ಬಿಎಸ್ ವೈ ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡಿ ಪ್ರಧಾನಿಗೆ ಕುಮಾರಸ್ವಾಮಿ ಸವಾಲು!

ಡಿಜಿಟಲ್ ಕನ್ನಡ ಟೀಮ್:

ಜೆಡಿಎಸ್ ನ ಗುರುಮಿಠಕಲ್ ಶಾಸಕ ನಾಗನಗೌಡ ಅವರ ಪುತ್ರನಿಗೆ ಆಮಿಷ ನೀಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಆಪರೇಷನ್ ಕಮಲಕ್ಕೆ ಮುಂದಾಗಿರುವ ಆಡಿಯೋವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶುಕ್ರವಾರ ಬಿಡುಗಡೆ ಮಾಡಿದರು. ಜತೆಗೆ ಮಾತೆತ್ತಿದರೆ ದೇಶದಲ್ಲಿ ಕಪ್ಪುಹಣವನ್ನು ನಿರ್ಮೂಲನೆ ಮಾಡಿ ದೇಶದ ಸಂಪನ್ಮೂಲವನ್ನು ರಕ್ಷಿಸುವುದಾಗಿ ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ ಅವರೇ ನಿಮ್ಮ ಬಿಜೆಪಿ ನಾಯಕರು ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಕೋಟಿ ಕೋಟಿ ಹಣದ ಆಮಿಷ ತೋರಿಸುತ್ತಿದ್ದಾರೆ. ಇದಕ್ಕೆ ಏನು ಉತ್ತರ ನೀಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು ಹೇಳಿದ್ದಿಷ್ಟು…

‘ನಿನ್ನೆ ಯಡಿಯೂರಪ್ಪನವರು ದೇವದುರ್ಗಕ್ಕೆ ಹೋಗಿದ್ದರು. ನಾನು ಪಾಪ ಯಾರದ್ದೋ ಅಂತಿಮ ದರ್ಶನಕ್ಕೆ ಹೋಗಿದ್ದಾರೆ ಎಂದುಕೊಂಡಿದ್ದೆ. ಆದರೆ ಅವರು ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರೆ. ಯಾರನ್ನೂ ನಾವು ಕರೆದಿಲ್ಲ. ನಾವು ವಿರೋಧ ಪಕ್ಷದ ಕೆಲಸ ಮಾಡುತ್ತೇವೆ ಎನ್ನುತ್ತಾರೆ. ಅದರೆ ತೆರೆ ಹಿಂದೆ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ.

ನಿನ್ನೆ ರಾತ್ರಿ ಎರಡು ಗಂಟೆಗೆ ನಮ್ಮ ಶಾಸಕರಿಗೆ ಆಹ್ವಾನ ನೀಡುತ್ತಾರೆ. ಇದರಲ್ಲಿ ಮಾಧ್ಯಮದವರೂ ಕೈ ಜೋಡಿಸಿದ್ದು, ಆ ವ್ಯಕ್ತಿ ಮಾಧ್ಯಮ ಕ್ಷೇತ್ರಕ್ಕೆ ಕಳಂಕ.

ಆಪರೇಷನ್ ಕಮಲ ಅವರ ಹುಟ್ಟು ಗುಣ ಅದು ಅವರಿಗೊಂದು ಚಾಳಿ. ನಾನೇನೋ ಮೋದಿ ಬಂದು ಬಿಜೆಪಿ ನಾಯಕರಿಗೆ ಒಳ್ಳೆ ಪಾಠ ಮಾಡಿದ್ದಾರೆ ಎಂದುಕೊಂಡಿದ್ದೆ. ಆದರೆ ಅವರ ಮುಖವಾಡವನ್ನು ಬಿಜೆಪಿ ನಾಯಕರೇ ಬಯಲು ಮಾಡಿದ್ದಾರೆ.

ನಮ್ಮ ಶಾಸಕರಿಗೆ ಪೇಮೆಂಟ್ ಇಲ್ಲಿ ಕೊಡಲ್ಲ, ಮುಂಬೈನಲ್ಲಿ ಕೊಡ್ತಾರಂತೆ. ಇಂದು ನಡೆಯಲಿರುವ ಕಲಾಪ ನನ್ನ ರೈತರ ಬದುಕಿನ ಪ್ರಶ್ನೆ ಇದರ ಜೊತೆ ಆಟವಾಡ ಬೇಡಿ.

ಆಯವ್ಯಯ ಮಂಡನೆಯಿಂದ ರಾಜ್ಯಕ್ಕೆ ಏನು ಅನುಕೂಲ ಆಗುತ್ತೆ, ಏನು ಅನಾನುಕೂಲ ಆಗುತ್ತೆ ಎಂಬುದನ್ನು ಚರ್ಚೆ ಮಾಡೋಣ. ಸದನದಲ್ಲಿ ಬಾವಿಗಳಿದು ಕಲಾಪ ಕೆಡಿಸುತ್ತಿದ್ದಾರೆ. ಆಯವ್ಯಯ ಮಂಡನೆ ಆಗದಿದ್ದರೆ ಕೆಲಸಗಳು ಆಗುವುದು ಹೇಗೆ?

ಪ್ರಧಾನಿ ಮೋದಿ ಅವರು ಕಪ್ಪು ಹಣದ ಬಗ್ಗೆ ಮಾತನಾಡುತ್ತಾರೆ. ಕಪ್ಪು ಹಣ ನಿರ್ಮೂಲನೆ ಮಾಡುವುದಾಗಿ ಹೇಳುತ್ತಾರೆ. ಹಾಗಾದರೆ ನಮ್ಮ ಶಾಸಕರಿಗೆ ಬಿಜೆಪಿಯವರು ಪಕ್ಷದ ಹಣ ಕೊಡುತ್ತಾರಾ?

ಯಡಿಯೂರಪ್ಪನವರು ಆಮಿಷ ಒಡ್ಡುವಾಗ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರ ಹೆಸರು ಪ್ರಸ್ತಾಪ ಮಾಡಿದ್ದಾರೆ. ಅಮಿತ್ ಶಾ ಅವರು ಜಡ್ಜ್ ಗಳನ್ನೇ ಬುಕ್ ಮಾಡಿಕೊಂಡಿದ್ದಾರೆ ಎಂದು ಯಡಿಯೂರಪ್ಪನವರು ಹೇಳಿರುವುದು ಆಡಿಯೋ ಟೇಪ್ ನಲ್ಲಿ ಇದೆ.’

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಾಗಿದ್ದ ಶರಣಗೌಡ ಅವರು ಬಿಎಸ್ ವೈ ಅವರು ತಮಗೆ ಆಮಿಷ ಒಡ್ಡಿದನ್ನು ವಿವರಿಸಿದ್ದು ಹೀಗೆ…

ನಿನ್ನೆ ರಾತ್ರಿ ನನಗೆ ಕರೆ ಬಂದಿತು. ಆ ಕಡೆಯಿಂದ ಯಡಿಯೂರಪ್ಪನವರು ನಿಮ್ಮ ಜತೆ ಮಾತನಾಡಬೇಕು ದೇವದುರ್ಗದ ಐಬಿಗೆ ಕೂಡಲೇ ಬರಬೇಕು ಎಂದು ಹೇಳಿದರು. ನಂತರ ಅವರನ್ನು ಭೇಟಿ ಮಾಡಲು ಹೋದೆ. ಅಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ ಎಂದು ಕೇಳಿದೆ. ಅದಕ್ಕೆ ಅವರು ‘ಇನ್ನು ನಾಲ್ಕು ದಿನದಲ್ಲಿ ಸರ್ಕಾರ ಬೀಳುತ್ತದೆ. ಹೊಸ ಸರ್ಕಾರ ಬರುತ್ತದೆ ಎಂದರು. ಅದಕ್ಕೆ ನಾನು ಬಂದರೆ ತೊಂದರೆಯಾಗಬಹುದು ಎಂದು ಹೇಳಿದೆ. ಅದಕ್ಕೆ ಅವರು ಹೇಳಿದ್ದು, ‘ಯಾವುದೇ ರೀತಿ ತೊಂದರೆ ಆಗಲ್ಲ. ವಿಪ್ ಲೆಕ್ಕಕ್ಕೆ ಬರುವುದಿಲ್ಲ. ಸ್ಪೀಕರ್ ಅವರನ್ನೇ 50 ಕೋಟಿ ಕೊಟ್ಟು ಬುಕ್ ಮಾಡಿಕೊಳ್ಳಲಾಗಿದೆ. ನಾವು ಆಫರ್ ಕೊಟ್ಟ ತಕ್ಷಣವೇ ಒಪ್ಪಿಕೊಂಡಿದ್ದಾರೆ’ ಎಂದರು. ಇನ್ನು ಕಾನೂನು ಸುಪ್ರೀಂ ಕೋರ್ಟ್ ವಿಚಾರಣೆ ನಡೆದರೆ ಏನು ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ‘ಅದನ್ನು ಅಮಿತ್ ಶಾ ಅವರು ನೋಡಿಕೊಳ್ಳುತ್ತಾರೆ. ಆ ಬಗ್ಗೆ ಚಿಂತೆ ಬೇಡ. ನಾಳೆ ಬೆಳಿಗ್ಗೆ ಬಂದು ದುಡ್ಡು ತೆಗೆದುಕೊಂಡು ಮುಂಬೈಗೆ ಹೋಗು. ನಿನಗೆ ಟಿಕೆಟ್ ನೀಡಿ ಗೆಲ್ಲಿಸಿ ಸಚಿವ ಸ್ಥಾನ ನೀಡುತ್ತೇವೆ. ಅಲ್ಲಿ ನೀನು ಲಾಭ ಮಾಡಿಕೊಳ್ಳಬಹುದು’ ಎಂದು ಭರವಸೆ ನೀಡಿದರು.

Leave a Reply