ಜೆಡಿಎಸ್​ – ಬಿಜೆಪಿ ಜೊತೆ ಮೈತ್ರಿ ಮಾತುಕತೆ!?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್​ ಹಾಗೂ ಜೆಡಿಎಸ್​ ನಡುವಿನ ಮೈತ್ರಿಯಲ್ಲಿ ಬಿರುಕು ಮೂಡಿದ್ದು ನಿನ್ನೆಯಿಂದ ಒಂದೆ ರೀತಿ ವಾಕ್ಸಮರ ಮುಂದುವರಿದಿದೆ. ಎಸ್​.ಟಿ ಸೋಮಶೇಖರ್​, ಸೊಸೆ, ಮಕ್ಕಳು, ಮೊಮ್ಮಕ್ಕಳು ಮಾತ್ರ ಅಧಿಕಾರ ಅನುಭವಿಸಬೇಕಾ?, ಸಿದ್ದರಾಮಯ್ಯ ಅಧಿಕಾರ ಸಿಗದೇ ಇರುವವರಿಗೆ ಅಧಿಕಾರ ಕೊಡ್ತಾರೆ ಎಂದು ಹೇಳಿಕೆ ಕೊಟ್ಟಿದ್ರು. ಆ ಬಳಿಕ ಚಿಕ್ಕಬಳ್ಳಾಪುರ ಶಾಸಕ ಡಾ ಕೆ ಸುಧಾಕರ್​ ಈಗಲೂ ನಮಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದಿದ್ರು. ಆ ಬಳಿಕ ಸಿಎಂ ರಾಜೀನಾಮೆ ನೀಡೋಕೆ ರೆಡಿ ಎಂದಿದ್ರು. ಕಾಂಗ್ರೆಸ್​​ ಉಸ್ತುವಾರಿ ವೇಣುಗೋಪಾಲ್​ ಕೂಡ ಸಿಎಂ ಪರವಾಗಿ ಟ್ವಿಟ್ಟರ್​ನಲ್ಲಿ ಬ್ಯಾಟ್​ ಬೀಸಿದ್ರು. ನಂತ್ರ ಕೆಪಿಸಿಸಿ ಅಧ್ಯಕ್ಷರು ಎಸ್​.ಟಿ ಸೋಮಶೇಖರ್​ ಅವರಿಂದ ಕ್ಷಮಾಪಣೆ ಕೇಳಿಸುವ ಮೂಲಕ ತೇಪೆ ಹಾಕುವ ಕೆಲಸ ಮಾಡಿದ್ರು. ಕೊನೆಗೆ ಯಾರೂ ಕೂಡ ಮಾಧ್ಯಮಗಳ ಜೊತೆ ಮಾತನಾಡಬೇಡಿ ಎಂದು ಕರೆ ಕೊಟ್ಟಿದ್ರು. ಆದ್ರೆ ಇವತ್ತು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡ್ತೇನೆ ಅಂತಾ ಹೇಳಬಾರದು. ಕುಮಾರಸ್ವಾಮಿ ಅವರಿಗೆ ಇನ್ನು ಸ್ವಲ್ಪ ಮೆಚ್ಯುರಿಟಿ ಬರಬೇಕು ಎಂದಿದ್ದಾರೆ.

ಕಾಂಗ್ರೆಸ್​ ನಾಯಕರ ಮಾತಿಗೆ ಜೆಡಿಎಸ್​ ನಾಯಕರೇನು ಸುಮ್ಮನೆ ಕುಳಿತಿಲ್ಲ. ಸಚಿವ ಸಿಎಸ್​ ಪುಟ್ಟರಾಜು ಮಾತನಾಡಿ, ಮುಂದೆ ಆಗುವ ಅನಾಹುತಕ್ಕೆ ನಾವು ಜವಾಬ್ದಾರರಲ್ಲ ಎಂದಿದ್ದಾರೆ. ಅಲ್ಲದೆ ಕಾಂಗ್ರೆಸ್​ ನಾಯಕರು ಹದ್ದು ಮೀರಿ ವರ್ತನೆ ಮಾಡ್ತಿದ್ದು, ಕಾಂಗ್ರೆಸ್​ ನಾಯಕರು ನಿಯಂತ್ರಿಸುವ ಕೆಲಸ ಮಾಡ್ಬೇಕು ಎಂದು ಆಗ್ರಹಿಸಿದ್ದಾರೆ. ನಾಗಮಂಗಲ ಶಾಸಕ ಸುರೇಶ್​ ಗೌಡ ಕೂಡ, ಕಾಂಗ್ರೆಸ್​ ಶಾಸಕರು ಇದೇ ರೀತಿ ಪದೇ ಪದೇ ಅವಹೇಳನಕಾರಿ ಹೇಳಿಕೆ ನೀಡ್ತಿದ್ರೆ ಅದ್ರ ಫಲ ಉಣ್ಣಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬಸವರಾಜ ಹೊರಟ್ಟಿ, ವೈಎಸ್‌ವಿ ದತ್ತಾ ಸೇರಿದಂತೆ ಜೆಡಿಎಸ್‌ನ ಬಹುತೇಕ ನಾಯಕರು ಕಾಂಗ್ರೆಸ್ ನಾಯಕರ ಮಾತಿಗೆ ಕಡಿವಾಣ ಹಾಕುವಂತೆ ಆಗ್ರಹ ಮಾಡಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕರು ಮಾತಿನ ಸುರಿಮಳೆ ಸುರಿಸುತ್ತಿದ್ದು, ಇವತ್ತು ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಮಹತ್ವದ ಸಭೆ ನಡೆದಿದೆ ಅನ್ನೋ ಮಾಹಿತಿ ಹೊರ ಬಿದ್ದಿದೆ.‌

ಉನ್ನತ ಮೂಲಗಳ ಮಾಹಿತಿ ಪ್ರಕಾರ ಜೆಡಿಎಸ್‌ನ ಪ್ರಮುಖ ಸಚಿವರಾಗಿರುವ ಹೆಚ್.ಡಿ ರೇವಣ್ಣ, ಮಂಗಳವಾರ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಚರ್ಷಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಕಾಂಗ್ರೆಸ್ ನಾಯರ ದಾಳಿ ಹೀಗೆ ಮುಂದುವರಿದರೆ ಮೈತ್ರಿ ಸರ್ಕಾರ ಪತನವಾಗಲಿದ್ದು, ಬಿಜೆಪಿಗೆ ಬೆಂಬಲ ನೀಡಲು ಜೆಡಿಎಸ್ ಮಾನಸಿಕವಾಗಿ ತಯಾರಾಗಿದೆ ಅನ್ನೋ ಮಾಹಿತಿಯೂ ಸಿಕ್ಕಿದೆ. ಇದೇ ಕಾರಣಕ್ಕೆ ಮಾಜಿ ಪ್ರಧಾನಿ ದೇವೇಗೌಡರು, ನಾನು ಶಕ್ತಿಮೀರಿ ಮೈತ್ರಿ ಸರ್ಕಾರ ಉಳಿಸಲು ಪ್ರಯತ್ನ ಮಾಡ್ತೇನೆ. ಅದನ್ನೂ ಮೀರಿದರೆ ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಜೊತೆಗಿನ ಅಧಿಕಾರಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ. ಇದೆಲ್ಲಾ ಗೊತ್ತಿದ್ದರಿಂದಲೇ ಸಿ.ಎಸ್ ಪುಟ್ಟರಾಜು ಬಿಜೆಪಿ ಜೊತೆ ಅಧಿಕಾರ ನಡೆಸಿದಾಗಲೇ ಜನಪ್ರಿಯ ಸರ್ಕಾರ ಇತ್ತು. ಇದೀಗ ಕಾಂಗ್ರೆಸ್ ಬೇಷರತ್ ಬೆಂಬಲ ಎಂದು ಹೇಳಿ, ಇದೀಗ ಉಲ್ಟಾ ಹೊಡೆದಿದೆ. ಹೆಜ್ಜೆ ಹೆಜ್ಜೆಗೂ ಹಸ್ತಕ್ಷೇಪ ಮಾಡುವ ಮೂಲಕ ಸಿಎಂ ಕೆಲಸ ಮಾಡಲು ಬಿಡುತ್ತಿಲ್ಲ ಎಂದಿದ್ರು. ಇದೀಗ ಹೆಚ್.ಡಿ ರೇವಣ್ಣ ಬಿಜೆಪಿ ನಾಯಕರನ್ನು ಭೇಟಿ ಮಾಡಿರೋದು, ಮತ್ತೊಮ್ಮೆ ಬಿಜೆಪಿ – ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

Leave a Reply