‘ಕೊಟ್ಟೋನು ಕೋಡಂಗಿ, ಈಸ್ಕೊಂಡೋನು ವೀರಭದ್ರ’ನಂತಾಗಿದೆ ಬಿಜೆಪಿ ಕತೆ!

ಡಿಜಿಟಲ್ ಕನ್ನಡ ಟೀಮ್:

ವಿಧಾನಸಭೆ ಅಧಿವೇಶನ ಕಲಾಪದಿಂದ ದೂರ ಉಳಿದಿರುವ ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿಯಿಂದ ಕೋಟಿ ಕೋಟಿ ಹಣ ಪಡೆದಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಆದರೆ ಹಣ ಪಡೆದು ರಾಜೀನಾಮೆಗೆ ಮುಂದಾಗಿರೋ ಕಾಂಗ್ರೆಸ್ ಶಾಸಕರ ಹೆಡೆಮುರಿಗೆ ಕಟ್ಟಲು ನಾಯಕರು ತಂತ್ರ ರೂಪಿಸಿದ್ದು, ಆಟ ಕ್ಲೈಮಾಕ್ಸ್ ಗೆ ಬಂದು ನಿಂತಿದೆ. ಬಿಜೆಪಿಯವರಿಗೂ ಕಾಂಗ್ರೆಸ್ ನಷ್ಟೇ ಟೆನ್ಷನ್ ಶುರುವಾಗಿದೆ. ಪಕ್ಷದ ಕೆಲ ಶಾಸಕರಿಗೆ ಬಿಜೆಪಿಯವರು ಹಣ ನೀಡಿದ್ದಾರೆಂಬ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಹೇಳುವ ಮೊದಲೇ ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ರಾಜ್ಯದ ಕಾಂಗ್ರೆಸ್, ಜೆಡಿಎಸ್ ಸಂಸದರು ಬಿಜೆಪಿ ನಾಯಕರ ಬಗ್ಗೆ ವಾಗ್ದಾಳಿ ಮಾಡಿದ್ದಾರೆ. ಬಿಜೆಪಿ ನಾಯಕರು ಹಣ ಕೊಡುವುದನ್ನು ವೀಡಿಯೋ ಮಾಡಿಟ್ಟುಕೊಂಡು ಶಾಸಕರನ್ನು ಬೆದರಿಸಿ ಹೋಟೆಲ್‌ಗಳಲ್ಲಿ ಕೂಡಿ ಹಾಕಿದ್ದಾರೆ ಎಂದು ಟೀಕಿಸಿದ್ದಾರೆ. ಅಲ್ಲದೆ ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಿ ಕುದುರೆ ವ್ಯಾಪಾರಕ್ಕೆ ತಡೆಯೊಡ್ಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಸಂಸತ್‌ನಲ್ಲೂ ಪ್ರಸ್ತಾಪ ಮಾಡ್ತೇವೆ ಎಂದಿದ್ದಾರೆ. ಜೊತೆಗೆ ಬಿಜೆಪಿ ನಾಯಕರ ಕುದುರೆ ವ್ಯಾಪಾರದ ಬಗ್ಗೆ ನಮ್ಮ ಬಳಿ ದಾಖಲೆಗಳಿದ್ದು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡ್ತೇವೆ ಎಂದೂ ಗುಡುಗಿದ್ದಾರೆ.

ಬಿಜೆಪಿ ನಾಯಕರು ಕೆಲವರಿಗೆ ಹಣ ಕೊಟ್ಟು ಖರೀದಿ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಅನ್ನೋದು ಈ ಹೇಳಿಕೆಗಳಿಂದ ಗೊತ್ತಾಗ್ತಿದೆ. ಇಲ್ಲದಿದ್ದರೆ ಆಪರೇಷನ್ ಕಮಲ ಮಾಡೋದಿಲ್ಲ, ಬಜೆಟ್ ಅಧಿವೇಶನಕ್ಕೆ ಅಡ್ಡಿ ಮಾಡೋದಿಲ್ಲ ಎಂದು ರಾಜ್ಯದ ಜನರ ಎದುರು ಬಹಿರಂಗ ಹೇಳಿಕೆ ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಮ್ಮ ಮಾತಿಗೆ ಬದ್ಧರಾಗಿ ಇರಬೇಕಾಗಿತ್ತು. ಹಣ ಪಡೆದವರು ಅಧಿವೇಶನದ ಆರಂಭದಲ್ಲೇ ರಾಜೀನಾಮೆ ನೀಡುವ ಕೆಲಸ ಮಾಡ್ತಾರೆ. ಸರ್ಕಾರ ಅಲ್ಪಮತಕ್ಕೆ ಕುಸಿಯಲಿದೆ ಎಂದು ಅವರು ಭಾವಿಸಿದ್ರು. ಯಾವಾಗ ಹಣ ಪಡೆದವರು, ಹಣಕ್ಕಾಗಿ ಹಾತೊರೆಯುತ್ತಿದ್ದವರು ರಾಜೀನಾಮೆ ಮಾತು ಬಂದ ಕೂಡಲೇ ಮಾತು ನಿಲ್ಲಿಸಿ ಸೈಲೆಂಟ್ ಆದ್ರೋ ಯಡಿಯೂರಪ್ಪ ಗರಂ ಆಗಿದ್ದಾರೆ. ಜತೆಗೆ ಯೋಜನೆ ಪೂರ್ಣ ಮಾಡಲು ಹವಣಿಸುತ್ತಿದ್ದಾರೆ. ಆದ್ರೆ ಅವರು ಹಣಕೊಟ್ಟು ಮಂಗ ಆಗ್ಬಿಟ್ರಾ ಅನ್ನೊ ಮಾತುಗಳೂ ವಿಧಾನಸಭೆಯ ಮೊಗಸಾಲೆಯಲ್ಲಿ ಕೇಳಿ‌ಬರುತ್ತಿದೆ. ಒಟ್ಟಾರೆ ಸಿದ್ದರಾಮಯ್ಯ ಹೇಳಿದಂತೆ ಬಿಜೆಪಿ ಹಿಂಗು ತಿಂದ ಮಂಗನಂತೆ ಆಗುತ್ತಾ ಅಥವಾ ಸರ್ಕಾರ ಬೀಳಿಸುತ್ತಾ ಕಾದು ನೋಡ್ಬೆಕು.

Leave a Reply