ಅಗ್ನಿ ಪರೀಕ್ಷೆ ಅಂಗಳದಲ್ಲಿ ಮೈತ್ರಿ ಸರಕಾರ ಮತ್ತು ಪ್ರತಿಪಕ್ಷ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್​ ಹಾಗೂ ಜೆಡಿಎಸ್​ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದು, ಅಂದಿನಿಂದ ಇಂದಿನವರೆಗೂ ಸರ್ಕಾರ ಆಗ ಬೀಳುತ್ತೆ, ಈಗ ಬೀಳುತ್ತೆ ಅಂತಾ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಆದ್ರೆ ಕಮಲ ನಾಯಕರು ಅದೆಷ್ಟೇ ಲೆಕ್ಕಾಚಾರ ಹಾಕಿದ್ರು ಸರ್ಕಾರ ಮಾತ್ರ ಕೊಂಕುತ್ತಿಲ್ಲ. ದೆಹಲಿ ಹರಿಯಾಣ ಅಂತಾ ಸುತ್ತಾಡಿದ್ರು ಸರ್ಕಾರ ಮಾತ್ರ ಚಿತ್​ ಆಗ್ತಿಲ್ಲ. ಕಳೆದ ಮೂರು ತಿಂಗಳಿಂದ ಮುಂಬೈ ಹೋಟೆಲ್​ನಲ್ಲಿ ಅತೃಪ್ತರನ್ನು ಸೆರೆ ಹಿಡಿದಿದ್ರೂ, ಸರ್ಕಾರ ಮಾತ್ರ ನಿರಾತಂಕವಾಗಿ ನಡೆಯುತ್ತಿದೆ. ಕಳೆದ ಬಾರಿ ಕಾಂಗ್ರೆಸ್​ ಶಾಸಕಾಂಗ ಸಭೆಯಲ್ಲಿ ಅತೃಪ್ತ ಶಾಸಕರು ಗೈರಾಗುವ ಹಾಗೆ ನೋಡಿಕೊಳ್ಳುವ ಮೂಲಕ ಕಾಂಗ್ರೆಸ್​ ನಾಯಕರಿಗೆ ಟೆನ್ಷನ್​ ಕ್ರಿಯೇಟ್​ ಮಾಡಿದ್ದು ಸತ್ಯ. ಆದ್ರೆ ಇದೀಗ ಬಜೆಟ್​ ವೇಳೆ ಆ ಗಿಮಿಕ್ ವರ್ಕ್ ಔಟ್ ಆಗುತ್ತಾ ಅನ್ನೋದೇ ಈಗಿರೋ ಪ್ರಶ್ನೆ.

ಬುಧವಾರದಿಂದ ಬಜೆಟ್​ ಅಧಿವೇಶನ ಆರಂಭವಾಗುತ್ತಿದ್ದು, ಕಾಂಗ್ರೆಸ್​ನ ಅತೃಪ್ತರು ಬರೋದೆ ಇಲ್ಲ ಅಂತ ಬಿಜೆಪಿ ನಾಯಕರೇನೋ ಹೇಳ್ತಿದ್ದಾರೆ. ಆದ್ರೆ ನಮ್ಮ ಶಾಸಕರು ಬರುತ್ತಾರೆ, ಯಾವುದೇ ಭಯವಿಲ್ಲ ಅಂತಾ ಕಾಂಗ್ರೆಸ್​ ನಾಯಕರು ಹೇಳಿದ್ದಾರೆ. ಆದ್ರೆ ಅಧಿವೇಶನಕ್ಕೂ ಮೊದಲು ಶಾಸಕಾಂಗ ಸಭೆ ಕರೆದಿದ್ದು, ಯಾರೆಲ್ಲಾ ಬರ್ತಾರೆ ಅನ್ನೋದು ಸಭೆಯಲ್ಲಿ ಖಚಿತವಾಗಲಿದೆ. ಅದರಲ್ಲೂ ಈ ಬಾರಿ ಜಂಟಿ ಶಾಸಕಾಂಗ ಸಭೆ ಕರೆದಿರೋದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಬಜೆಟ್​ ಮಂಡನೆ ವೇಳೆ ಮೈತ್ರಿ ಪಕ್ಷದ ಶಾಸಕರು ಸರ್ಕಾರದ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ನೋಡಿಕೊಳ್ಳಲು, ನಿಮ್ಮೆಲ್ಲಾ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದ್ದು, ಯಾವುದೇ ಕಾರಣಕ್ಕೂ ಬಿಜೆಪಿಯ ಬಾಯಿಗೆ ಆಹಾರವಾಗಬೇಡಿ ಎಂದು ಸೂಚನೆ ಕೊಡುವ ಉದ್ದೇಶದಿಂದ ಜಂಟಿ ಶಾಸಕಾಂಗ ಸಭೆ ಕರೆದಿದ್ದಾರೆ.

ಒಂದು ವೇಳೆ ಶಾಸಕಾಂಗ ಸಭೆಗೆ ಈ ಬಾರಿಯೂ ಮಿಸ್​ ಆದರೆ ಬಜೆಟ್​ ಅಧಿವೇಶನದಲ್ಲಿ ಏನಾದರೂ ಅಚ್ಚರಿಯ ಬೆಳವಣಿಗೆ ನಡೆಯುತ್ತೆ ಅನ್ನೋದು ಕನ್ಫರ್ಮ್​. ಯಾಕಂದ್ರೆ ಈಗಾಗಲೇ ಕಳೆದ ಬಾರಿ ಗೈರಾಗಿರುವ ಶಾಸಕರಿಗೆ ಕೆಪಿಸಿಸಿ ನೋಟಿಸ್​ ಕೊಟ್ಟು ಉತ್ತರವನ್ನೂ ಪಡೆದುಕೊಂಡಿದೆ. ಒಂದು ವೇಳೆ ಈ ಬಾರಿಯೂ ಶಾಸಕಾಂಗ ಸಭೆಗೆ ಗೈರಾದರೆ ಮತ್ತೆ ಕೆಪಿಸಿಸಿ ವಕ್ರದೃಷ್ಟಿಗೆ ಗುರಿಯಾಗಬೇಕಾಗುತ್ತೆ. ಈ ಕಾರಣದಿಂದ ಅತೃಪ್ತ ಶಾಸಕರೂ ಶಾಸಕಾಂಗ ಸಭೆಗೆ ಬರುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಲಿದ್ದಾರೆ ಅನ್ನೋದು ಕಾಂಗ್ರೆಸ್​​ ಮೂಲಗಳ ಮಾಹಿತಿ. ಒಂದು ವೇಳೆ ಶಾಸಕಾಂಗ ಸಭೆಗೆ ಬಾರದೆ ಮತ್ತೆ ರೆಬೆಲ್​ ಆಗಿ ನಿಂತುಕೊಂಡ್ರೆ ಬಜೆಟ್​ ಅಧಿವೇಶನಕ್ಕೂ ಗೈರಾಗುವ ಮೂಲಕ ಅಥವಾ ರಾಜೀನಾಮೆ ನೀಡುವ ಮೂಲಕ ಸರ್ಕಾರ ಮುಜುಗರ ಉಂಟು ಮಾಡಿದ್ರೂ ಅಚ್ಚರಿಯಿಲ್ಲ. ಇದೇ ಕಾರಣಕ್ಕೆ ನಾಳೆ ನಡೆಯುವ ಜಂಟಿ ಶಾಸಕಾಂಗ ಸಭೆ ಮೈತ್ರಿ ಪಕ್ಷಕ್ಕೆ ಅಗ್ನಿ ಪರೀಕ್ಷೆ ಅಂದರೂ ತಪ್ಪಿಲ್ಲ..!

Leave a Reply