ಇನ್ಮುಂದೆ ಐಟಿ ರಿಟರ್ನ್ಸ್ ಗೆ ಆಧಾರ್ ಕಡ್ಡಾಯ!

ಡಿಜಿಟಲ್ ಕನ್ನಡ ಟೀಮ್:

ಆದಾಯ ತೆರಿಗೆ ಸಲ್ಲಿಕೆ ವೇಳೆ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಆದೇಶ ಹೊರಡಿಸಿದೆ.

ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಕಡ್ಡಾಯವಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಕೆ ಸಿಕ್ರಿ ಹಾಗೂ ಎಸ್ ಅಬ್ದುಲ್ ನಾಜೀರ್ ಅವರನ್ನೊಳಗೊಂಡ ಸುಪ್ರೀಂ ಪೀಠ, 2018-19 ಸಾಲಿಗೆ ಐಟಿ ರಿಟರ್ನ್ಸ್ ಪಾವತಿ ಮಾಡಲು ಆಧಾರ್ ಕಡ್ಡಾಯ ಎಂದು ಸೂಚಿಸಿದೆ.

ಈಗಾಗಲೇ ಪಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯ ಮಾಡಲಾಗಿದ್ದು, ಅದೇರೀತಿ ಇನ್ನುಮುಂದೆ ಆದಾಯ ತೆರಿಗೆ ಪಾವತಿ ಮಾಡುವ ಪ್ರತಿಯೊಬ್ಬರು ಆಧಾರ್ ಸಂಖ್ಯೆ ಲಿಂಕ್ ಮಾಡಲೇಬೇಕು ಎಂದು ಹೇಳಿದೆ.

ಆಧಾರ್ ಕಾರ್ಡ್ ಗೆ ಸಾಂವಿಧಾನಿಕ ಮಾನ್ಯತೆ ಮತ್ತೂ ಕಡ್ಡಾಯಗೊಳಿಸಿದ್ದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಈ ಹಿಂದೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ವಿಚಾರಣೆ ನಡೆಸಿದ ನ್ಯಾಯಾಲಯ ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದಿತ್ತಾದರೂ ಬ್ಯಾಂಕ್ ಖಾತೆ, ಮೊಬೈಲ್ ಪೋನ್ ಮತ್ತು ಶಾಲಾ ಪ್ರವೇಶಕ್ಕೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಹೇಳಿತ್ತು.

ಈಗ ಐಟಿ ರಿಟರ್ನ್‌ಸ್ ಸಲ್ಲಿಕೆ ಮಾಡಲು ವೈಯಕ್ತಿಕ ಆಧಾರ್ ಸಂಖ್ಯೆಯನ್ನು ಒದಗಿಸುವುದನ್ನು ಕಡ್ಡಾಯ ಮಾಡಿದೆ. ಅಲ್ಲದೆ ಆಧಾರ್ ಕಾರ್ಡನ್ನು ಪಾನ್ ಕಾರ್ಡಿಗೆ ಲಿಂಕ್ ಮಾಡಲು 2019 ಮಾರ್ಚ್ 31 ರವರೆಗೂ ಕಾಲಾವಕಾಶ ನೀಡಿದೆ. ಇದು ಕಪ್ಪು ಹಣದ ವಿರುದ್ಧದ ಕೇಂದ್ರ ಸರ್ಕಾರದ ಹೋರಾಟಕ್ಕೆ ಸಿಕ್ಕ ಜಯವಾಗಿದೆ.

Leave a Reply