ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಸರ್ಕಾರವನ್ನು ಕೆಡವಲು ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರಾದ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ಹಾಗೂ ನಾಗೇಂದ್ರ ಅವರನ್ನು ಮುಂಬೈನ ಹೋಟೆಲ್ನಲ್ಲಿ ಇಟ್ಟುಕೊಂಡಿದ್ದಾರೆ. ಅವರನ್ನು ನೋಡಿಕೊಳ್ಳಲು ಮಲ್ಲೇಶ್ವರಂ ಬಿಜೆಪಿ ಶಾಸಕ ಡಾ ಆಶ್ವಥ್ ನಾರಾಯಾಣ್ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅತೃಪ್ತರ ಜೊತೆಯಲ್ಲೇ ಠಿಕಾಣಿ ಹೂಡಿದ್ದಾರೆ. ಇದೇ ಕಾರಣಕ್ಕೆ ಇಂದಿನ ಬಜೆಟ್ ಅಧಿವೇಶನದಿಂದಲೂ ದೂರ ಉಳಿದಿದ್ದಾರೆ. ಕಾಂಗ್ರೆಸ್ನ ನಾಲ್ವರು ಅತೃಪ್ತ ಶಾಸಕರು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ರೆ ಇನ್ನೂ ಐವರು ಬಜೆಟ್ ಅಧಿವೇಶನಕ್ಕೆ ಬಂದಿಲ್ಲ. ಇವರೆಲ್ಲಾ ಬಿಜೆಪಿ ಸಂಪರ್ಕದಲ್ಲಿ ಇದ್ದಾರಾ ಅನ್ನೋ ಅನುಮಾನ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ.
ಈ ನಡುವೆ ಮೈತ್ರಿ ಸರ್ಕಾರವೇನು ಕೈಕಟ್ಟಿ ಕುಳಿತಿಲ್ಲ. ಒಂದು ವೇಳೆ ಕಾಂಗ್ರೆಸ್ನ ಅತೃಪ್ತ ಶಾಸಕರನ್ನು ಬಿಜೆಪಿ ನಾಯಕರು ರಾಜೀನಾಮೆ ಕೊಡಿಸಲು ಮುಂದಾದ್ರೆ, ಮೈತ್ರಿ ಸರ್ಕಾರ ಕೂಡ ಬಿಜೆಪಿ ಶಾಸಕರನ್ನು ರಾಜೀನಾಮೆ ಕೊಡಿಸಲು ಯೋಜನೆ ರೂಪಿಸಿದೆ. ಬಿಜೆಪಿಯ ಒಟ್ಟು 6 ಮಂದಿ ಶಾಸಕರು ಗೈರು ಹಾಜರಾಗಿದ್ದು, ಅದರಲ್ಲಿ ಇಬ್ಬರು ಮುಂಬೈನಲ್ಲಿ ಶಾಸಕರ ಉಸ್ತುವಾರಿ ನೋಡಿಕೊಳ್ತಿದ್ರೆ, ಇನ್ನೂ ನಾಲ್ವರು ಶಾಸಕರು ಬಿಜೆಪಿಗೆ ತಲೆನೋವು ತರಿಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಶಾಸಕರನ್ನು ರಾಜೀನಾಮೆ ಕೊಡಿಸಿದ್ರೆ ಸರ್ಕಾರ ಕೂಡ ನಾಲ್ವರು ಶಾಸಕರನ್ನು ಸೆಳೆದುಬಿಡುತ್ತಾ ಅನ್ನೋ ಆತಂಕ ಕಮಲ ಪಾಳಯವನ್ನೂ ಕಾಡುವಂತೆ ಮಾಡಿದೆ.
ಈ ನಡುವೆ ಅಧಿವೇಶನದ ಎರಡನೇ ದಿನವೇ ಕಾಂಗ್ರೆಸ್ ಶಾಸಕರನ್ನು ಕರೆತಂದು ರಾಜೀನಾಮೆ ನೀಡಿಸಲು ಬಿಜೆಪಿ ಪಾಳಯ ಚಿಂತನೆ ನಡೆಸಿದ್ರೆ, ಅಷ್ಟರೊಳಗಾಗಿ ಇಬ್ಬರು ಅತೃಪ್ತರನ್ನು ಅನರ್ಹ ಮಾಡಲು ಸ್ಪೀಕರ್ಗೆ ಶಿಫಾರಸು ಮಾಡಲು ಕಾಂಗ್ರೆಸ್ ಕೂಡ ಸಂಚು ಮಾಡಿಕೊಂಡಿದೆ. ಕಾಂಗ್ರೆಸ್ ಶಾಸಕರಿಗೆ ಬರೋಬ್ಬರಿ 30 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೂ ಮಾಜಿ ಪ್ರಧಾನಿ ದೇವೇಗೌಡರೂ ಕೂಡ ದೆಹಲಿಯಲ್ಲಿ ಬಿಜೆಪಿ ಆಪರೇಷನ್ ಬಗ್ಗೆ ಮಾತನಾಡಿದ್ದು, ತಾಕತ್ತಿದ್ರೆ ಬಿಜೆಪಿ ಅವಿಶ್ವಾಸ ಮಂಡನೆ ಮಾಡಲಿ, ಮೈತ್ರಿ ಸರ್ಕಾರ ಕೂಡ ಸದನದಲ್ಲೇ ತನ್ನ ವಿಶ್ವಾಸ ಮತ ಯಾಚಿಸಿ ಗೆಲ್ಲಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಮೈತ್ರಿ ಸರ್ಕಾರವನ್ನು ಬಿಜೆಪಿ ಉರುಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.