ನೇಗಿಲ ಯೋಗಿಯ ಹೆಗಲಿಗೆ ಎಚ್ ಡಿಕೆ ಬಜೆಟ್ ಬಲ!

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ನಾಯಕರ ಸಭಾತ್ಯಾಗದ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2019ನೇ ಸಾಲಿನ ಆಯವ್ಯಯ ಬಜೆಟ್ ಮಂಡನೆ ಮಾಡಿದ್ದು, ರೈತರು, ನೀರಾವರಿ, ವಿವಿಧ ಬೆಳೆಗಳಿಗೆ ಉತ್ತೇಜನ, ರೇಷ್ಮೆ, ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ ಕೃಷಿಕ ವರ್ಗಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ಬೆನ್ನಲ್ಲಿ ಮಂಡನೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್ ಭಾರಿ ನಿರೀಕ್ಷೆ ಮೂಡಿಸಿತ್ತು. ಇನ್ನು ಆಪರೇಷನ್ ಕಮಲ ಹಾಗೂ ಕಾಂಗ್ರೆಸ್ ಶಾಸಕರ ಬಂಡಾಯದ ಹಿನ್ನೆಲೆಯಲ್ಲಿ ಬಜೆಟ್ ಮಂಡನೆ ಆಗುತ್ತಾ ಎಂಬ ಅನುಮಾನ ಮೂಡಿತ್ತು. ಬಜೆಟ್ ಆರಂಭವಾಗುವ ಮುನ್ನ ಬಜೆಟ್ ಮಂಡನೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ನಂತರ ಉಲ್ಟ ಹೊಡೆದರು. ಬಜೆಟ್ ಆರಂಭವಾಗುತ್ತಿದ್ದಂತೆ ಬಜೆಟ್ ನೀಡಿಲ್ಲ ಎಂದು ಗದ್ದಲ ಎಬ್ಬಿಸಿದ ಬಿಜೆಪಿ ನಾಯಕರು ನಂತರ ಸಭಾತ್ಯಾಗ ಮಾಡಿದರು.

ನಂತರ ಕುಮಾರಸ್ವಾಮಿ ಅವರು ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಕ್ರಮ ಹಾಗೂ ಯೋಜನೆಗಳನ್ನು ಪ್ರಸ್ತಾಪಿಸಿದರು. ನಂತರ ಮುಂದಿನ ಆರ್ಥಿಕ ವರ್ಷದಲ್ಲಿ ಸರ್ಕಾರದ ಯೋಜನೆಗಳನ್ನು ಮುಂದಿಟ್ಟರು.

ಕೃಷಿ ಜತೆಗೆ ನೀರಾವರಿ, ಆರೋಗ್ಯ, ಮಹಿಳಾ ಹಾಗೂ ಮಕ್ಕಳ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕೇಂದ್ರದ ಆಯುಷ್ ಮಾನ್ ಭಾರತ ಯೋಜನೆಯಲ್ಲಿ ಫಲಾನುಭವಿಯಾಗದೇ ಉಳಿಯುವ ಇತರೆ ಬಡವರಿಗೆ ಇದೇ ಸೌಲಭ್ಯವನ್ನು ನೀಡಲು ನಿರ್ಧರಿಸಿದ್ದು, ರಾಜ್ಯ ಸರ್ಕಾರವೇ ಶೇ.100ರಷ್ಟು ವೆಚ್ಚ ಭರಿಸಲಿದೆ.

ತಮ್ಮ ಯೋಜನೆಗಳಿಗೆ ಸಂಪನ್ಮೂಲ ಕ್ರೂಡಿಕರಿಸಲು ಅಬಕಾರಿ ಸುಂಕ ಹೆಚ್ಚಿಸಲಾಗಿದೆ. ಪ್ರಸಕ್ತ ಸಾಲಿನ ಆರ್ಥಿಕ ವರ್ಷಕ್ಕೆ 20,950 ಕೋಟಿ ರುಪಾಯಿ ರಾಜಸ್ವ ಸಂಗ್ರಹಣೆ ಗುರಿ ಹೊಂದಿರುವ ರಾಜ್ಯ ಸರ್ಕಾರ ಬಿಯರ್, ಡ್ರಾಟ್ ಬಿಯರ್, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಕಡಿಮೆ ಆಲ್ಕೋಹಾಲಿಕ್ ಬಿವರೇಜಸ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಲು ನಿರ್ಧರಿಸಿದೆ.
ರೈತರ ಸಾಲ ಮನ್ನಾ ಮತ್ತಿತರ ವಲಯಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ಅಬಕಾರಿ ಆದಾಯ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಜಿ.ಎಸ್.ಟಿ. ಅಡಿ ರಾಜಸ್ವ ಅಂತರ ಸರಿದೂಗದಿದ್ದರೆ ರಾಜ್ಯಗಳಿಗೆ ಪರಿಹಾರ ಕಾಯ್ದೆಯಡಿ ನಿಗದಿಪಡಿಸಿದಂತೆ ಸಾಕಷ್ಟು ಪರಿಹಾರವನ್ನು 2025ನೇ ಸಾಲಿನವರೆಗೂ ವಿಸ್ತರಿಸುವಂತೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಒತ್ತಾಯಿಸಿದ್ದಾರೆ.

ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳು…

ಸಿರಿ ಧಾನ್ಯಗಳ ವಿಸ್ತೀರ್ಣ ಹೆಚ್ಚಿಸುವ ಸಲವಾಗಿ ‘ರೈತ ಸಿರಿ’ ಹೆಸರಿನ ನೂತನ ಯೋಜನೆ. ಇದಕ್ಕಾಗಿ 10 ಕೋಟಿ ಬಿಡುಗಡೆ.

ಕೃಷಿ ಭಾಗ್ಯ, ಸಾವಯವ ಕೃಷಿ, ಶೂನ್ಯ ಬಂಡವಾಳ , ಕೃಷಿ ಹಾಗೂ ಇಸ್ರೇಲ್ ಮಾದರಿ ಕಿರು ನಿರಾವರಿ ಕಾರ್ಯಕ್ರಮಗಳಿಗೆ ಒಟ್ಟು 472 ಕೋಟಿ ರೂ. ಅನುದಾನ.

ಹಾಲಿಗೆ ಪ್ರತಿ ಲೀಟರ್ ಗೆ 1 ರು. ಪ್ರೋತ್ಸಾಹ ಧನ ಹೆಚ್ಚಳ.

ಎಲ್ಲಾ ವರ್ಗದ ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಶೇ. 90ರಷ್ಟು ಪ್ರೋತ್ಸಾಹ ಧನ ವಿತರಿಸಲು ಸರ್ಕಾರ ನಿರ್ಧರಿಸಿದ್ದು, 368 ಕೋಟಿ ರೂ. ಅನುದಾನ ಮೀಸಲಿರಿಸಿದೆ.

ಕೃಷಿ ಹೊಂಡ ನಿರ್ಮಾಣಕ್ಕೆ 250 ಕೋಟಿ, ಬರಪೀಡಿತ ಮತ್ತ ಅತಿಹೆಚ್ಚು ಅಂತರ್ಜಾಲ ಕುಸಿತವಿರುವ 100 ತಾಲೂಕುಗಳಲ್ಲಿ ಬರ ನಿರೋಧಕ ಜಲಾನಯನ ಚಟುವಟಿಕೆಗಳ ಅನುಷ್ಠಾನಕ್ಕೆ 100 ಕೋಟಿ ರೂ. ಘೋಷಣೆ.

500 ಸಂಯುಕ್ತ ಸಹಕಾರ ಸಂಘ ಸ್ಥಾಪನೆಗೆ 5 ಕೋಟಿ ರೂಪಾಯಿ ಅನುದಾನ ಮೀಸಲಿರಿಸಿರುವ ಸಿಎಂ. ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ.

ರೈತ ಮಹಿಳೆಯರ ಚಿನ್ನದ ಮೇಲೆ ಶೇ.3ರಷ್ಟು ಬಡ್ಡಿದರದಲ್ಲಿ ಸಾಲ ನೀಡಲು ನಿರ್ಧಾರ.

ಈರುಳ್ಳಿ, ಆಲೂಗಡ್ಡೆ ಸೇರಿದಂತೆ 12 ಬೆಳೆಗಳಿಗೆ ಪ್ರೋತ್ಸಾಹ ಧನ ನೀಡುವ ರೈತ ಕೃಷಿ ಕಣಜ ಯೋಜನೆಗಾಗಿ 510 ಕೋಟಿ ರು ಮೀಸಲು.

ಧಾರವಾಡದಲ್ಲಿ ಮಾವು ಉತ್ಪಾದಕಾ ಘಟಕ ಸ್ಥಾಪನೆ ಹಾಗೂ ಕೋಲಾರದಲ್ಲಿ ಟೊಮಾಟೋ ಉತ್ಪಾದನಾ ಘಟಕ ಸ್ಥಾಪನೆ.

ಜೇನು ಕೃಷಿ ಉತ್ತೇಜನಕ್ಕೆ 5 ಕೋಟಿ ಮತ್ತು ಮಿಡಿ ಸೌತೆ ಬೆಳೆಯಲು ಉತ್ತೇಜನ ನೀಡುವ ಸಲುವಾಗಿ 6 ಕೋಟಿ ರು.ಅನುದಾನ ನಿಗದಿ.

ತೆರಿಗೆದಾರರ ಹಣ ಪೋಲಾಗದಂತೆ ರೈತರ ಸಾಲಮನ್ನಾ ಮಾಡಲಾಗಿದೆ. 12 ಲಕ್ಷ ಖಾತೆಗೆ 5 ಸಾವಿರದ 400 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ.

ರಾಜ್ಯದ 156 ತಾಲೂಕುಗಳು ಬರ ಪರಿಸ್ಥಿತಿ ಬಂದಿದೆ. ಬರ ಪರಿಸ್ಥಿತಿ ನಿರ್ವಹಿಸಲು ಸರ್ಕಾರ ಸಮರ್ಥವಾಗಿದ್ದು, ರೈತರಿಗೆ ಪ್ರತಿ ಹೆಕ್ಟೇರ್ ಗೆ 7,500 ರೂಪಾಯಿ ಪ್ರೋತ್ಸಾಹ ಧನ.

Leave a Reply