ಕೋಳಿ ಅಂಕಣ ನೆನಪಿಸುತ್ತಿರುವ ‘ಆಪರೇಷನ್‌ ರಾಜಕಾರಣ’!

ಡಿಜಿಟಲ್ ಕನ್ನಡ ಟೀಮ್:

ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಕೋಳಿಯನ್ನು ಅಂಕಕ್ಕೆ ಬಿಡಲಾಗುತ್ತೆ.‌ ಎರಡು ಕೋಳಿಗಳ ಜಗಳ ನೋಡಲು ಸಾವಿರಾರು ಜನ ಜಮಾಯಿಸಿರುತ್ತಾರೆ. ಎರಡೂ ಕೋಳಿಗಳ ಒಂದೊಂದು ಕಾಲಿಗೆ ಹರಿತವಾದ ಚಾಕು ಕಟ್ಟಿರಲಾಗುತ್ತದೆ. ಕೋಳಿಗಳ ಜಗಳಕ್ಕೆ ಅದುವೇ ಅಸ್ತ್ರ. ಆ ಚಾಕುವಿನಿಂದ ಒಂದು ಇನ್ನೊಂದು ಕೋಳಿ ಮೇಲೆ ದಾಳಿ ಮಾಡುತ್ತದೆ. ಹೀಗೆ ಎಷ್ಟು ಬಾರಿ ದಾಳಿ ಮಾಡಿದವು ಅನ್ನೋ ಲೆಕ್ಕಾಚಾರದ ಮೇಲೆ ಗೆಲುವನ್ನು ನಿರ್ಧರಿಸಲಾಗುತ್ತದೆ. ಇನ್ನು ಕೆಲವು ವೇಳೆ ಒಂದು ಕೋಳಿ ಇನ್ನೊಂದು ಕೋಳಿಯನ್ನು ಸಾಯಿಸಿದ ಬಳಿಕವಷ್ಟೇ ಇನ್ನೊಂದು ಕೋಳಿಯನ್ನು ವಿಜಯಿ ಎಂದು ಪರಿಗಣಿಸಲಾಗುತ್ತದೆ. ಈ ಕೋಳಿ ಅಖಾಡದ ರೀತಿಯಲ್ಲೇ ರಾಜ್ಯ ರಾಜಕಾರಣ ನಡೆಯುತ್ತಿದೆ.

ಆಪರೇಷನ್ ಕಮಲ ಮಾಡ್ತೀವಿ ಅಂತ ದೆಹಲಿ, ಹರಿಯಾಣ ಸುತ್ತಾಡಿದ್ದ ಬಿಜೆಪಿ ನಾಯಕರು, ಕೊನೆಗೆ ಯಾವುದರಲ್ಲೂ ಯಶಸ್ಸು ಸಿಗದೆ ಬರಿಗೈಲಿ ವಾಪಸ್ಸಾಗಿದ್ದರು. ಇದೀಗ ಮತ್ತೆ ಆಪರೇಷನ್ ಕಮಲ ಮುನ್ನಲೆಗೆ ಬಂದಿದೆ. ಕಳೆದ ಎರಡ್ಮೂರು ದಿನಗಳಿಂದ ಬಿಜೆಪಿ ನಾಯಕರು ಹೇಳುತ್ತಿರೋ ಮಾತುಗಳು ಆಪರೇಷನ್ ಕಮಲ ಇನ್ನೂ ಅಸ್ತಿತ್ವದಲ್ಲಿದೆ ಅನ್ನೋದನ್ನು ಸಾಬೀತು ಮಾಡ್ತಿದೆ. ಮಾಜಿ ಡಿಸಿಎಂ ಆರ್ ಅಶೋಕ್ ಅವರಂತೂ ಸಿಎಂ ಕುಮಾರಸ್ವಾಮಿ ಈ ಬಾರಿ ಬಜೆಟ್ ಮಂಡನೆ ಮಾಡೋದು ಅನುಮಾನ ಅಂತಾರೆ. ಅತ್ತ ಬಸವರಾಜ ಬೊಮ್ಮಾಯಿ ಅವರು ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿಯೇ ಆಗ್ತಾರೆ ಅಂತಾರೆ. ಜತೆಗೆ 20 ಶಾಸಕರು ಈ ಬಾರಿ ಬಜೆಟ್ ಅಧಿವೇಶನಕ್ಕೆ ಗೈರು ಆಗ್ತಾರೆ ಅನ್ನೋ ಮಾತುಗಳನ್ನೂ ಬಿಜೆಪಿ ಮೇಲಿಂದ ಮೇಲೆ ತೇಲಿ ಬಿಡುತ್ತಿದೆ.

ಆಪರೇಷನ್ ಕಮಲ ನಡೆಯುತ್ತಿಲ್ಲ ಎಂದು ಬಿಜೆಪಿ ನಾಯಕರು ಎಷ್ಟೇ ಹೇಳಿದರೂ ಆಪರೇಷನ್ ಮಾತ್ರ ನಿಂತಿಲ್ಲ‌‌. ಇದೀಗ ಬಜೆಟ್ ಅಧಿವೇಶನಕ್ಕೂ ಮುನ್ನವೇ ಆಟ ಮುಗಿಸಿ ಅಂಕಣದಿಂದ ಹೊರಬರುವ ಯೋಜನೆಯನ್ನು ಕಮಲ ಪಾಳಯ ನಡೆಸಿದೆ. ಕೆಲವೊಂದಿಷ್ಟು ಶಾಸಕರ ರಾಜೀನಾಮೆ ಕೊಡಿಸಿ ಆಟ ಮುಗಿಸ್ತೀವಿ ಅನ್ನೋ ಉಮೇದಿಯಲ್ಲಿ ಕಮಲಪತಿಗಳು ಹೇಳಿಕೆಗಳನ್ನು ನೀಡ್ತಿದ್ದಾರೆ. ಸಚಿವ ಸಿ.ಎಸ್ ಪುಟ್ಟರಾಜು ಕೂಡ ಆಪರೇಷನ್ ಅಂತಿಮ ಘಟ್ಟ ತಲುಪಿದೆ. ಕ್ಲೈಮ್ಯಾಕ್ಸ್ ಅಷ್ಟೇ ಬಾಕಿ ಇದ್ದು, ಇನ್ನೇನು ಸ್ವಲ್ಪ ದಿನದಲ್ಲಿ ಎಲ್ಲವೂ ಬಯಲಾಗಲಿದೆ ಎಂದಿದ್ದಾರೆ.

ಬಿಜೆಪಿ ಪ್ರಾಬಲ್ಯ ಹೆಚ್ಚಾಗಿರುವ ಉತ್ತರ ಕರ್ನಾಟಕದ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ನಾಯಕರು ಆಮೀಷವೊಡ್ಡಿ ಆಪರೇಷನ್ ನಡೆಸಿದ್ರೆ, ಜೆಡಿಎಸ್ ಪ್ರಾಬಲ್ಯವಿರುವ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಶಾಸಕರನ್ನು ಜೆಡಿಎಸ್ ಸಂಪರ್ಕ ಮಾಡಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಒಂದು ವೇಳೆ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟರೆ, ಏಕಾಏಕಿ ಬಿಜೆಪಿ ಶಾಸಕರು ರಾಜೀನಾಮೆ ಕೊಡೋದು ಖಚಿತ ಎನ್ನಲಾಗಿದೆ. ಒಟ್ಟಾರೆ, ಎರಡೂ ಕಡೆಯಿಂದ ಆಟ ಅಂತಿಮ ಘಟ್ಟ ತಲುಪಿದೆ. ಬಿಜೆಪಿ ನಾಯಕರು ಎಷ್ಟು ಜನರ ರಾಜೀನಾಮೆ ಕೊಡಿಸ್ತಾರೆ? ಲೋಕಸಭಾ ಚುನಾವಣೆಗೂ ಮುನ್ನ ಸರ್ಕಾರ ಬೀಳುತ್ತಾ ಅನ್ನೋ ಕುತೂಹಲದ ಜೊತೆಗೆ ಸರ್ಕಾರ ಉಳಿಸಿಕೊಳ್ಳಲು ಎಷ್ಟು ಬಿಜೆಪಿ ಶಾಸಕರು ರಾಜೀನಾಮೆ ಕೊಡ್ತಾರೆ ಅನ್ನೋ ಕುತೂಹಲ ಕೂಡ ಕೆರಳಿದೆ. ಹೀಗಾಗಿ ಕೋಳಿ ಜಗಳ ಅಂತಿಮ ಹಂತ ತಲುಪಿದೆ ಎಂದು ಹೇಳಬಹುದು.

Leave a Reply