ಸುಪ್ರೀಂ ಕೋರ್ಟಲ್ಲಿ ಉಲ್ಟಾ ಹೊಡೆದ ಶಬರಿಮಲೆ ದೇವಾಲಯ ಅಡಳಿತ ಮಂಡಳಿ!

ಡಿಜಿಟಲ್ ಕನ್ನಡ ಟೀಮ್:

ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದ ತೀರ್ಪಿನ ಮರುಪರಿಶೀಲನೆ ಅರ್ಜಿ ವಿಚಾರಣೆ ವೇಳೆ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಉಲ್ಟಾ ಹೊಡೆದಿದೆ. ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದ ಟಿಡಿಬಿ ಇಂದು ಕೋರ್ಟ್ ನಲ್ಲಿ ಮಹಿಳೆಯರ ಪ್ರವೇಶಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿದೆ.

10-50 ವಯೋಮಾನದ ಸ್ತ್ರೀಯರಿಗೆ ದೇವಾಲಯ ಪ್ರವೇಶಿಸುವ ಅವಕಾಶ ಕಲ್ಪಿಸಿದ ಸುಪ್ರೀಂ ತೀರ್ಪನ್ನು ಪರಿಶೀಲಿಸಲು ಸುಮಾರು 60ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ನಡೆಸಿತು. ಈ ಸಂದರ್ಭದಲ್ಲಿ ದೇವಾಲಯ ಆಡಳಿತ ಮಂಡಳಿ, ‘ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸುವ ವಿಚಾರವಾಗಿ ನಮ್ಮ ಅಭ್ಯಂತರವಿಲ್ಲ. ನ್ಯಾಯಾಲಯದ ತೀರ್ಪು ವಿರೋಧಿಸುತ್ತಿರುವವರು, ಕೋರ್ಟ್ ತೀರ್ಪನ್ನು ಒಪ್ಪಿಕೊಂಡು ನ್ಯಾಯಾಲಯಕ್ಕೆ ಗೌರವ ನೀಡಬೇಕು. ದೇವಾಲಯದ ಆಡಳಿತ ಮಂಡಳಿ ಮಹಿಳೆಯರ ಪ್ರವೇಶಕ್ಕೆ ಅಡ್ಡಿ ಪಡಿಸಿಲ್ಲ’ ಎಂದು ಹೇಳಿಕೆ ನೀಡಿದೆ.

ಇನ್ನು ಇತರೆ ಅರ್ಜಿದಾರರು, ಕೋರ್ಟ್ ತೀರ್ಪಿನಿಂದಾಗಿ ಸಮಾಜದಲ್ಲಿ ಶಾಂತಿಗೆ ಭಂಗವಾಗಿದೆ. ಹೀಗಾಗಿ ನ್ಯಾಯಾಲಯ ತೀರ್ಪು ಮರುಪರಿಶೀಲನೆ ನಡೆಸಬೇಕು ಎಂದು ವಾದ ಮಂಡಿಸಿದರು. ಇದಕ್ಕೆ ಪ್ರತಿಯಾಗಿ ಕೇರಳ ಸರ್ಕಾರ ತೀರ್ಪು ಮರುಪರಿಶೀಲನೆ ಅಗತ್ಯವೆ ಇಲ್ಲ ಎಂದು ವಾದಿಸಿದೆ.

ಎಲ್ಲರ ವಾದಗಳನ್ನು ಆಲಿಸಿರುವ ಐವರು ನ್ಯಾಯಮೂರ್ತಿಗಳ ಪೀಠ, ತೀರ್ಪನ್ನು ಕಾಯ್ದಿರಿಸಿದೆ.

Leave a Reply