ಕೋಳಿ ಕೇಳಿ ಮಸಾಲೆ ಅರೆ ಅಂದಂಗಾಯ್ತು ಬಿಜೆಪಿ ವಾದ!

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಆಡಿಯೋ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಭಾರೀ ಚರ್ಚೆ ಆಗ್ತಿದೆ. ಎಸ್‌ಐಟಿ ತನಿಖೆಗೆ ಸ್ಪೀಕರ್ ರಮೇಶ್ ಕುಮಾರ್, ಸರ್ಕಾರಕ್ಕೆ ಸಲಹೆ ನೀಡಿದ್ರು. ಅದಕ್ಕೆ ಸಿಎಂ ಕುಮಾರಸ್ವಾಮಿ ಕೂಡ ಸಮ್ಮತಿ ಸೂಚಿಸಿದ್ರು. ನಂತ್ರ ಬಿಜೆಪಿ ನಾಯಕರು ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಎಸ್ ಐಟಿ ಮೇಲೆ ತಮಗೆ ನಂಬಿಕೆ ಇಲ್ಲ. ಹೀಗಾಗಿ ಪ್ರಕರಣದ ತನಿಖೆ ಎಸ್ ಐಟಿ ನಡೆಸಬಾರದು ಎಂಬುದು ಬಿಜೆಪಿ ನಾಯಕರ ವಾದ.

ಸಾಮಾನ್ಯವಾಗಿ ಶಾಸನ ಸಭೆಯಲ್ಲಿ ನಡೆಯುವ ಯಾವುದೇ ವಿಚಾರದಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡುವಂತಿಲ್ಲ. ಇದನ್ನು ಮಾನ್ಯ ಸಭಾಧ್ಯಕ್ಷರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ ಈ ಪ್ರಕರಣದ ಆಡಿಯೋ ಸಂಭಾಷಣೆ ನಡೆದಿರುವುದು ರಾಯಚೂರಿನ ದೇವದುರ್ಗದ ಐಬಿಯಲ್ಲಿ. ಆದರೂ ಈ ವಿಚಾರವಾಗಿ ಎರಡು ದಿನಗಳ ಕಾಲ ಸದನದಲ್ಲಿ ಚರ್ಚೆ ಮಾಡುತ್ತಾ ಸಮಯವನ್ನು ವ್ಯರ್ಥ ಮಾಡಲಾಗ್ತಿದೆ. ಅಲ್ಲದೆ ಈ ಚರ್ಚೆಯಿಂದ ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ ಕೂಡ ಅಧಿವೇಶನ ಮುಕ್ತಾಯವಾಗುವ ಮುನ್ನವೇ ಮರೆಯುವಂತೆ ಮಾಡಿದೆ.

ಆಡಿಯೋ ಕ್ಲಿಪ್‌ನಲ್ಲಿ ಸ್ಪೀಕರ್ ರಮೇಶ್ ಕುಮಾರ್ ಹೆಸರು ಹೇಳಿ ಆರೋಪ ಮಾಡಲಾಗಿದೆ ಹೀಗಾಗಿ ಈ ವಿಚಾರ ಸದನದಲ್ಲಿ ಪ್ರಸ್ತಾಪ ಮಾಡಲಾಗಿದೆ. ಇದಕ್ಕೆ‌ ಸ್ಪೀಕರ್ ಕೂಡ ಎಸ್‌ಐ‌ಟಿ ತನಿಖೆಗೆ ಸೂಚಿಸಲಾಗಿದೆ. ಸ್ಪೀಕರ್ ಅವರ ಅಂಶವನ್ನು ಬದಿಗಿಟ್ಟು ಈ ಪ್ರಕರಣವನ್ನು ನೋಡಿದರೆ ಬಿಎಸ್ ವೈ ಅವರು ಅಪರಾಧ ಮಾಡಿದ್ದಾರೆ. ಚುನಾಯಿತ ಪ್ರತಿನಿಧಿಗಳಿಗೆ ಹಣದ ಆಮಿಷ ನೀಡಿ ಸರ್ಕಾರ ಬೀಳಿಸುವ ಪ್ರಯತ್ನಕ್ಕೆ ಮುಂದಾಗಿರೋದು ಆಡಿಯೋದಲ್ಲಿ ಸ್ಪಷ್ಟವಾಗಿದೆ. ಇನ್ನು ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅದು ಮಿಮಿಕ್ರಿ ಅಲ್ಲ ಎಂಬುದು ಸಾಬೀತಾಗಿದೆ. ಇನ್ನು ಉಳಿದಿರುವ ಕಡೇ ಅಂಶ ಬಿಜೆಪಿಯ ಆರೋಪದಂತೆ ಈ ಆಡಿಯೋ ಅನ್ನು ತಿರುಚಿರುವುದು. ಆಡಿಯೋ ತಿರುಚಲಾಗಿದೆಯೇ ಅಥವಾ ಆಡಿಯೋ ಸರಿಯಾಗಿದೆಯೇ ಎಂಬುದನ್ನು ನಿರ್ಧರಿಸಬೇಕು.

ಇಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ ಯಡಿಯೂರಪ್ಪನವರಾಗಲಿ ಅಥವಾ ಅವರ ಪಕ್ಷದ ನಾಯಕರಾಗಲಿ ಪ್ರಕರಣದ ತನಿಖೆಯನ್ನು ಇಂತಹವರು ನಡೆಸಬೇಕು ಎಂಬುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವಲೋಕನ ಮಾಡಬೇಕಿದೆ.

Leave a Reply