ಬಿಎಸ್ ವೈ ಆಡಿಯೋ ಪ್ರಕರಣ: ತನಿಖೆ ಸ್ವರೂಪ ನಾಳೆ ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಕಮಲ ಮಾಡಲು ತುದಿಗಾಲಲ್ಲಿ ನಿಂತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಆಪರೇಷನ್ ಆಡಿಯೋ ಬಲೆಯಲ್ಲಿ ಸಿಲುಕಿ ವಿಲವಿಲನೆ ಒದ್ದಾಡುತ್ತಿದ್ದಾರೆ. ಎಸ್‌ಐಟಿ ತನಿಖೆಗೆ ಒಪ್ಪಿಸಿ 15 ದಿನದ ಒಳಗಾಗಿ ಪ್ರಕರಣ ಇತ್ಯರ್ಥ ಮಾಡುವಂತೆ ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿದ ಬಳಿಕ ಅಡ್ಡಕತ್ತರಿಯಲ್ಲಿ ಸಿಲುಕಿದ ಅಡಕೆಯಂತಾದ ಬಿಜೆಪಿ ನಾಯಕರು ಸದನದಲ್ಲಿ ಎರಡು ದಿನಗಳ ಕಾಲ ಚರ್ಚೆ ನಡೆಸಿದ್ದಾರೆ. ಚರ್ಚೆಯಲ್ಲಿ ಕೇಳಿಬಂದ ಏಕಮಾತ್ರ ಅಜೆಂಡ ಅಂದ್ರೆ ಆಪರೇಷನ್ ಆಡಿಯೋ ಪ್ರಕರಣದಲ್ಲಿ ನಾವು ತಪ್ಪು ಮಾಡಿದ್ದೇವೆ. ಅದನ್ನು ಒಪ್ಪಿಕೊಳ್ತೇವೆ. ಆದ್ರೆ ಈ ಪ್ರಕರಣವನ್ನು ಇಲ್ಲಿಗೆ ಬಿಟ್ಟುಬಿಡಿ. ಒಂದು ವೇಳೆ ತನಿಖೆ ಮಾಡಿಸಲೇಬೇಕು ಅಂದ್ರೆ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆ ಆಗಲಿ ಎಂದು ಒಕ್ಕೋರಲಿನಿಂದ ಬಿಜೆಪಿ ನಾಯಕರು ಒತ್ತಾಯ ಮಾಡಿದ್ರು.

ಎರಡು ದಿನಗಳ ಕಾಲ ಒಂದೇ ಒಂದು ಮಾತನಾಡದೆ ಮೌನಕ್ಕೆ ಶರಣಾಗಿದ್ದ ಬಿ.ಎಸ್ ಯಡಿಯೂರಪ್ಪ ಮಂಗಳವಾರ ಸಂಜೆ ಬಳಿಕ ಮಾತನಾಡಿದ್ರು. ತಪ್ಪನ್ನು ಒಪ್ಪಿಕೊಳ್ಳಲು ಹರಸಾಹಸ ಮಾಡಿದ ಬಿ.ಎಸ್ ಯಡಿಯೂರಪ್ಪ, ಇದನ್ನು ರೆಕಾರ್ಡ್ ಮಾಡಿಸಿದ ಸಿಎಂ ಕುಮಾರಸ್ವಾಮಿ ಪ್ರಕರಣದಲ್ಲಿ ಮೊದಲ ಆರೋಪಿ ಆಗ್ತಾರೆ. ಹಾಗಾಗಿ ಎಸ್‌ಐಟಿ ತನಿಖೆ ಬೇಡ, ನ್ಯಾಯಾಂಗ ಅಥವಾ ಸದನ ಸಮಿತಿ ರಚನೆ ಮಾಡಿ ಎಂದು ಅಂತಿಮ ಮನವಿ ಸಲ್ಲಿಸಿದ್ರು. ಇದೇ ಸಮಯದಲ್ಲಿ ಬಿಎಸ್‌ವೈ ಒಂದು ಮನವಿ ಮಾಡಿಕೊಂಡ್ರು. ಎರಡು ದಿನಗಳ ಕಾಲ ಈ ವಿಚಾರ ಚರ್ಚೆ ಮಾಡುವ ಬದಲು ಆಡಳಿತ ಹಾಗೂ ವಿರೋಧ ಪಕ್ಷದ ಮುಖಂಡರನ್ನು ಸ್ಪೀಕರ್ ಕರೆದು ಮಾತನಾಡಿಸಿದ್ರೆ ಇಷ್ಟೊಂದು ಸಮಯ ವ್ಯರ್ಥ ಮಾಡುವ ಅವಶ್ಯಕತೆ ಇರಲಿಲ್ಲ ಎಂದಿದ್ದು, ಆಪರೇಷನ್ ಆಡಿಯೋ ಪ್ರಕರಣ ಮತ್ತೊಂದು ತಿರುವು ಪಡೆಯುವ ಆಶಾಭಾವನೆ ಮೂಡುವಂತೆಯೂ ಮಾಡಿದೆ.

ಆಪರೇಷನ್ ಆಡಿಯೋ ಬಗ್ಗೆ ಬಹುತೇಕ ಸದಸ್ಯರು ಮಾತನಾಡಿದ ಬಳಿಕ ಅಂತಿಮವಾಗಿ ಸಭಾನಾಯಕ ಆಗಿರುವ ಸಿಎಂ ಕುಮಾರಸ್ವಾಮಿ ಮಾತನಾಡಿದ್ರು. ವಿರೋಧ ಪಕ್ಷದ ನಾಯಕರು, ಮುಖಂಡರು ನಾನು ಅಪರಾಧ ಮಾಡಿದ್ದೇನೆ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ನಾನು ತಪ್ಪು ಮಾಡಿದ್ದರೆ ಭಾರತದ ಸಂವಿಧಾನದಂತೆ ಶಿಕ್ಷೆ ಅನುಭವಿಸಲು ಯಾವುದೇ ಭಯವಿಲ್ಲ. ತನಿಖೆ ಆಗಲಿ ಆ ಬಳಿಕ ತಪ್ಪು ಯಾರದ್ದು ಎಂದು ನಿರ್ಧಾರ ಆಗಲಿ ಎಂದರು. ಈ ವೇಳೆ ಸಾಕಷ್ಟು ಗದ್ದಲವೂ ನಡೀತು. ನಂತರ ಕೊನೆಯದಾಗಿ ಸ್ಪೀಕರ್ ಒಂದು ನಿರ್ಧಾರ ಪ್ರಕಟ ಮಾಡಿದ್ದಾರೆ. ನಾಳೆ ಬೆಳಗ್ಗೆ 11.30ಕ್ಕೆ ಸದನ ಆರಂಭವಾಗಲಿದ್ದು, ಅದಕ್ಕೂ ಮೊದಲು ಅಂದ್ರೆ ಬೆಳಗ್ಗೆ 10.30ಕ್ಕೆ ನನ್ನ ಕಚೇರಿಯಲ್ಲಿ ಕುಳಿತು ಚರ್ಚೆ ಮಾಡೋಣ, ಬೇರೆ ನಿರ್ಧಾರ ಕೈಗೊಳ್ಳುವುದಾದರೆ ನನ್ನದೇನು ಅಭ್ಯಂತರ ಇಲ್ಲ ಎಂದಿದ್ದಾರೆ. ಇದೀಗ ಎಸ್‌ಐಟಿ ರಚನೆ ಆಗುತ್ತೋ ಅಥವಾ ಸ್ಪೀಕರ್ ಕಚೇರಿಯಲ್ಲಿ ಸಂಧಾನ ನಡೆದು ಪ್ರಕರಣ ಮುಚ್ಚಿಹಾಕುವ ಯತ್ನ ನಡೆಯುತ್ತಾ? ಅನ್ನೋದು ಗೊತ್ತಾಗಲಿದೆ. ಒಟ್ಟಾರೆ ಈಗಾಗಲೇ ಬಿಎಸ್ ಯಡಿಯೂರಪ್ಪನವರನ್ನು ಕಂಗೆಡಿಸಿರೂವ ಆಪರೇಷನ್ ಆಡಿಯೋ ಪ್ರಕರಣದ ತನಿಖೆ ಸ್ವರೂಪ ನಾಳೆ ಬೆಳಗ್ಗೆ ಸದನ ಆರಂಭವಾಗುವ ಹೊತ್ತಿಗೆ ಬಹುತೇಕ ನಿರ್ಧಾರವಾಗುವ ಸೂಚನೆ ಸಿಕ್ಕಿದೆ.

Leave a Reply