ಅಧಿಕ ರಕ್ತಸ್ರಾವಕ್ಕೆ ಎಂಡೋಮೆಟ್ರಿಯಲ್ ಅಬ್ಲೇಶನ್ ಪರಿಹಾರ ಹೇಗೆ?

ಡಾ.ಬಿ.ರಮೇಶ್

ಎಂಡೋಮೆಟ್ರಿಯಂ ಅಬ್ಲೇಶನ್ (Endometrial Ablation)

ತಿಂಗಳು ತಿಂಗಳು ಮುಟ್ಟಿನ ಅವಧಿಯಲ್ಲಿ ಗರ್ಭಕೋಶದ ಪದರು ರೂಪುಗೊಂಡು ಅದು ರಕ್ತಸ್ರಾವದ ಮೂಲಕ ಹೊರಹೋಗುತ್ತದೆ. ಇದು ಒಂದು ಸಹಜ ಕ್ರಿಯೆ. ಗರ್ಭಕೋಶದ ಪದರ ಅತಿಯಾಗಿ ದಪ್ಪಗಾದರೆ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗುತ್ತದೆ.

ಏನಿದು ಎಂಡೋಮೆಟ್ರಿಯಲ್ ಅಬ್ಲೇಶನ್?
ಗರ್ಭಕೋಶದ ದಪ್ಪಗಾದ ಒಳಪದರವನ್ನು ಹಿಸ್ಟ್ರೋಸ್ಕೋಪಿ ಮುಖಾಂತರ ವಾಸ್ತವ ಸ್ಥಿತಿಗೆ ತರುವ ಪ್ರಕ್ರಿಯೆಯನ್ನು ‘ಎಂಡೋಮೆಟ್ರಿಯಲ್ ಅಬ್ಲೇಶನ್’ ಎನ್ನುತ್ತಾರೆ.

ಔಷಧಿ – ಮಾತ್ರೆಗಳಿಂದಲೂ  ಅತಿಯಾದ ರಕ್ತಸ್ರಾವ ನಿಲ್ಲದೆ ಹೋದರೆ ಆಗ ವೈದ್ಯರು ಅಬ್ಲೇಶನ್’ಗೆ ಸಲಹೆ ನೀಡುತ್ತಾರೆ. ಫೈಬ್ರಾಯ್ಡ್ ಗಡ್ಡೆಗಳಿಂದ ಗರ್ಭಕೋಶದ ಒಳಪದರ ದಪ್ಪಗಾಗಿದ್ದರೆ ಆಗ ಈ ಪ್ರಕ್ರಿಯೆಯನ್ನು ಶಿಫಾರಸು ಮಾಡುವುದಿಲ್ಲ. ಮುಂದೆ ಮಕ್ಕಳ ಇಚ್ಛೆ ಇದ್ದವರಿಗೂ ಈ ಪ್ರಕ್ರಿಯೆ ಮಾಡಿಸಲು ಹೇಳಲಾಗುವುದಿಲ್ಲ. ಏಕೆಂದರೆ ಮಕ್ಕಳು ಆಗಬೇಕೆಂದರೆ ಗರ್ಭಕೋಶದ ಈ ಪದರು ಅತ್ಯವಶ್ಯ. ಮಕ್ಕಳು ಆಗಿ ಸಂಸಾರ ಪೂರ್ತಿಗೊಂಡ ಬಳಿಕ ಈ ಪ್ರಕ್ರಿಯೆಗೆ ಶಿಫಾರಸು ಮಾಡಲಾಗುತ್ತದೆ.

ಈ ಶಸ್ತ್ರಚಿಕಿತ್ಸೆ ಉಪಯುಕ್ತವೇ?
ಗರ್ಭಕೋಶದ ಒಳಪದರ ದುರಸ್ತಿಗೊಳಿಸುವ ಅಬ್ಲೇಶನ್ ಪ್ರಕ್ರಿಯೆ ಶೇ.80ರಷ್ಟು ಮಹಿಳೆಯರಿಗೆ ಪರಿಣಾಮಕಾರಿ ಎನಿಸುತ್ತದೆ. ಒಂದು ವರ್ಷದ ಅವಧಿಯಲ್ಲಿ ಶೇ. 50ರಷ್ಟು ಮಹಿಳೆಯರಿಗೆ ರಕ್ತಸ್ರಾವ ಅರ್ಧದಷ್ಟು ಕಡಿಮೆಯಾಗುತ್ತದೆ.  ಶೇ.50ರಷ್ಟು ಮಹಿಳೆಯರಿಗೆ ರಕ್ತಸ್ರಾವ ಸಂಪೂರ್ಣವಾಗಿ ನಿಲ್ಲುತ್ತದೆ.

ಏನೇನು ರಿಸ್ಕ್ ಇವೆ?
ಈ ಪ್ರಕ್ರಿಯೆಯ ದುಷ್ಪರಿಣಾಮಕ್ಕಿಂತ  ಉಪಯೋಗಗಳೇ ಹೆಚ್ಚು. ಅಂದಹಾಗೆ ಯಾವುದೇ ಶಸ್ತ್ರಕ್ರಿಯೆಯ ಸಂದರ್ಭದಲ್ಲಿ ಒಂದಿಷ್ಟು ಅಪಾಯಗಳು ಇದ್ದೇ ಇರುತ್ತವೆ:

  • ಒಂದಿಷ್ಟು ಪ್ರಮಾಣದಲ್ಲಿ ಸೋಂಕು ಉಂಟಾಗಬಹುದು. ಅದನ್ನು ಆಂಟಿಬಯಾಟಿಕ್’ಗಳಿಂದ ನಿವಾರಿಸಬಹುದು.
  • ಅಬ್ಲೇಶನ್ ಪ್ರಕ್ರಿಯೆಯ ಸಂದರ್ಭದಲ್ಲಿ ಗರ್ಭಕೋಶ ಗರ್ಭಕಂಠ ಹಾಗೂ ಯೋನಿ ಭಾಗಕ್ಕೆ ಒಂದಿಷ್ಟು ಗಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗೇನಾದರೂ ಆದರೆ ಅದಕ್ಕೆ ಆ ಸಮಯದಲ್ಲಿಯೇ ಚಿಕಿತ್ಸೆ ನೀಡುತ್ತಾರೆ.
  • ಅನಸ್ಥೇಶಿಯಾದಿಂದ ಒಂದಿಷ್ಟು ಚಿಕ್ಕಪುಟ್ಟ ರಿಸ್ಕ್’ಗಳು ಇದ್ದೇ ಇರುತ್ತವೆ. ಗರ್ಭಕೋಶ ನಿವಾರಿಸುವಾಗ ಯಾವ ದುಷ್ಪರಿಣಾಮಗಳು ಕಂಡುಬರುತ್ತವೋ, ಅದಕ್ಕಿಂತ ಕಡಿಮೆ ದುಷ್ಪರಿಣಾಮಗಳು ಈ ಪ್ರಕ್ರಿಯೆಯ ಸಂದರ್ಭದಲ್ಲಿ ಗೋಚರಿಸಬಹುದು.

ಶಸ್ತ್ರಚಿಕಿತ್ಸೆ ಕುರಿತು…
ಎಂಡೋಮೆಟ್ರಿಯಲ್ ಅಬ್ಲೇಶನ್ ಶಸ್ತ್ರಚಿಕಿತ್ಸೆ ಮುಂಜಾನೆ ಬಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸಂಜೆ ಮನೆಗೆ ಹೋಗುವ ಪ್ರಕ್ರಿಯೆ. ಆದರೆ ಹೆಚ್ಚಿನ ಪ್ರಕ್ರಿಯೆಗಳಿಗೆ ರಾತ್ರಿ ಆಸ್ಪತ್ರೆಯಲ್ಲಿಯೇ ಉಳಿಯಬೇಕಾಗಿ ಬರಬಹುದು. ಎಂಡೊಮೆಟ್ರಿಯಲ್ ಅಬ್ಲೇಷನ್ ಪ್ರಕ್ರಿಯೆಯನ್ನು ಜನರಲ್ ಅನಸ್ಥೇಶಿಯಾದಲ್ಲಿ ಮಾಡಲಾಗುತ್ತದೆ. ಅಂದರೆ ಆಗ ನಿಮಗೆ ಯಾವುದೇ ಪ್ರಜ್ಞೆ ಇರುವುದಿಲ್ಲ. ನೋವು ಎನಿಸುವುದಿಲ್ಲ.

  • ಯೋನಿ ಮಾರ್ಗದ ಮೂಲಕ ಟೆಲಿಸ್ಕೋಪ್’ನ್ನು ಗರ್ಭಕೋಶದೊಳಗೆ ಕಳಿಸಿ ಗರ್ಭಕೋಶದ ಪದರ ಹೇಗಿದೆ, ಬೇರೆ ಏನಾದರೂ ಸಮಸ್ಯೆಗಳು ಇರಬಹುದೆ ಎನ್ನುವುದನ್ನು ಪರೀಕ್ಷಿಸಲಾಗುತ್ತದೆ.
  • ಮೈಕ್ರೋವೇವ್ ಎಂಡೋಮೆಟ್ರಿಯಲ್ ಅಬ್ಲೇಶನ್ ಪ್ರಕ್ರಿಯೆಯನ್ನು ಮೈಕ್ರೋ ವೇವ್ ಉಪಯೋಗಿಸಿ ಅದನ್ನು ತೆಗೆದು ಹಾಕಲಾಗುತ್ತದೆ.
  • ನೋವಾಶ್ಯೂರ್ ಪದ್ಧತಿಯಲ್ಲಿ ವಿದ್ಯುಚ್ಛಕ್ತಿ ಸಹಾಯದಿಂದ ಕೂಡ ಎಂಡೋಮೆಟ್ರಿಯಲ್ ಪದರನ್ನು ತೆಗೆದುಹಾಕಲಾಗುತ್ತದೆ.
  • ಥರ್ಮಲ್ ಬಲೂನ್ ಅಬ್ಲೇಶನ್ ವಿಧಾನದಲ್ಲಿ ಬಿಸಿ ಬಲೂನ್ ಕಳಿಸಿ ಅದರಿಂದಲೂ ಗರ್ಭಕೋಶದ ಗೋಡೆಯ ದಪ್ಪಗಾದ ಭಾಗವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ನೆರವೇರಿಸಲಾಗುತ್ತದೆ.

ಶಸ್ತ್ರಚಿಕಿತ್ಸೆಯ ಬಳಿಕ….
ಶಸ್ತ್ರಚಿಕಿತ್ಸೆಯ ಬಳಿಕ ನಾಲ್ಕು ಗಂಟೆಗಳವರೆಗೆ ಸ್ಥಿತಿಯನ್ನು ಪರಿಶೀಲಿಸಿ ಎಲ್ಲವೂ ಸಾಮಾನ್ಯವಾಗಿದೆಯೇ ಎಂದು ಕಂಡುಕೊಳ್ಳುತ್ತಾರೆ. ನೀರು ಕುಡಿದರೂ ವಾಂತಿ ಆಗದಿದ್ದರೆ, ಮೂತ್ರ ಮಾಡಲು ಏನು ತೊಂದರೆ ಅನಿಸದಿದ್ದರೆ ಅದೇ ದಿನ ಸಂಜೆ  ಡಿಸ್ಚಾರ್ಜ್ ಮಾಡುತ್ತಾರೆ. ಅನಸ್ಥೇಶಿಯಾದ ಅಷ್ಟಿಷ್ಟು ಪರಿಣಾಮ ಉಂಟಾಗಬಹುದು. ಒಂದು ತಿಂಗಳ ಕಾಲ ಅಷ್ಟಿಷ್ಟು  ರಕ್ತಸ್ರಾವ ಆಗಬಹುದು. ಹೊಟ್ಟೆ ನೋವು ಬರಬಹುದು. ಅದಕ್ಕಾಗಿ ಮಾತ್ರೆಗಳನ್ನು ಕೊಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ:
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789
ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

ಇಮೇಲ್: altiushospital@yahoo.com, www.altiushospital.com

Leave a Reply