ತಪ್ಪೊಪ್ಪಿಕೊಂಡ ಯಡಿಯೂರಪ್ಪ! ಕೊಡ್ತಾರಾ ರಾಜೀನಾಮೆ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಆಪರೇಷನ್ ಕಮಲ ಕುರಿತು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ ಈಗ ಬಿಜೆಪಿ ನಾಯಕರೇ ಯಡಿಯೂರಪ್ಪನವರ ವಿರುದ್ಧ ಬುಸುಗುಡುವಂತೆ ಮಾಡಿದೆ.

ಕುಮಾರಸ್ವಾಮಿ ಬಿಡುಗಡೆ ಮಾಡಿರೋ ಆಡಿಯೋ ನಕಲಿ. ನಾನು ಯಾರನ್ನೂ ಭೇಟಿ ಮಾಡಿಲ್ಲ ಆಪರೇಷನ್ ಕಮಲ ನಡೆಸಿಲ್ಲ. ಈ ಆಡಿಯೋ ನಿಜ ಎಂದು ಸಾಬೀತುಪಡಿಸಿದೆ ಶಾಸಕ ಸ್ಧಾನಕ್ಕೂ ರಾಜೀನಾಮೆ ನೀಡಿ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಎಸೆದಿದ್ದ ಬಿಎಸ್ ವೈ, ಭಾನುವಾರ ಆಡಿಯೊದಲ್ಲಿ ಇರೋದು ನನ್ನ ಧ್ವನಿ ಎಂದು ಒಪ್ಪಿಕೊಂಡಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ‘ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಜೊತೆಗೆ ಮಾತನಾಡಿದ್ದು ನಿಜ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ನನ್ನ ಬಳಿ ಶರಣಗೌಡ ಅವರನ್ನು ಕಳುಹಿಸಿಕೊಟ್ಟಿದ್ದು, ಕುತಂತ್ರ ರಾಜಕೀಯ ನಡೆಸಿದ್ದಾರೆ. ಕುಮಾರಸ್ವಾಮಿ ಥರ್ಥ್ ಗ್ರೇಡ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಆಡಿಯೋದಲ್ಲಿ ನಾನು ಮಾತನಾಡಿದ ವಿಚಾರಗಳು ಬೇರೆಯೇ ಇದೆ. ಆದರೆ, ಕುಮಾರಸ್ವಾಮಿ ಅವರಿಗೆ ಬೇಕಾಗಿರುವುದನ್ನು ಮಾತ್ರ ಬಳಸಿಕೊಂಡು ಸತ್ಯವನ್ನು ಮರೆ ಮಾಚಲಾಗಿದೆ. ಆಡಿಯೋದಲ್ಲಿನ ಮುಂದುವರೆದ ಭಾಗವನ್ನು ಸದನದಲ್ಲಿ ನಾಳೆ ಬಿಡುಗಡೆ ಮಾಡುತ್ತೇನೆ’ ಎಂದಿದ್ದಾರೆ.

ಬಿಎಸ್ ವೈ ಅವರ ಮಾತುಗಳು ‘ಜಟ್ಟಿ ಜಾರಿ ಬಿದ್ದರು ಮೀಸೆ ಮಣ್ಣಾಗಿಲ್ಲ’ ಎಂಬ ನಾಣ್ಣುಡಿ ನೆನಪಿಸುತ್ತದೆ. ರಾಜಕೀಯದಲ್ಲಿ ಸುಮಾರು ನಾಲ್ಕೈದು ವರ್ಷಗಳ ಅನುಭವ ಹೊಂದಿರುವ ಯಡಿಯೂರಪ್ಪನವರನ್ನು ಈಗಷ್ಟೇ ರಾಜಕೀಯಕ್ಕೆ ಕಾಲಿಡುತ್ತಿರುವ ಶರಣಗೌಡ ಟ್ರ್ಯಾಪ್ ಮಾಡಿದ್ದಾನೆ ಎಂದರೆ ನಂಬಲು ಸಾಧ್ಯವೇ? ನಾನು ಯಾರನ್ನೂ ಭೇಟಿ ಮಾಡಿಲ್ಲ ಎನ್ನುತ್ತಿದ್ದ ಬಿಎಸ್ ವೈ ಈಗ ತಮ್ಮನ್ನು ಟ್ರ್ಯಾಪ್ ಮಾಡಲಾಗಿದೆ ಎನ್ನುತ್ತಿದ್ದಾರೆ. ಇದು ತಮ್ಮದೇ ರಾಜೀನಾಮೆಯ ಸವಾಲಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಎಂಬುದನ್ನು ವಿವರಿಸಿ ಹೇಳ ಬೇಕಿಲ್ಲ. ಕುಮಾರಸ್ವಾಮಿ ಥರ್ಡ್ ಗ್ರೇಡ್ ಪಾಲಿಟಿಕ್ಸ್, ಕಾಂಗ್ರೆಸ್ ಜೆಡಿಎಸ್ ಮೈತ್ರಿಯನ್ನು ಅಪವಿತ್ರ ಮೈತ್ರಿ ಎನ್ನುವ ಬಿಎಸ್ ವೈ ಸರಕಾರ ಕೆಡವಲು ಆಪರೇಷನ್ ಕಮಲ ಮಾಡುತ್ತಿರುವುದು ಅದ್ಯಾವ ಸುಸಂಸ್ಕೃತ ರಾಜಕಾರಣ ಎಂಬುದು ರಾಜ್ಯದ ಜನರಿಗೆ ಅರ್ಥವಾಗುತ್ತಿಲ್ಲ.

ಬಿಎಸ್ ವೈ ಅವರೇ ಶರಣುಗೌಡನನ್ನು ಮಾತುಕತೆಗೆ ಕರೆದು(ಆಡಿಯೋ ಆರೋಪದ ಪ್ರಕಾರ) ಜೆಡಿಎಸ್ ನಾಯಕರು ಟ್ರ್ಯಾಪ್ ಮಾಡಲು ಅವಕಾಶ ನೀಡಿ ಈಗ ಅವರ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಿದರೆ ಅದನ್ನು ನಂಬಲು ರಾಜ್ಯದ ಜನರು ಮೂರ್ಖರೇ? ಒಂದು ವೇಳೆ ಟ್ರ್ಯಾಪ್ ಮಾಡಿದ್ದೆ ನಿಜವಾದರೆ ಹಣ ನೀಡುತ್ತೇನೆ, ಮುಂಬೈಗೆ ಹೋಗು, ಸಚಿವ ಸ್ಥಾನಮಾನ ನೀಡುತ್ತೇವೆ ಎಂದು ಆಮಿಷ ಒಡ್ಡಿರುವುದು ತಪ್ಪಲ್ಲವೇ?

ಬಿಎಸ್ ವೈ ಅವರ ಈ ಎಡವಟ್ಟು ಈಗ ಬಿಜೆಪಿಯ ಇತರೆ ನಾಯಕರ ತಲೆ ತಗ್ಗಿಸುವಂತಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಟೀಕೆಗೆ ಬ್ರಹ್ಮಾಸ್ತ್ರವನ್ನೇ ನೀಡಲಾಗಿದೆ.

ಈ ವಿಚಾರವಾಗಿ ಬಾದಾಮಿಯಲ್ಲಿ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪನವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

Leave a Reply