ಡಿಜಿಟಲ್ ಕನ್ನಡ ಟೀಮ್:
ಬಿಜೆಪಿ ನಾಯಕರು ಕಳೆದ ಎರಡು ದಿನಗಳಿಂದ ಬಜೆಟ್ ಅಧಿವೇಶನ ನಡೆಯುವುದಕ್ಕೆ ಅವಕಾಶ ಕೊಟ್ಟಿಲ್ಲ. ಇವತ್ತು ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆಗೆ ಅವಕಾಶ ನೀಡಬಾರದು ಅನ್ನೋ ಲೆಕ್ಕಾಚಾರದಲ್ಲೂ ಇದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಬಜೆಟ್ ಮಂಡನೆಗೆ ಅವಕಾಶ ಕೊಡಬಾರದು. ಒಂದು ವೇಳೆ ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿದ್ರೆ ಅಂಗೀಕಾರ ಆಗದಂತೆ ಏನು ಮಾಡಬೇಕೋ ಅದನ್ನು ಮಾಡಿಯೇ ತೀರಬೇಕು ಅನ್ನೋ ಲೆಕ್ಕಾಚಾರ ಕಮಲ ನಾಯಕರದ್ದು. ಈ ಅಧಿವೇಶನದಲ್ಲಿ ಬಜೆಟ್ ಅಂಗೀಕಾರಗೊಂಡು ಸದನದ ಒಪ್ಪಿಗೆ ದೊರೆಯದಿದ್ದರೆ, ಸರ್ಕಾರ ಹಣ ಖರ್ಚು ಮಾಡಲು ಸಾಧ್ಯವಾಗದೆ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಲಿದೆ. ಒಂದು ವೇಳೆ ಬಜೆಟ್ಗೆ ಸದನದಲ್ಲಿ ಸೋಲಾದರೆ ಸರ್ಕಾರಕ್ಕೆ ಸೋಲು ಆದಂತೆ ಎನ್ನುವುದು ಬಿಜೆಪಿ ನಾಯಕರ ಯೋಜನೆ.
ಸರ್ಕಾರ ಕೂಡ ಬಿಜೆಪಿ ನಾಯಕರ ಯೋಜನೆ ತಲೆ ಕೆಳಗೆ ಮಾಡಲು ಪ್ರತಿತಂತ್ರ ರೂಪಿಸಿದ್ದು, ಬಜೆಟ್ ಮಂಡಿಸಿಯೇ ಸಿದ್ಧ ಎಂದು ಪಣ ತೊಟ್ಟಿರುವ ಸಿಎಂ, ಬಿಜೆಪಿ ನಾಯಕರ ಯೋಜನೆಗಳನ್ನು ತಲೆ ಕೆಳಗಾಗುವಂತೆ ಮಾಡಲು ಸರ್ಕಾರ ಕೂಡ ಯೋಜನೆ ರೂಪಿಸಿದ್ದು, ಬಜೆಟ್ ಪ್ರತಿ ಹರಿಯುವುದನ್ನು ತಡೆಯಲು ಬಜೆಟ್ ಪ್ರತಿಯನ್ನು ಭಾಷಣ ಮುಗಿಯುವ ತನಕ ಕೊಡದೇ ಇರಲು ನಿರ್ಧಾರ ಮಾಡಲಾಗಿದೆ. ಒಂದು ವೇಳೆ ಬಿಜೆಪಿ ನಾಯಕರು ಬಾವಿಗಿಳಿದು ಪ್ರತಿಭಟನೆ ಮಾಡಿದ್ರೆ ಬಿಜೆಪಿ ಸದಸ್ಯರನ್ನು ಅಮಾನತು ಮಾಡಿ ಸದನದಿಂದ ಹೊರಗೆ ಇಡುವ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ. ಒಂದು ವೇಳೆ ಅಮಾನತುಗೊಂಡರೆ ಬಜೆಟ್ ಮಂಡನೆ ಹಾಗೂ ಅಂಗೀಕಾರ ಸರಳವಾಗಲಿದೆ.
ಇನ್ನು ಅತೃಪ್ತರು ರಾಜೀನಾಮೆ ನೀಡಲು ಮುಂದಾದರೆ ಕಾಂಗ್ರೆಸ್ ಪಕ್ಷದಿಂದ ಅಮಾನತು ಹಾಗೂ ಶಾಸಕ ಸ್ಥಾನದಿಂದ ಅನರ್ಹ ಮಾಡಲು ಮೈತ್ರಿ ಪಕ್ಷಗಳು ಮಾನಸಿಕವಾಗಿ ಸಿದ್ದವಾಗಿದ್ದು, ಅಧಿವೇಶನವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಬೇಕು ಅನ್ನೋ ಚಿಂತನೆಯಲ್ಲಿದ್ದಾರೆ. ಒಂದು ವೇಳೆ ಅತೃಪ್ತರು ರಾಜೀನಾಮೆ ಕೊಡಲು ಮುಂದಾಗ್ತಿದ್ದ ಹಾಗೆ ಅನರ್ಹ ಮಾಡಿ ಸ್ಪೀಕರ್ ಆದೇಶ ಮಾಡಿದರೆ, ಅವರು ಕೋರ್ಟ್ ಮೊರೆ ಹೋಗಲಿದ್ದಾರೆ. ಹೈಕೋರ್ಟ್ನಲ್ಲಿ ಕೆಲವು ತಿಂಗಳು ಕಾಲ ಎಳೆದಾಡಬಹುದು. ಒಂದು ವೇಳೆ ಸರ್ಕಾರದ ವಿರುದ್ಧವಾಗಿ ತೀರ್ಪು ಬಂದರೆ, ಮತ್ತೆ ಸುಪ್ರೀಂಕೋರ್ಟ್ನಲ್ಲಿ ಸರ್ಕಾರ ಮೇಲ್ಮನವಿ ಸಲ್ಲಿಸುವ ಮೂಲಕ ಮತ್ತೆ ಕಾನೂನು ಬಲೆಯೊಳಗೆ ಸಿಲುಕಿಸಿಕೊಳ್ಳಬಹುದು. ಅಷ್ಟರೊಳಗೆ ಸುಭದ್ರ ಸರ್ಕಾರಕ್ಕೆ ಏನು ಬೇಕು ಅದನ್ನು ನೆಮ್ಮದಿಯಾಗಿ ಮಾಡಬಹುದು ಅನ್ನೋದು ಮೈತ್ರಿ ಸರ್ಕಾರದ ಲೆಕ್ಕಾಚಾರ. ಒಟ್ಟಾರೆ ಇವತ್ತು ಸಾಕಷ್ಟು ಬೆಳವಣಿಗೆ ನಡೆಯೋ ಎಲ್ಲಾ ಸಾಧ್ಯತೆಗಳೂ ಇವೆ.