ರಾಹುಲ್​ಗೆ ಕೌಂಟರ್​ ಕೊಡ್ತಾರಾ ಮೋದಿ..?

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕಾರಣಿಗಳಿಗೆ ಬಡವರು ನೆನಪಾಗ್ತಿದ್ದಾರೆ. ಕಾಂಗ್ರೆಸ್​ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಬಡವರಿಗೆ ಬಂಪರ್ ಕೊಡುಗೆ ನೀಡುವುದಾಗಿ ರಾಹುಲ್ ಗಾಂಧಿ ಛತ್ತೀಸ್​ಗಢದಲ್ಲಿ ಘೋಷಣೆ ಮಾಡಿದ್ರು. ಕಾಂಗ್ರೆಸ್ ಸರ್ಕಾರ ಬಡವರಿಗೆ ಕನಿಷ್ಠ ಆದಾಯ ಗ್ಯಾರಂಟಿ ಕೊಡುತ್ತದೆ. ಬಡತನದಲ್ಲಿರುವ ದೇಶದ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ ಕನಿಷ್ಠ ಆದಾಯವನ್ನ ಭಾರತದ ಸರ್ಕಾರ ನೀಡಲಿದೆ ಎಂದಿದ್ರು. ಇವತ್ತೂ ಕೂಡ ಕೇರಳದ ಕೊಚ್ಚಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಸರ್ಕಾರಕ್ಕೆ ಮಾತಿನಲ್ಲೇ ತರಾಟೆ ತೆಗೆದುಕೊಂಡ್ರು. ನರೇಂದ್ರ ಮೋದಿ ಸರ್ಕಾರ ಕೇವಲ 15 ಮಂದಿ ಶ್ರೀಮಂತ ಜನರಿಗೆ ಗರಿಷ್ಠ ಆದಾಯ ಗ್ಯಾರಂಟಿ ಕೊಟ್ಟಿದೆ. ನಮ್ಮ ಕಾಂಗ್ರೆಸ್ ಪಕ್ಷ ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಕನಿಷ್ಠ ಆದಾಯ ಗ್ಯಾರಂಟಿ ಕೋಡಲು ನಿರ್ಧಾರ ಮಾಡಿದೆ ಎಂದಿದ್ದಾರೆ.

ಆದ್ರರೆ ರಾಹುಲ್ ಗಾಂಧಿ ಕೊಟ್ಟ ಆಶ್ವಾಸನೆ ಜಾರಿಯಾಗಲು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಆದ್ರೆ ಬಡವರಿಗೆ ಕನಿಷ್ಠ ಆದಾಯ ಯೋಜನೆ ತರಲು ಸ್ವತಃ ಕೇಂದ್ರ ಸರ್ಕಾರವೇ ತುದಿಗಾಲಿನಲ್ಲಿ ನಿಂತಿದ್ದು, ಲೋಕಸಭಾ ಮತಬೇಟೆಗೆ ಪ್ರಧಾನಿ ನರೇಂದ್ರ ಮೋದಿಯೇ ಸಜ್ಜಾಗಿದ್ದಾರೆ ಎನ್ನಲಾಗಿದೆ. ರೈತರ ಸಾಲಮನ್ನಾ ಮಾಡುವ ಮೂಲಕ ಪಂಚರಾಜ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್​ಗೆ ಕೌಂಟರ್​ ಕೊಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯೋಜನೆ ರೂಪಿಸಿದ್ದು, ಈ ಬಾರಿ ಕೇಂದ್ರ ಬಜೆಟ್​ನಲ್ಲಿ ಬಡವರಿಗೆ ಬಂಪರ್ ಆಫರ್​ ಕೊಡಲು ರೆಡಿ ಆಗಿದೆ ಎನ್ನಲಾಗಿದೆ. ರೈತರು, ಬಡವರು ಸೇರಿದಂತೆ ಸಮಾಜದಲ್ಲಿ ಹಿಂದುಳಿದವರ ಏಳ್ಗೆಗಾಗಿ ಯೋಜನೆ ರೂಪಿಸಲು ಸಿದ್ಧತೆಗಳು ನಡೆದಿವೆ ಅನ್ನೋ ಅಂಶ ಹೊರಬಿದ್ದಿದೆ. ಫೆಬ್ರವರಿ 1ರಂದು ಕೇಂದ್ರ ಬಜೆಟ್​ ಮಂಡನೆ ಆಗಲಿದ್ದು, ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ ಘೋಷಣೆ ಮಾಡುವ ಸಾಧ್ಯತೆ ಇದೆ. ರಾಹುಲ್ ಗಾಂಧಿಯ ಕನಿಷ್ಠ ಆದಾಯ ಯೋಜನೆಯ ಭರವಸೆಗೆ ಮೋದಿ ಸರ್ಕಾರ ಕೌಂಟರ್ ಕೊಡಲಿದೆ ಎನ್ನಲಾಗ್ತಿದೆ.

ರಾಹುಲ್ ಗಾಂಧಿಯ ಕನಿಷ್ಠ ಆದಾಯ ಘೋಷಣೆಯನ್ನ ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದು, ಇದೊಂದು ಸುಳ್ಳು ಭರವಸೆ ಅಂತ ವ್ಯಂಗ್ಯವಾಡಿದ್ದಾರೆ. ಇಂದಿರಾ ಗಾಂಧಿ ಹೆಸರು ಪ್ರಸ್ತಾಪ ಮಾಡದೆ ಕೆಂಡ ಕಾರಿರುವ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ಗರಿಬಿ ಹಠಾವೋ ರೀತಿಯಲ್ಲಿ ಇದೂ ಕೂಡ ಸುಳ್ಳು ಬರವಸೆಗಳಲ್ಲಿ ಒಂದು ಎಂದಿರುವ ಅವರು, ಕಳೆದ ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿ ಕೂಡ ಕಪ್ಪು ಹಣ ವಾಪಸ್​, ಪ್ರತಿಯೊಬ್ಬರ ಬ್ಯಾಂಕಿ ಖಾತೆಗೆ 15 ಲಕ್ಷ ಹಣ ಹಾಗೂ ಅಚ್ಚೇ ದಿನ ಭರವಸೆ ಕೊಟ್ಟಿದ್ರು. ಆದ್ರೆ ಯಾವುದೂ ಜಾರಿಯಾಗಲಿಲ್ಲ. ಅದರಂತೆ ಇದೂ ಕೂಡ ಸುಳ್ಳಿನ ಭರವಸೆ ಅಷ್ಟೆ. ಕಾಂಗ್ರೆಸ್​, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಂತಿವೆ. ಭರವಸೆ ಕೊಟ್ಟು ಜನರಿಗೆ ವಂಚನೆ ಮಾಡುತ್ತಿವೆ ಎಂದು ಟೀಕಿಸಿದ್ದಾರೆ. ಆದ್ರೆ ಮೋದಿ ಸರ್ಕಾರ ಮುಂದಿನ ಚುನಾವಣೆ ದೃಷ್ಟಿಯಿಂದ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದ್ದು, ಹಣ ಎಲ್ಲಿಂದ ಹೊಂದಿಸ್ತಾರೆ ಅನ್ನೋ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

Leave a Reply