ಮಧ್ಯಾಹ್ನದ ಬಿಸಿಯೂಟ ಯೋಜನೆ ಯಶಸ್ಸಿಗೆ ಸಿದ್ಧಗಂಗಾ ಶ್ರೀಗಳೇ ಪ್ರೇರಣೆ; ಸಚಿವ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಸರಕಾರವು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಜಾರಿಗೆ ತರಲು ಲಿಂಗೈಕ್ಯ ಸಿದ್ಧಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳೇ ಪ್ರೇರಣೆ ಎಂದು ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಹಿಂದೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಾಹೇಬರು ಹಾಗೂ ನಾನು ಸಿದ್ಧಗಂಗಾ ಮಠಕ್ಕೆ ಹೋಗಿದ್ದೆವು. ಆಗ ಶ್ರೀಗಳು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಬಗ್ಗೆ ವಿವರಿಸಿದರು. ಅವರು ನೀಡಿದ ವಿವರ ಸರಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತರಲು ಸ್ಪೂರ್ತಿಯಾಯಿತು. ಇವತ್ತೇನಾದರೂ ಬಿಸಿಯೂಟ ಯೋಜನೆ ಯಶಸ್ವಿಯಾಗಿದ್ದರೆ ಅದಕ್ಕೆ ಕಾರಣ ಸಿದ್ಧಗಂಗಾ ಶ್ರೀಗಳು ಎಂದು ವಿಧಾನಸಭೆಯಲ್ಲಿ ಲಿಂಗೈಕ್ಯ ಶ್ರೀಗಳ ಸಂತಾಪ ಸೂಚನೆ ನಿರ್ಣಯದ ಮೇಲೆ ಮಾತನಾಡುತ್ತಾ ಬುಧವಾರ ಕೊಂಡಾಡಿದರು.

111 ವರ್ಷಗಳ ಜೀವಿತಾವಧಿಯಲ್ಲಿ ಶ್ರೀಗಳು ಸಮಾಜಕ್ಕೆ ನೀಡಿದ ಕೊಡುಗೆ, ಮಾಡಿದ ಸಾಧನೆ ಅಪಾರ. ಯಾವುದೇ ಜಾತಿಬೇಧವಿಲ್ಲದೇ ಸರ್ವಧರ್ಮದ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ನೀಡಿದ ತ್ರಿವಿಧ ದಾಸೋಹಿಗಳು. ಇವತ್ತು ಪ್ರಪಂಚದ ಮೂಲೆಮೂಲೆಯಲ್ಲೂ ಅವರ ತ್ರಿವಿಧ ದಾಸೋಹಗ ಫಲಾನುಭವಿಗಳು ಇದ್ದಾರೆ. ಭಕ್ತರು ಇದ್ದಾರೆ. ಅನುಯಾಯಿಗಳು ಇದ್ದಾರೆ ಎಂದು ಅವರು ಹೇಳಿದರು.

ಶ್ರೀಗಳು ಈ ಸಮಾಜಕ್ಕೆ ನೀಡಿರುವ ಕೊಡುಗೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ನೆನಪು ಚಿರಸ್ಥಾಯಿ. ಆದರೂ ಅವರ ಹೆಸರಿನಲ್ಲಿ ನಾವು ಯೋಜನೆಗಳನ್ನು ಕೈಗೊಳ್ಳಬೇಕಿದೆ. ಅದು ನಮ್ಮ ಜವಾಬ್ದಾರಿಯೂ ಹೌದು, ಕರ್ತವ್ಯವೂ ಹೌದು ಎಂದು ಸಚಿವ ಶಿವಕುಮಾರ್ ತಿಳಿಸಿದರು.

Leave a Reply