ಯಂತ್ರ.. ತಂತ್ರ.. ಮಂತ್ರಕ್ಕೆ ಸಿಗುತ್ತಾ ಫಲ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರವನ್ನು ಏನಾದರೂ ಮಾಡಿ ಉರುಳಿಸಿಯೇ ಸಿದ್ಧ ಎಂದು ಪಣತೊಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ, ಮಾಧ್ಯಮಗಳ ಎದುರು ಮಾತ್ರ ಸರ್ಕಾರದ ವಿರುದ್ಧ ನಾವು ಆಪರೇಷನ್​ ಕಮಲ ಮಾಡ್ತಿಲ್ಲ ಅಂತಾನೇ ಹೇಳ್ತಾರೆ. ಆದ್ರೆ ಮಾಡೋ ಕೆಲಸಗಳು ಮಾತ್ರ ಆಪರೇಷನ್​ ಕಮಲ ಯಶಸ್ಸಿಗಾಗಿ ಮಾಡ್ತಿದ್ದಾರೆ ಅನ್ನೋದನ್ನು ಸಾರಿ ಸಾರಿ ಹೇಳುತ್ತಿವೆ. ಗುರುವಾರ ಸಂಜೆ ತನಕ ಸಭೆ ಮೇಲೆ ಸಭೆ ನಡೆಸಿದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ಸಂಜೆ ಮೇಲೆ ರಾಯಚೂರಿಗೆ ಪ್ರಯಾಣ ಬೆಳೆಸಿದ್ರು. ಮೊದಲಿಗೆ ದೇವದುರ್ಗ ತಾಲೂಕಿನ ಅರಕೇರಾಗೆ ಭೇಟಿ ನೀಡಿದ ಬಿಎಸ್​ ಯಡಿಯೂರಪ್ಪ, ಬಿಜೆಪಿ ಶಾಸಕ ಶಿವನಗೌಡ ನಾಯಕ್​ ಮನೆಯಲ್ಲಿ ವಿಶ್ರಾಂತಿ ಪಡೆದ್ರು. ಬಳಿಕ ವೀರಗೋಟಿಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದ್ರು. ಇಷ್ಟೆಲ್ಲಾ ಮಾಡಿದ್ದು ಏಕಾಂಗಿಯಾಗಿ ಅನ್ನೋದು ವಿಶೇಷ. ಇಲ್ಲಿನ ಮುಂಡರಗಿಯ ಶಿವರಾಯಸ್ವಾಮಿಗಳು ಕಟ್ಟುವ ತಾಯತದಿಂದ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಇದ್ದು. ಬಿಎಸ್‌ವೈ ಸಹ ತಾಯತ ಕಟ್ಟಿಸಿಕೊಂಡು, ಸರ್ಕಾರ ರಚನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಅರಕೇರಾದ ಶಾಸಕ ಶಿವನಗೌಡ ನಾಯಕ್​ ಅವರ ಮನೆಯಿಂದ ತೆರಳುವಾಗ ಭದ್ರತಾ ಪಡೆಗಳನ್ನು ಬಿಟ್ಟು ತೆರಳಿದ ಬಿ.ಎಸ್​ ಯಡಿಯೂರಪ್ಪ ನಡೆ ಭಾರೀ ಅನುಮಾನಕ್ಕೆ ಕಾರಣವಾಗಿದ್ದು, ಅತೃಪ್ತರನ್ನು ಭೇಟಿ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬಂದ್ವು. ಆದ್ರೆ ಯಡಿಯೂರಪ್ಪ ಈ ಆರೋಪವನ್ನು ಅಲ್ಲಗಳೆದರು. ಆದ್ರೆ ಪೂಜೆ ಬಳಿಕ ವೇದಿಕೆ ಮೇಲೆ ಮಾತನಾಡಿದ ಶಿವನಗೌಡ ನಾಯಕ್​​, ಶಿವರಾಯ ಸ್ವಾಮಿಗಳು ಈ ಹಿಂದೆ ನನ್ನ ರಾಜಕೀಯ ಜೀವನ ವೃದ್ಧಿಯಾಗಲು ಇದೇ ಸ್ವಾಮಿಗಳು ತಾಯತ ನೀಡಿದ್ದರು. ಇದೀಗ ರಾಜಕೀಯದಲ್ಲಿ ಬದಲಾವಣೆಗಾಗಿ ಬಿ.ಎಸ್​ ಯಡಿಯೂರಪ್ಪ ಅವರಿಗೆ ಆಶೀರ್ವಾದ ಮಾಡಿದ್ದಾರೆ ಎಂದಿರುವುದು ಬಿಎಸ್​ ಯಡಿಯೂರಪ್ಪ ಅವರ ಉದ್ದೇಶವನ್ನು ಬಹಿರಂಗ ಮಾಡಿದ್ದಾರೆ. ತಾಯತ ಕಟ್ಟಿಸಿಕೊಂಡ ಬಳಿಕ ಬಿ.ಎಸ್​ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಇನ್ನು ಶುಕ್ರವಾರ ಬೆಳಗ್ಗೆ ಬಜೆಟ್​ ಮಾಡಲು ಸಿದ್ಧವಾಗಿರುವ ಸಿಎಂ ಕುಮಾರಸ್ವಾಮಿ ಕೂಡ ಸಹೋದರನ ಮಾತಿಗೆ ಕಟ್ಟುಬಿದ್ದಿದ್ದಾರೆ. ಮಧ್ಯಾಹ್ನ12.33ರ ತನಕ ರಾಹುಕಾಲ ಇದ್ದು, ರಾಹುಕಾಲ ಮುಗಿದ ಬಳಿಕವಷ್ಟೇ ಬಜೆಟ್​ ಮಂಡನೆ ಮಾಡಲು ನಿರ್ಧಾರ ಮಾಡಿದ್ದಾರೆ. ಇದಕ್ಕೂ ಮೊದಲು ಸಹೋದರನ ಮಾತಿನಂತೆ ಲಕ್ಷ್ಮಿಗೆ ಪೂಜೆ ಮಾಡಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಬೆಂಗಳೂರಿನ ಸಾರಕ್ಕಿಯಲ್ಲಿರುವ ಲಕ್ಷ್ಮಿ ದೇವಸ್ಥಾನದಲ್ಲಿ ಸಿಎಂ ಪೂಜೆ ಸಲ್ಲಿಸಿದ್ದು, ಸಹೋದರ ಹೆಚ್ ಡಿ ರೇವಣ್ಣ ಅವರ ಮಾತಿನಂತೆ‌ ಲಕ್ಷ್ಮಿದೇವಿಗೆ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಯಾವುದಾದರು ಒಳ್ಳೆಯ ಕೆಲಸ ಮಾಡುವ ಮುನ್ನ ಲಕ್ಷ್ಮಿ ಪೂಜೆ ಮಾಡುವ ಹವ್ಯಾಸ ಇಟ್ಟುಕೊಂಡಿರುವ ರೇವಣ್ಣ, ಬಜೆಟ್​ ಮಂಡನೆಗೂ ಮುನ್ನ ಲಕ್ಷ್ಮೀ ಪೂಜೆ ಮಾಡುವಂತೆ ಸಿಎಂಗೆ ಸೂಚಿಸಿದ್ದರು ಎನ್ನಲಾಗಿದ್ದು, ಇವತ್ತು ಶುಕ್ರವಾರ ಲಕ್ಷ್ಮೀಗೆ ಪೂಜೆ ಸಲ್ಲಿಸುವದರಿಂದ ಬಜೆಟ್​ ನಿರ್ವಿಘ್ನವಾಗಿ ನೆರವೇರಲಿ ಅನ್ನೋ ಆಶಯದಲ್ಲಿ ಸಿಎಂ ಪೂಜೆ ಸಲ್ಲಿಸಿದ್ದಾರೆ.

Leave a Reply