ಮೋದಿಗೆ ತನ್ನವರಿಂದಲೇ ಎದುರಾಗುತ್ತಿದೆ ಸವಾಲು! ಚುನಾವಣೆ ಹೊತ್ತಲ್ಲಿ ಬದಲಾಗುತ್ತಿದೆ ಬಿಜೆಪಿ ಚಿತ್ರಣ!

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಷ್ಟ್ರ ರಾಜಕಾರಣದ ಚಿತ್ರಣ ಬದಲಾಗುತ್ತಿದೆ. ಕೆಲ ತಿಂಗಳ ಹಿಂದೆ ಮೋದಿ ಭರ್ಜರಿ ಜಯ ಸಾಧಿಸಿ ಮತ್ತೇ ಪ್ರಧಾನಿ ಆಗುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಈಗ ಅದು ಅಷ್ಟು ಸುಲಭವಲ್ಲ ಎಂದು ಅರಿವಾಗುತ್ತದೆ. ಅದಕ್ಕೆ ಕಾರಣ ಮೋದಿಗೆ ತನ್ನವರಿಂದಲೇ ಎದುರಾಗುತ್ತಿರುವ ಸವಾಲು!

ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಜತೆ ಎನ್ಡಿಎ ಮೈತ್ರಿಕೂಟದ ಕಾಣಿಸಿಕೊಂಡ ಅನೇಕರು ಈಗ ಮೋದಿ ವಿರೋಧಿ ಪಾಳಯದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹೀಗೆ ಮೈತ್ರಿ ಪಕ್ಷಗಳ ಮುನಿಸು ಒಂದೆಡೆಯಾದರೆ ತಮ್ಮದೇ ಪಕ್ಷದ ನಾಯಕ ನಿತಿನ್ ಗಡ್ಕರಿ ಅವರ ಪರೋಕ್ಷ ಟೀಕೆಗಳು ಮೋದಿ ಹಾಗೂ ಅಮಿತ್ ಶಾ ಅವರಿಗೆ ದೊಡ್ಡ ಸವಾಲಾಗಿದೆ.

‘ರಾಜಕಾರಣಿಗಳು ದೇಶದ ಜನರಲ್ಲಿ ಕನಸುಗಳನ್ನು ಬಿತ್ತುತ್ತಾರೆ. ಆದರೆ ಅವುಗಳನ್ನು ನನಸಾಗಿಸುವಲ್ಲಿ ವಿಫಲವಾಗಿ ಜನರಿಂದ ಶಿಕ್ಷೆಗೆ ಒಳಗಾಗುತ್ತಾರೆ. ಹೀಗಾಗಿ ನಾಯಕರು ತಮ್ಮಿಂದ ಈಡೇರಿಸಬಹುದಾದ ಭರವಸೆಗಳನ್ನು ಮಾತ್ರ ನೀಡುವುದು ಉತ್ತಮ…’ ಎಂದು ಗಡ್ಕರಿ ಅವರು ಭಾನುವಾರ ನೀಡಿರುವ ಹೇಳಿಕೆ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿದೆ.

ಗಡ್ಕರಿಯವರ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಎಐಎಂಐಎಂ ಮುಖಂಡ ಅಸಾವುದ್ದೀನ್ ಓವೈಸಿ, ‘ಮೋದಿ ಅವರೇ ಗಡ್ಕರಿ ಅವರ ಮಾತುಗಳು ನಿಮ್ಮ ಕಾರ್ಯ ವೈಖರಿಯ ಕನ್ನಡಿಯಾಗಿದೆ’ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೌದು, ಗಡ್ಕರಿ ಅವರು ಮೋದಿ ಹಾಗೂ ಅಮಿತ್ ಶಾ ವಿರುದ್ಧ ಸಾರ್ವಜನಿಕವಾಗಿ ಪರೋಕ್ಷ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿನ ದಿನಗಳಲ್ಲಿ ಗಡ್ಕರಿ ಮೋದಿ ವಿರುದ್ಧ ಹಲವು ಬಾರಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ ಬಿಜೆಪಿಯಲ್ಲಿ ನರೇಂದ್ರ ಮೋದಿಯವರಿಗೆ ಪರ್ಯಾಯ ನಾಯಕರಾಗಿ ನಿತಿನ್ ಗಡ್ಕರಿ ಗುರುತಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ವಿರೋಧ ಪಕ್ಷಗಳ ಅನೇಕ ನಾಯಕರು ಗಡ್ಕರಿ ಅವರ ಕಾರ್ಯವೈಖರಿಯನ್ನು ಹಾಡಿ ಹೊಗಳುತ್ತಿದ್ದಾರೆ.

ಇತ್ತೀಚೆಗೆ ಹಾಸನದಲ್ಲಿ ಹಲವು ಕಾಮಗಾರಿಗಳ ಶಂಕುಸ್ಥಾಪನೆ ಮಾಡಲು ಗಡ್ಕರಿ ಆಗಮಿಸಿದಾಗ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಚಿವ ರೇವಣ್ಣ ಅವರು ಗಡ್ಕರಿ ಅವರ ಕಾರ್ಯವನ್ನು ಪ್ರಶಂಸಿಸಿದರು. ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ, ‘ಕೇಂದ್ರ ಸರ್ಕಾರದಲ್ಲಿ ನಿತಿನ್ ಗಡ್ಕರಿ ಅವರಷ್ಟು ಸಹಕಾರ ನೀಡುವ ಬೇರೆ ಮಂತ್ರಿ ಇಲ್ಲ’ ಎಂದು ಗುಣಗಾನ ಮಾಡಿದ್ದರು.

ಈ ಮಧ್ಯೆ ನಿತಿನ್ ಗಡ್ಕರಿಯವರ ಪ್ರಧಾನಿ ಮಂತ್ರಿ ಅಭ್ಯರ್ಥಿಯಾದರೆ ಬಿಜೆಪಿಯನ್ನು ನಾವು ಬೆಂಬಲಿಸುತ್ತೇವೆ ಎಂದು ಶಿವಸೇನೆ ಹೇಳಿಕೆ ನೀಡಿದೆ. ಮೊನ್ನೆ ರಾಜಪಥ್ ನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪಕ್ಕದಲ್ಲಿ ಗಡ್ಕರಿ ಕೂತು ಮಾತುಕತೆ ನಡೆಸಿದ್ದು ದೇಶದ ಕಾರಣವಾಗಿತ್ತು.

ಈ ಎಲ್ಲಾ ಬೆಳವಣಿಗೆಗಳು ಬಿಜೆಪಿಯಲ್ಲಿ ಗಡ್ಕರಿ ಅವರು ಮೋದಿಗೆ ಪರ್ಯಾಯ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ಮೋದಿ ಹಾಗೂ ಅಮಿತ್ ಶಾ ಅವರಿಗೆ ವಿರೋಧ ಪಕ್ಷಗಳ ಸವಾಲಿಗಿಂತ ದೊಡ್ಡದಾಗಿರುವುದು ಸ್ಪಷ್ಟವಾಗಿದೆ.

Leave a Reply