಂದಿದ್ಯಾ..? ನೀನು ಪತ್ರ ಬರೆದ್ರೆ ನಾನು ಬಂದು ಬಿಡ್ಬೇಕಾ ಎಂದು ದಬಾಯಿಸಿದ್ರು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಲಾರ್ ಸಿದ್ದರಾಮಯ್ಯ ವರ್ತನೆ ಕಂಡು ಕಂಗಾಲಾದ್ರು.

ಸಿದ್ದರಾಮಯ್ಯ ಕೋಪದಲ್ಲಿ ಮಾತನಾಡುವ ಭರದಲ್ಲಿ ಮೈಕ್​ ಕಿತ್ತುಕೊಂಡ್ರು. ಈ ವೇಳೆ ಮಹಿಳೆ ಧರಿಸಿದ್ದ ವೇಲ್​ ಸಿದ್ದರಾಮಯ್ಯ ಮೈಕ್ ಗೆ ಸಿಕ್ಕಿಕೊಂಡಿತು.

ಇದನ್ನೇ ಅಸ್ತ್ರವಾಗಿಸಿಕೊಂಡ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದಾರೆ. ಸಿದ್ದರಾಮಯ್ಯ ಕೋಪತಾಪದಲ್ಲಿ ಮಾತನಾಡುವ ಬದಲು ತಾಳ್ಮೆಯಿಂದ ಉತ್ತರ ಕೊಡಬಹುದಿತ್ತು. ಆದ್ರೆ ಕೋಪದಿಂದ ಉತ್ತರಿಸಿರೋದು ಯಾರಿಗೂ ಶೋಭೆ ತರುವುದಿಲ್ಲ ಎಂದಿದ್ದಾರೆ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ. ಅತ್ತ ಗದಗದಲ್ಲಿ ಮಾತನಾಡಿರುವ ಕೆ.ಎಸ್​ ಈಶ್ವರಪ್ಪ, ರೆಸಾರ್ಟ್​ನಲ್ಲಿ ಕಾಂಗ್ರೆಸ್​​ ಶಾಸಕರು ಗೂಂಡಾಗಿರಿ ಮಾಡ್ತಾರೆ. ಹೊರಗಡೆ ಕಾಂಗ್ರೆಸ್​ ನಾಯಕರೇ ಗೂಂಡಾಗಿರಿ ಮಾಡ್ತಾರೆ ಎಂದು ಟೀಕಿಸಿದ್ದಾರೆ. ಇನ್ನೂ ಕುರ್ಚಿಸಿಗದೇ ಇರೋದಕ್ಕೆ ಸಿದ್ದರಾಮಯ್ಯಗೆ ಉರಿ ಶುರುವಾಗಿದೆ ಎಂದು ಸದಾನಂದಗೌಡರು ಖಂಡಿಸಿದ್ದಾರೆ.

ಸಿದ್ದರಾಮಯ್ಯ ಕೆಂಗಣ್ಣಿಗೆ ಗುರಿಯಾದ ಮಹಿಳೆ ಜಮಲಾರ್ ಮಾತ್ರ ಸಿದ್ದರಾಮಯ್ಯ ಅವರ ಕೋಪ ನನಗೆ ಬೇಸರ ತರಿಸಿಲ್ಲ. ಅವರು ಮೈಸೂರಿಗೆ ಹುಲಿ ಇದ್ದ ಹಾಗೆ. ಟಿಪ್ಪು ಸುಲ್ತಾನ್​ ಬಿಟ್ರೆ ಮೈಸೂರಿಗೆ ಸಿದ್ದರಾಮಯ್ಯ ಅವರೇ ಹುಲಿ. ಅವರು ಇನ್ನಷ್ಟು ಕಾಲ ಶಾಸಕರಾಗಿ ಅಭಿವೃದ್ಧಿ ಮಾಡ್ಬೇಕು ಎಂದಿದ್ದಾರೆ. ಆದರೂ ಕಾನೂನು ಸಂಕಷ್ಟಕ್ಕೆ ಸಿದ್ದರಾಮಯ್ಯ ಸಿಲುಕುವ ಸಾಧ್ಯತೆಯಿದೆ. ಯಾಕಂದ್ರೆ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣದ ಸಂಬಂಧ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದು, ಸಂಪೂರ್ಣ ಮಾಹಿತಿ ನೀಡುವಂತೆ ರಾಜ್ಯ ಪೊಲೀಸರಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಈ ಮಧ್ಯೆ ಸಿದ್ದರಾಮಯ್ಯ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಕಾರ್ಯಕರ್ತರೊಬ್ಬರು ಮಾತನಾಡುವ ತಡೆಯಲು ಯತ್ನಿಸಿದ್ದು, ಆಕಸ್ಮಿಕವೇ ಹೊರತು ದುರುದ್ದೇಶದಿಂದ ಕೂಡಿರಲಿಲ್ಲ ಎಂದು ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿದ್ದಾರೆ.

Leave a Reply