ಮಹಾಘಟಬಂಧನವನ್ನು ಕಲಬೆರಕೆ ಎಂದ ಮೋದಿ! ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

‘ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ಐದು ವರ್ಷಗಳ ಆಡಳಿತದಲ್ಲಿ ಕಳಂಕರಹಿತನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕೇಂದ್ರ ಸರಕಾರ ಬಡವರ ಪರ ಕೆಲಸ ಮಾಡಿದೆ. ಮಹಾಘಟಬಂಧನ ಹೆಸರಲ್ಲಿ ವಿರೋಧ ಪಕ್ಷಗಳು ಒಟ್ಟಾಗುತ್ತಿದ್ದು, ದೇಶದ ಜನರಿಗೆ ಈ ಭ್ರಷ್ಟಾಚಾರ, ಅವಕಾಶವಾದಿ ರಾಜಕಾರಣಗಳ ಕಲಬೆರಕೆ ಸರ್ಕಾರದ ಅಗತ್ಯವಿಲ್ಲ…’ ಇದು ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯ ಕುರಿತ ಚರ್ಚೆ ವೇಳೆ ಹೇಳಿದ ಮಾತುಗಳು.

ಕಳೆದ ಐದು ವರ್ಷಗಳ ಆಡಳಿತದಲ್ಲಿ ತಮ್ಮ ಸರ್ಕಾರದ ಸಾಧನೆಯನ್ನು ಪುನರುಚ್ಛರಿಸಿದ ಮೋದಿ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳನ್ನು ತಮ್ಮ ಮಾತಿನಲ್ಲೇ ನೀರಿಳಿಸಿದರು. ಮೋದಿ ತಮ್ಮ ಭಾಷಣದಲ್ಲಿ ಹೇಳಿದ ಪ್ರಮುಖ ಅಂಶಗಳು ಹೀಗಿವೆ…

  • ಕಾಂಗ್ರೆಸ್, ಕೇಂದ್ರ ಸರಕಾರದ ಎಲ್ಲ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಅಪಮಾನಿಸುತ್ತಾ ಬಂದಿದೆ.
  • ಯೋಜನಾ ಆಯೋಗವನ್ನು ಜೋಕರ್‌ಗಗಳ ಗುಂಪು ಎಂದು ಕಾಂಗ್ರೆಸ್ ಕರೆದಿತ್ತು.
  • ಕ್ರಿಸ್ತ ಪೂರ್ವ ಹಾಗು ಕ್ರಿಸ್ತ ಶಕ ಎಂದು ಇಂಗ್ಲಿಷ್ನಲ್ಲಿ ಕರೆಯುವ ಬಿಸಿ ಮತ್ತು ಎಡಿಗೆ ಹೊಸ ವ್ಯಾಖ್ಯಾನ ನೀಡಿದರು. ಬಿಸಿ ಎಂದರೆ ‘ಬಿಫೋರ್ ಕಾಂಗ್ರೆಸ್’, ಎಡಿ ಎಂದರೆ ‘ಆಫ್ಟರ್ ಡೈನಾಸ್ಟಿ’.
  • ಕಾಂಗ್ರೆಸ್ ತನ್ನ ಅಹಂಕಾರದಿಂದ ಲೋಕಸಭೆಯಲ್ಲಿ 400 ರಿಂದ 44 ಕ್ಷೇತ್ರಗಳಿಗೆ ಕುಸಿದಿದೆ.
  • ಇಂದು ಖರ್ಗೆ ಅವರು ಬಸವಣ್ಣನ ವಚನಗಳನ್ನು ಹೇಳುತ್ತಿದ್ದರು. ಅವರಿಗೆ ನಾನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ನೀವು ಕರ್ನಾಟಕದಿಂದ ಬಂದವರು. ಇಷ್ಟು ವರ್ಷಗಳ ಕಾಲ ನೆನಪಿಗೆ ಬಾರದ ಬಸವಣ್ಣನವರನ್ನು ಈಗ ನೆನಪಿಸಿಕೊಳ್ಳುತ್ತಿರುವುದೇಕೆ? ಬಸವಣ್ಣನವರ ಸಂದೇಶಗಳನ್ನು 25-30 ವರ್ಷಗಳ ಹಿಂದೆಯೇ ಓದಿಕೊಂಡಿದ್ದರೆ, ನೀವು ತಪ್ಪು ನಿರ್ಣಯ ಹಾಗೂ ನೀತಿಗಳನ್ನು ರೂಪಿಸುತ್ತಿರಲಿಲ್ಲ.
  • ಕಾಂಗ್ರೆಸ್ ಮುಕ್ತ ಭಾರತ ಎಂಬುದು ನನ್ನ ಘೋಷಣೆಯಲ್ಲ. ಮಹಾತ್ಮ ಗಾಂಧಿ ಅವರು ತಮ್ಮ ಕಾಲದಲ್ಲೇ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಲು ಸಲಹೆ ನೀಡಿದ್ದರು. ಅವರ ಆಸೆಯನ್ನು ನಾನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇನೆ. ನೀವು ಎಷ್ಟೇ ಪ್ರಯತ್ನ ಪಟ್ಟರೂ ಈ ಗುರಿಯನ್ನು ಸಾಧಿಸುವ ಮೂಲಕ ನಾನು ಗಾಂಧೀಜೀ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿಯೇ ತೀರುತ್ತೇನೆ.
  • ಎನ್‌ಡಿಎ ಆಡಳಿತಾವಧಿಯಲ್ಲಿ ದೇಶದ ಎಲ್ಲಾ ಗ್ರಾಮಗಳಲ್ಲಿ ಶೇ.100ರಷ್ಟು ವಿದ್ಯುದೀಕರಣ ಮಾಡಲಾಗಿದೆ.
  • 10 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
  • ಉತ್ತಮ ಆರೋಗ್ಯ ಸೇವೆ ಒದಗಿಸಲು ಆಯುಷ್ಮಾನ್ ಭವ ಯೋಜನೆ ಜಾರಿಗೊಳಿಸಲಾಗಿದೆ. ಸ್ಟೆಂಟ್‌ಗಳ ದರವನ್ನು ಇಳಿಸಿ ಬಡವರಿಗೆ ನೆರವಾಗಿದೆ.
  • ಕಾಂಗ್ರೆಸ್‌ ಹಣದುಬ್ಬರದ ಜತೆ ಅವಿನಾಭಾವ ಸಂಬಂಧ ಹೊಂದಿದೆ. ಅವರು ಅಧಿಕಾರದಲ್ಲಿ ಇದ್ದಾಗ ಬೆಲೆಗಳು ಏರಿಕೆಯಾಗಿವೆ.

Leave a Reply