ಶ್ರೀ ಶಿವಕುಮಾರ ಸ್ವಾಮಿಜೀ, ಶ್ರೀ ಬಾಲಗಂಗಾಧರ ಸ್ವಾಮಿಜೀ ಹುಟ್ಟೂರಿಗೆ ಬಜೆಟ್ ನಲ್ಲಿ ವಿಶೇಷ ಕೊಡುಗೆ

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ಬಜೆಟ್ ನಲ್ಲಿ ಇತ್ತೀಚೆಗೆ ಲಿಂಗೈಕ್ಯರಾದ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಆದಿ ಚುಂಚನಗಿರಿ ಮಠದ ಬಾಲಗಂಗಾಧರ ಸ್ವಾಮಿ ಅವರ ಹುಟ್ಟೂರಿನಲ್ಲಿ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಶ್ರೀ ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ರಾಮನಗರದ ವೀರಾಪುರ ಗ್ರಾಮದಲ್ಲಿ ವಿಶ್ವದರ್ಜೆ ಮಟ್ಟದಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನು ಶ್ರೀ ಬಾಲಗಂಗಾಧರ ಸ್ವಾಮಿಗಳ ಹುಟ್ಟೂರು ರಾಮನಗರದ ಬಿಡದಿಯ ಬಾಣಾಂದೂರು ಗ್ರಾಮವನ್ನು ಮಾದರಿ ಗ್ರಾಮ ಅಭಿವೃದ್ಧಿಪಡಿಸಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ಬಿಡುಗಡೆ ಮಾಡಲಾಗಿದೆ.

ಕಳೆದ ತಿಂಗಳು ಸಿದ್ದಗಂಗಾ ಶ್ರೀಗಳು  ಲಿಂಗೈಕ್ಯರಾದ ಸಂದರ್ಭದಲ್ಲಿ ಜಲಸಂಪನ್ಮೂಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಡಿಕೆ ಶಿವಕುಮಾರ್ ಅವರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರ ಹಾಗೂ ಶ್ರೀ ಬಾಲಗಂಗಾಧರ ಸ್ವಾಮಿಗಳ ಹುಟ್ಟೂರು ರಾಮನಗರದ ಬಿಡದಿಯ ಬಾಣಾಂದೂರು ಗ್ರಾಮವನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದನ್ನು ಸ್ಮರಿಸಬಹುದು.

 ಇಲಾಖೆಯ ಇತರೆ ಯೋಜನೆಗಳು ಹೀಗಿವೆ…

  • ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ.
  • ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ.
  • ರಾಜ್ಯದ ಜನಪದ ಕಲಾವಿದರು ಹಾಗೂ ಕಲೆಗಾರರಿಗೆ ಉತ್ತೇಜನ ನೀಡಲು ಮಾತ್ತೇ ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ. ಎಲ್ಲಾ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಆಯೋಜಿಸಲು 2 ಕೋಟಿ.
  • ಮೈಸೂರಿನಲ್ಲಿ ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಠದ ವತಿಯಿಂದ ಕರಕುಶಲಕರ್ಮಿಗಳಿಗೆ ಅರ್ಬನ್ ಹಾಟ್ ವ್ಯವಸ್ಥಿತ ಸೌಲಭ್ಯ ಕಲ್ಪಿಸಲು ಹಾಗೂ ಉನ್ನತೀಕರಣಕ್ಕೆ 5 ಕೋಟಿ.
  • ಕೆಂಗಲ್ ಹನುಮಂತರಾಯ ಹಾಸ್ಟೆಲ್ ಟ್ರಸ್ಟ್ ಬೆಂಗಳೂರು. ಇವರ ಸಾಂಸ್ಕೃತಿಕ ಮತ್ತು ಗ್ರಂಥಾಲಯ ಕೇಂದ್ರ ಅಭಿವೃದ್ಧಿಗೆ 5 ಕೋಟಿ.
  • ಕರಗ ಉತ್ಸವ ಆಚರಿಸುವ 139 ಸಂಘ ಸಂಸ್ಥೆಗಳಿಗೆ, ತುಮಕೂರು ಜಿಲ್ಲೆ ಮಾಯಸಂದ್ರದ ಆದಿಶಕ್ತಿ ಮಾತೆಯರ ವೃದ್ಧಾಶ್ರಮ, ಕರ್ನಾಟಕ ರಾಜ್ಯ ಕುಂಚಿಟಿಗರ- ಒಕ್ಕಲಿಗರ ಸಂಘದ ಅಭಿವೃದ್ಧಿಗೆ ತಲಾ 2 ಕೋಟಿ.
  • ಮಂಡ್ಯದ ಕರ್ನಾಟಕ ಸಂಘದ ಅಭಿವೃದ್ಧಿಗೆ, ಕರ್ನಾಟಕ ಜಾನಪದ ಪರಿಷತ್ತಿನ ಚಟುವಟಿಕೆಗಳಿಗೆ, ದಾವಣಗೆರೆಯ ಮಲೇಬೆನ್ನೂರು ವೀರಭದ್ರೇಶ್ವರ ಚಾರಿಟಬಲ್ ಟ್ರಸ್ಟ್ ಗೆ ತಲಾ 1 ಕೋಟಿ.
  • ತಿಪಟೂರಿನಲ್ಲಿ ಹಾಸ್ಯ ಚಕ್ರವರ್ತಿ ದಿ. ನರಸಿಂಹರಾಜು ಅವರ ಹೆಸರಿನಲ್ಲಿ ಸ್ಮಾರಕ ಸಭಾ ಮಂದಿರ ನಿರ್ಮಾಣಕ್ಕೆ 2 ಕೋಟಿ ರು.

Leave a Reply