ಡಿಜಿಟಲ್ ಕನ್ನಡ ಟೀಮ್:
ಬಜೆಟ್ ಮಂಡನೆ ದಿನವೇ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಕರೆದಿದ್ದಾರೆ. ಇದರ ಹಿಂದೆ ಬಿಜೆಪಿಯ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಕಾರ್ಯತಂತ್ರ ರೂಪಿಸಲಾಗುತ್ತದೆ. ಆ ಕಾರ್ಯತಂತ್ರ ಏನು ಎಂದು ಸಾಧ್ಯ ಕುತೂಹಲ ಮೂಡಿಸಿದೆ.
ಸಭೆಗೆ ಎಲ್ಲಾ ಕಾಂಗ್ರೆಸ್ ಶಾಸಕರು ಹಾಜರಾಗಲೇಬೇಕು; ಇಲ್ಲವಾದಲ್ಲಿ ಗೈರಾದ ನಾಯಕರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದೀಗ ಸತತವಾಗಿ ಸಿಎಲ್ಪಿ ಸಭೆಗೆ ಅತೃಪ್ತ ಶಾಸಕರು ಗೈರಾಗುತ್ತಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ಮತ್ತೊಮ್ಮೆ ಶಾಸಕಾಂಗ ಸಭೆ ಕರೆದಿರುವ ಸಿದ್ದರಾಮಯ್ಯ, ಈ ಬಾರಿ ಸಭೆಗೆ ಹಾಜರಾಗದೇ ಹೋದ ಶಾಸಕರಿಗೆ ವಿಪ್ ಜಾರಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಾಳೆ ಮೈತ್ರಿ ಸರ್ಕಾರದ ಬಜೆಟ್ ಮಂಡನೆ ನಡೆಯಲಿದೆ. ಸಿಎಂ ಕುಮಾರಸ್ವಾಮಿಯವರೇ ಬಜೆಟ್ ಮಂಡಿಸಲಿದ್ದು, ಜನಪ್ರಿಯ ಯೋಜನೆ ಘೋಷಿಸುವ ನಿರೀಕ್ಷೆ ಇದೆ. ಈ ಮುನ್ನವೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಆಪರೇಷನ್ ಕಮಲ ಸೇರಿದಂತೆ ಹಲವು ವಿಚಾರಗಳನ್ನು ಇಲ್ಲಿ ಚರ್ಚಿಸಲಿದ್ದಾರೆ.
ಇತ್ತೀಚೆಗೆ ಬುಧವಾರ ಆರಂಭವಾದ ಜಂಟಿ ಅಧಿವೇಶದನ ಮೊದಲ ದಿನವೂ ಸುಮಾರು ಕಾಂಗ್ರೆಸ್ಸಿನ 8 ಅತೃಪ್ತ ಶಾಸಕರು ಸದನಕ್ಕೆ ಗೈರಾಗಿದ್ದರು. ಈ ಹಿಂದೆಯೂ ಜ.18 ರಂದು ನಡೆದಿದ್ದ ಸಿಎಲ್ಪಿ ಸಭೆಗೂ ನಾಲ್ವರು ಶಾಸಕರು ಗೈರಾಗಿದ್ದರು. ಸತತವಾಗಿ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗುತ್ತಿರುವ ಶಾಸಕರಿಗೆ ಬಿಸಿ ಮುಟ್ಟಿಸಲು ಸಿದ್ದರಾಮಯ್ಯನವರು ಮುಂದಾಗಿದ್ದಾರೆ. ಹೀಗಾಗಿ ನಾಳೆ ಫೆಬ್ರವರಿ 8ಕ್ಕೆ ಸಿಎಲ್ಪಿ ಸಭೆ ಕರೆದಿದ್ದಾರೆ. ಅಲ್ಲದೇ ಈ ಸಭೆಗೆ ಎಷ್ಟು ಜನ ಆಗಮಿಸಲಿದ್ದಾರೆ? ಮತ್ತು ಗೈರಾಗಲಿದ್ದಾರೆ? ಎಂದು ಕಾದು ನೋಡಬೇಕಿದೆ.
ಇನ್ನು ಅತೃಪ್ತರ ಆಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಬಲ ಅಸ್ತ್ರ ಪ್ರಯೋಗಿಸುವ ಇರಾದೆಯಲ್ಲಿದ್ದಾರೆ. ಹೀಗಾಗಿಯೇ ನಾಳೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಬೇಕೆಂದು ಸಿದ್ದರಾಮಯ್ಯ ಅವರು ಎಲ್ಲಾ ಕಾಂಗ್ರೆಸ್ ಶಾಸಕರಿಗೂ ವಿಪ್ ಹೊರಡಿಸಿದ್ದಾರೆ. ಯಾವುದೇ ಕಾರಣ ನೀಡದೇ ಸಭೆಗೆ ತಪ್ಪದೇ ಹಾಜರಾಗಬೇಕು ಎಂದು ಕಟ್ಟುನಿಟ್ಟಿನ ಅಪ್ಪಣೆ ಹಾಕಿದ್ದಾರೆ.
ಒಂದು ವೇಳೆ ಸಕಾರಣವಿಲ್ಲದೆ ಸಭೆಗೆ ಬರದೇ ಇದ್ದರೆ ಅಂಥವರನ್ನು ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸುವ ಯೋಜನೆಯಲ್ಲಿದ್ದಾರೆ ಸಿದ್ದರಾಮಯ್ಯ. ಇದು ಅತೃಪ್ತ ಶಾಸಕರನ್ನು ಭಯಭೀತಗೊಳಿಸಿದೆ. ಶಾಸಕ ಸ್ಥಾನ ಅನರ್ಹಗೊಂಡರೆ ಮುಂದಿನ 6 ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ. ಹೀಗಾದರೆ ಹೆಚ್ಚೂ ಕಡಿಮೆ ಆ ವ್ಯಕ್ತಿಯ ರಾಜಕೀಯ ಭವಿಷ್ಯಕ್ಕೆ ಚ್ಯುತಿ ಬಂದಂತೆಯೇ ಆಗುತ್ತದೆ.
ನಿನ್ನೆಯಷ್ಟೇ ಸದನಕ್ಕೆ ಗೈರಾಗುವಂತೆ ಕಾಂಗ್ರೆಸ್ ಶಾಸಕನಿಗೆ ಬಿಜೆಪಿ 30 ಕೋಟಿ ಆಮಿಷವೊಡ್ಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು. ನಮ್ಮ ಶಾಸಕನ ಮನೆಗೆ ಬಿಜೆಪಿ ನಾಯಕರು ಸೂಟ್ಕೇಸ್ ಸಮೇತ ಹೋಗಿದ್ದಾರೆ. 30 ಕೋಟಿ ರೂ. ಆಫರ್ ಅನ್ನು ಕಾಂಗ್ರೆಸ್ ಶಾಸಕನೋರ್ವ ತಿರಸ್ಕರಿಸಿದ್ದಾನೆ. ಆತನಿಗೆ ಸದನಕ್ಕೆ ಗೈರಾದರೆ 30 ಕೋಟಿ ರೂ. ನೀಡುವುದಾಗಿ ಆಮಿಷವೊಡ್ಡಿದ್ದಾರೆ. ಆದರೆ, ನಮ್ಮ ಶಾಸಕ ಬಿಜೆಪಿಯ ಆಮಿಷಕ್ಕೆ ಮಣಿದಿಲ್ಲ ಎಂದು ತಿಳಿಸಿದ್ದರು.