ಕುಮಾರಸ್ವಾಮಿ ಆಡಿಯೋ ತಂತ್ರಕ್ಕೆ ಬಿಜೆಪಿ ವೀಡಿಯೊ ಪ್ರತಿತಂತ್ರ!

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ರಾಜ್ಯಧ್ಯಕ್ಷ ಬಿಎಸ್​ ಯಡಿಯೂರಪ್ಪ ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ ಆಡಿಯೋಗೆ ಪ್ರತಿಯಾಗಿ ಬಿಜೆಪಿ ಕುಮಾರಸ್ವಾಮಿ ಅವರು ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿರುವ ವೀಡಿಯೊ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಇದರೊಂದಿಗೆ ರಾಜ್ಯದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಆಡಿಯೋ ವಿಡಿಯೋ ಸಮರಕ್ಕೆ ವೇದಿಕೆ ಸಜ್ಜಾಗಿದೆ.

ಶುಕ್ರವಾರ ಬಜೆಟ್ ಮಂಡನೆಗೂ ಮುನ್ನ ಕುಮಾರಸ್ವಾಮಿ ಅವರು ಬಿಎಸ್ ವೈ ಅವರು ಆಮಿಷವೊಡ್ಡುತ್ತಿರುವ ಬಗ್ಗೆ ಆಡಿಯೋ ಬಿಡುಗಡೆ ಮಾಡುವ ಮೂಲಕ ಕಮಲ ನಾಯಕರಿಗೆ ಶಾಕ್​ ನೀಡಿದರು. ಇದು ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಬಜೆಟ್​ಗೂ ಹಿಂದಿನ ಗುರುವಾರ ರಾತ್ರಿ ಗುರುಮಿಠ್ಠಕಲ್​ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡನನ್ನು ಯಡಿಯೂರಪ್ಪ ಆಹ್ವಾನಿಸಿರುವ ಆಡಿಯೋವನ್ನು ಸಿಎಂ ತುರ್ತು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದರು. ಇದು ನಕಲಿ ಆಡಿಯೋ ಎಂದು ಯಡಿಯೂರಪ್ಪ ತಳ್ಳಿ ಹಾಕಿದರು. ಅಲ್ಲದೇ ಈ ಆಡಿಯೋ ನಿಜ ಎಂದು ಸಾಬೀತು ಮಾಡಿದರೆ, ತಾವು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಸವಾಲೆಸೆದರು.

ಇನ್ನು ಸಿಎಂ ಕುಮಾರಸ್ವಾಮಿ ಅವರು ಆಪರೇಷನ್ ಜೆಡಿಎಸ್ ಗೆ ಕೈ ಹಾಕಿದ್ದಾರೆ ಎಂದು ಆರೋಪಿಸಿರುವ ಅರವಿಂದ ಲಿಂಬಾವಳಿ ಹೇಳಿದ್ದು ಹೀಗಿದೆ…

‘ಆಡಿಯೋ ಬಿಡುಗಡೆ ಮಾಡುವ ಮೂಲಕ ನಮ್ಮ ಮೇಲೆ ಆರೋಪ ಮಾಡಿದ ಸಿಎಂ ಕುಮಾರಸ್ವಾಮಿಯವರೇ ನಮ್ಮ ಶಾಸಕರಿಗೆ ಆಮಿಷ ಒಡ್ಡಿದ್ದಾರೆ. ಈ ಕುರಿತು ನಮ್ಮ ಬಳಿ ವಿಡಿಯೋ ಇದೆ. ಈ ವಿಡಿಯೋ ದಾಖಲೆಯನ್ನು ಸೋಮವಾರದ ಅಧಿವೇಶನದಲ್ಲಿ ಬಿಡುಗಡೆ ಮಾಡುತ್ತೇವೆ.

ಬಿಜೆಪಿ ಮುಖಂಡನಿಗೆ ವಿಧಾನ ಪರಿಷತ್​ ಸದಸ್ಯ ಮಾಡುತ್ತೇನೆ. ನಮ್ಮ ಜೊತೆ ಬನ್ನಿ ಎಂದು 25 ಕೋಟಿ ಆಮಿಷವನ್ನು ಕುಮಾರಸ್ವಾಮಿ ಒಡ್ಡಿದ್ದಾರೆ.’

ಈ ವಿಡಿಯೋ ಯಾವುದು, ಯಾವ ಶಾಸಕರಿಗೆ ಈ ರೀತಿ ಆಮಿಷ ನೀಡಲಾಗಿದೆ ಎಂಬ ಮಾಹಿತಿಯನ್ನು ಅರವಿಂದ ಲಿಂಬಾವಳಿ ಬಿಟ್ಟುಕೊಟ್ಟಿಲ್ಲ. ಆದರೆ ಈ ವಿಡಿಯೋವನ್ನು ಸ್ಪೀಕರ್​ಗೆ ನೀಡುತ್ತೇವೆ. ಆಗ ಸಂಪೂರ್ಣ ವಿವರ ಸಿಗಲಿದೆ ಎಂದರು.

ಬಿಜೆಪಿ ಮೂಲಗಳ ಪ್ರಕಾರ ಇದು ವಿಜಯಪುರ ಜಿಲ್ಲೆಯ ಬಬಲೇಶ್ವರದ ವಿಜು ಗೌಡ ಪಾಟೀಲ್ ಕುಮಾರಸ್ವಾಮಿ ನಡುವಿನ ಮಾತುಕತೆ ವಿಡಿಯೋ ಆಗಿದೆ. 2014ರಲ್ಲಿ ಹಿಂದೆ ವಿಧಾನ ಪರಿಷತ್ ಸದಸ್ಯ ಸ್ಥಾನದ ವಿಚಾರಕ್ಕಾಗಿ ಅವರು 25 ಕೋಟಿ ರೂ. ಕೊಡಿ ಎಂದು ಕುಮಾರಸ್ವಾಮಿ ಜೊತೆ ಮಾತನಾಡಿದ ವಿಡಿಯೋ ಎಂದು ವರದಿಗಳು ಬಂದಿವೆ.

Leave a Reply