ಆಡಿಯೋ ನಿಜ ಎಂದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಬಿಎಸ್ ವೈ ಸವಾಲ್!

ಡಿಜಿಟಲ್ ಕನ್ನಡ ಟೀಮ್:

‘ಆಪರೇಷನ್ ಕಮಲದ ಕುರಿತಾಗಿ ಸಿಎಂ ಕುಮಾರಸ್ವಾಮಿ ಅವರು ಇಂದು ಬಿಡುಗಡೆ ಮಾಡಿರುವ ಆಡಿಯೋ ನಕಲಿ. ಒಂದು ವೇಳೆ ಅದು ನಿಜ ಎಂದು ಸಾಬೀತು ಪಡಿಸಿದ್ದೇ ಆದರೆ ನಾನು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮಾತ್ರವಲ್ಲ. ಶಾಸಕ ಸ್ಧಾನಕ್ಕೂ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ…’ ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಹಾಕಿರುವ ಸವಾಲ್!

ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ ಬಿಎಸ್ ವೈ ಹೇಳಿದ್ದಿಷ್ಟು…

‘ಸಿಎಂ ಕುಮಾರಸ್ವಾಮಿ ಸಿನಿಮಾದಲ್ಲಿ ನಿಪುಣರು. ಏನು ಬೇಕಾದ್ರೂ ಸೃಷ್ಟಿ ಮಾಡುತ್ತಾರೆ. ಜೆಡಿಎಸ್​ ಎಂಎಲ್​ಎ ಶರಣಗೌಡರೊಂದಿಗೆ ಮಾತನಾಡಿದ ಆಡಿಯೋ ನಿಜ ಎಂದು ಸಾಬೀತು ಮಾಡಲಿ ಇಂದೇ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ.

‘ಸ್ಪೀಕರ್​ , ಸುಪ್ರೀಂಕೋರ್ಟ್​ ನ್ಯಾಯಾಮೂರ್ತಿಗಳ ಬಗ್ಗೆ ಆ ರೀತಿ ಮಾತನಾಡಲು ಸಾಧ್ಯವಾ. ಈ ಆಡಿಯೋ ನಿಜ ಎಂದು ಸಾಬೀತು ಮಾಡಲಿ ನಾನು ನನ್ನ ಎಂಎಲ್​ಎ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಬಿಟ್ಟುಬಿಡುತ್ತೇನೆ.

ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ, ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ನಾಗನಗೌಡ ಆಡಿಯೋ ಸತ್ಯಕ್ಕೆ ದೂರವಾದದ್ದು. ಇದೆಲ್ಲಾ ಕುಮಾರಸ್ವಾಮಿ ಕಟ್ಟುಕತೆ. ನಾನು ದೇವಾಲಯಕ್ಕೆ ಭೇಟಿ ನೀಡಲು ದೇವದುರ್ಗಕ್ಕೆ ಹೋಗಿದ್ದೆ.

ನಿಮ್ಮ ಶಾಸಕರಿಗೆ ಆಮಿಷ ಒಡ್ಡಿದ್ದೆವೆ ಎಂದು ಆರೋಪ ಮಾಡುತ್ತೀರಲ್ಲಾ. ನೀವು ಸುಭಾಷ್ ಗುತ್ತಿದಾರ್​ಗೆ ಮಂತ್ರಿ ಸ್ಥಾನದ ಆಮಿಷ ನೀಡಿರಲಿಲ್ಲವಾ?

ಶರಣಗೌಡನ ಜೊತೆ ನಾನು ಮಾತನಾಡಿದ್ದೇನೆ ಎಂದು ಸುಳ್ಳು ಆಡಿಯೋ ಬಿಡುಗಡೆ ಮಾಡುವ ಮೂಲಕ ರಾಜ್ಯದಲ್ಲಿ​ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ, ತಮ್ಮಲ್ಲಿರುವ ಅಸಮಾಧಾನ ಮುಚ್ಚಿಕೊಳ್ಳಲು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ.

ಮೈತ್ರಿ ಸರ್ಕಾರದ 20ಕ್ಕೂ ಹೆಚ್ಚು ಶಾಸಕರು ಕುಮಾರಸ್ವಾಮಿಯನ್ನು ಸಿಎಂ ಎಂದು ಒಪ್ಪಿಕೊಂಡಿಲ್ಲ. ಸಾಲಮನ್ನಾ ಬಗ್ಗೆ ಸುಳ್ಳು ಹೇಳುತ್ತಾ ಜನರಿಗೆ ಮೋಸ ಮಾಡುತ್ತಿದ್ದೀರಾ. ಸರ್ಕಾರ ರಚನೆಯಾಗಿ 9 ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಬರಗಾಲದಿಂದ ರೈತರು ತತ್ತರಿಸಿದ್ದಾರೆ. ರಾಜ್ಯದಲ್ಲಿ ಅರಾಜಕತೆ ಇದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಒಂದೇ ಕಂತಿನಲ್ಲಿ 48 ಸಾವಿರ ಕೋಟಿ ಸಾಲಮನ್ನಾ ಮಾಡುತ್ತೀನಿ ಎಂದಿರಲ್ಲಾ ಆ ಮಾತನ್ನು ಮೊದಲು ಈಡೇರಿಸಿದ್ದೀರಾ?

ಬಜೆಟ್​ ಅಧಿವೇನದಲ್ಲಿ ನಾನು ಭಾಗಿಯಾಗಿತ್ತೇನೆ . ಚರ್ಚೆಯಲ್ಲಿಯೂ ಭಾಗಿಯಾಗುತ್ತೇನೆ. ಇಷ್ಟು ತಿಂಗಳು ಆಡಳಿತ ನಡೆಸಿದ ನೀವು ಏನು ಅಭಿವೃದ್ಧಿ ಕಾರ್ಯ ಮಾಡಿದ್ದೀರಾ ಎಂದು ಪ್ರಶ್ನಿಸುತ್ತೇನೆ. ಈ ಸರ್ಕಾರಕ್ಕೆ ಕಿಂಚಿತ್ತೂ ಮಾನ ಮರ್ಯಾದೆ ಇಲ್ಲ. ಇದ್ದಿದ್ದರೆ, ರಾಜೀನಾಮೆ ನೀಡುತ್ತಿದ್ದರು.

Leave a Reply