ಮೋದಿ ಉದ್ಯಮಿ ಅಂಬಾನಿಯ ಮಧ್ಯವರ್ತಿ! ರಾಹುಲ್ ಬಿಡುಗಡೆ ಮಾಡಿದ ಇಮೇಲ್ ನಲ್ಲಿರೊದೇನು?

ಡಿಜಿಟಲ್ ಕನ್ನಡ ಟೀಮ್:

ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕಾಪ್ರಹಾರ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘ಮೋದಿ ಅವರು ಉದ್ಯಮಿ ಅಂಬಾನಿ ಅವರ ಮಧ್ಯವರ್ತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಕುಟುಕಿದ್ದಾರೆ.

ಈ ವಿಚಾರವಾಗಿ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದು ಇಷ್ಟು… ‘ಪ್ರಧಾನಿ ಮೋದಿ ಅವರ ವರ್ತನೆ ನೋಡಿದರೆ ಅವರು ಅನಿಲ್ ಅಂಬಾನಿ ಅವರ ಮಧ್ಯವರ್ತಿಯಂತೆ ವರ್ತಿಸುತ್ತಿದ್ದಾರೆ. ಪ್ರಸ್ತುತ ಬಿಡುಗಡೆಯಾಗಿರುವ ಈ ಮೇಲ್ ನಲ್ಲಿ ಅನಿಲ್ ಅಂಬಾನಿ ಫ್ರೆಂಚ್ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅದೂ ಕೂಡ ಕೇಂದ್ರ ಸರ್ಕಾರ ರಾಫೆಲ್ ಒಪ್ಪಂದಕ್ಕೆ ಸಹಿ ಹಾಕುವ 10 ದಿನಗಳ ಮೊದಲು… ಕೇಂದ್ರ ಸರ್ಕಾರ ಇಂತಹದೊಂದು ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಅನಿಲ್ ಅಂಬಾನಿಗೆ ಮೊದಲೇ ತಿಳಿದಿತ್ತೇ?. ಒಪ್ಪಂದದ ಕುರಿತು ರಕ್ಷಣಾ ಸಚಿವರು, ಎಚ್ಎಎಲ್ ನಿರ್ದೇಶಕರು, ವಿದೇಶಾಂಗ ಕಾರ್ಯದರ್ಶಿಗಳು ಯಾರಿಗೂ ತಿಳಿಯದ ಒಪ್ಪಂದದ ಕುರಿತು ಅನಿಲ್ ಅಂಬಾನಿ ಅವರಿಗೆ ಹೇಗೆ ತಿಳಿಯಿತು. ಇದು ನಿಜಕ್ಕೂ ಆಘಾತಕಾರಿ ವಿಚಾರ, ಪ್ರಧಾನಿ ಮೋದಿ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ. ಹೀಗಾಗಿ ಈ ಕುರಿತು ಕ್ರಿಮಿನಲ್ ಮೊಕದ್ದಮೆ ಹೂಡಬೇಕು.

ಅಂತೆಯೇ ಸುಪ್ರೀಂ ಕೋರ್ಟ್ ಕೂಡ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ತನ್ನ ವ್ಯಾಪ್ತಿಯದ್ದಲ್ಲ ಎಂದು ಹೇಳಿದೆ. ಆದರೆ ಸುಪ್ರೀಂ ಕೋರ್ಟ್ ನ ಈ ನಡೆ ನನಗೆ ಅಚ್ಚರಿ ಮೂಡಿಸಿದೆ. ಸಿಎಜಿ ವರದಿ ಕೂಡ ತನ್ನ ಮೌಲ್ಯ ಕಳೆದುಕೊಂಡಿದೆ. ಈ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಲೇಬೇಕು.’

Leave a Reply