ಆಡಿಯೋ ಪ್ರಕರಣದ ವಿಷಯಾಂತರಕ್ಕೆ ಬಿಜೆಪಿಗೆ ಅಸ್ತೃವಾದ ಹಾಸನ ಗಲಾಟೆ!

ಡಿಜಿಟಲ್ ಕನ್ನಡ ಟೀಮ್:

ಹಾಸನ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕ ಪ್ರೀತಂಗೌಡ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಪ್ರಕರಣ ಬಜೆಟ್ ಅಧಿವೇಶನದ ಬುಧವಾರದ ಕಲಾಪವನ್ನು ನುಂಗಿ ಹಾಕಿದ್ದು, ಆಪರೇಷನ್ ಆಡಿಯೋ ಪ್ರಕರಣದಲ್ಲಿ ಪೇಚಿಗೆ ಸಿಲುಕಿದ್ದ ಬಿಜೆಪಿಗೆ ಸರ್ಕಾರದ ವಿರುದ್ಧ ಸಮರ ಸಾರಲು ಅಸ್ತ್ರ ಸಿಕ್ಕಂತಾಗಿದೆ.

ಮೊದಲ ಬಾರಿಗೆ ಹಾಸನ ಕ್ಷೇತ್ರದಿಂದ ಆಯ್ಕೆಯಾಗಿರುವ ಪ್ರೀತಂಗೌಡ ವಿರುದ್ಧ ಜೆಡಿಎಸ್ ಶಾಸಕರು ಗರಂ ಆಗಿದ್ದಾರೆ. ಇವತ್ತು ಮಧ್ಯಾಹ್ನ ಪ್ರೀತಂಗೌಡ ಮನೆ ಎದುರು ಪ್ರತಿಭಟನೆ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆದಿದೆ. ಈ ವೇಳೆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಕಲ್ಲು ತೂರಾಟ ನಡೆಸಿದ್ದು ಪ್ರೀತಂಗೌಡ ಕಡೆಯ ವ್ಯಕ್ತಿಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ್ದಾರೆ. ಈ ಸಂಬಂಧ ಸಿಎಂ ಕುಮಾರಸ್ವಾಮಿ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಮಾಹಿತಿ ಪಡೆದಿದ್ದು, ತಪ್ಪಿತಸ್ತರರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಜೊತೆಗೆ ಕಾರ್ಯಕರ್ತರಿಗೂ ಕರೆ ನೀಡಿರುವ ಸಿಎಂ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಪ್ರತಿಭಟನೆ ಎಲ್ಲೆ ಮೀರದಂತೆ ಸೂಚನೆ ಕೊಟ್ಟಿದ್ದಾರೆ.

ಇದನ್ನೇ ಅಸ್ತ್ರವಾಗಿಸಿಕೊಳ್ಳಲು ಬಿಜೆಪಿ ನಿರ್ಧಾರ ಮಾಡಿದ್ದು, ಈಗಾಗಲೇ ಪ್ರೀತಂಗೌಡ ಮನೆಗೆ ಯಡಿಯೂರಪ್ಪ, ಆರ್ ಅಶೋಕ್, ಸಿ.ಟಿ ರವಿ ಸೇರಿದಂತೆ ಬಿಜೆಪಿ 15 ಶಾಸಕರು ಆಗಮಿಸಿದ್ದು, ಹಾಸನದ ವಿದ್ಯಾನಗರದ ಮನೆ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಪ್ರೀತಂಗೌಡ ಪೋಷಕರು ಹಾಗೂ ಕಾರ್ಯಕರ್ತರಿಂದ ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ನೀವು ಘಟನೆಗೆ ಹೆದರುವ ಅವಶ್ಯಕತೆ ಇಲ್ಲ ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಬಳಿಕ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ರಾಹುಲ್ ಕಿಣಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಆಡಿಯೋ ಪ್ರಕರಣದಲ್ಲಿ ನಮ್ಮದು ತಪ್ಪಾಗಿದೆ ಬಿಟ್ಟು ಬಿಡಿ ಎಂದು ಬಿಜೆಪಿ ನಾಯಕರು ಪರಿಪರಿಯಾಗಿ ಬೇಡಿಕೊಂಡರು. ಆದರೆ ಸರ್ಕಾರ ಬೀಳಿಸುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ‌ ಭ್ರಷ್ಟಾಚಾರ ನಡೆದಿದೆ ಎಂದು ಬಲವಾಗಿ ಪ್ರತಿಪಾದಿಸಿದ ರಾಜ್ಯ ಸರ್ಕಾರ, ಎಸ್‌ಐಟಿ ತನಿಖೆ ನಿರ್ಧಾರದಿಂದ ಹಿಂದೆ ಸರಿಯುವ ಮನಸ್ಸು ಮಾಡಲಿಲ್ಲ. ಸ್ಪೀಕರ್ ಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲೂ ಬಿಜೆಪಿ ನಾಯಕರು ಸಾಕಷ್ಡು ಪ್ರಮಾಣದಲ್ಲಿ ಸರ್ಕಾರಕ್ಕೆ ಒತ್ತಡ ಹೇರಿದ್ದರು ಎನ್ನುವ ವಿಚಾರ ಬಿಜೆಪಿ ನಾಯಕರ ಹೇಳಿಕೆಯಿಂದಲೇ ಅರ್ಥವಾಗುತ್ತದೆ.

ಇದೀಗ ಹಾಸನದ ಗಲಾಟೆಯನ್ನು ಹಿಡಿದುಕೊಂಡು ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲು ಬಿಜೆಪಿ ಯೋಜನೆ ರೂಪಿಸಿದೆ. ನಾಳೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸುವಂತೆ ಸಂದೇಶ ರವಾನಿಸಿದೆ.

ದೇವದುರ್ಗದ ಐಬಿಯಲ್ಲಿ ಬಿಎಸ್‌ವೈ ಜೊತೆ ಆಪರೇಷನ್ ಕಮಲ ನಡೆಸಲು ತೆರಳಿದ್ದ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ, ನಾಗನಗೌಡ ಕುಂದಕೂರ ಅವರ ಮಗ ಶರಣಗೌಡ ಅವರ ಜೊತೆ ಮಾತನಾಡುತ್ತಾ ದೇವೇಗೌಡರ ವಿಕೆಟ್ ಬಿದ್ದು ಹೋದ್ರೆ, ಇನ್ನು ಕುಮಾರಸ್ವಾಮಿಗೂ ಆರೋಗ್ಯ ಸರಿಯಿಲ್ಲ. ಇನ್ನು ದಳ ಎಲ್ಲಿರುತ್ತೆ ಎಂದು ಉಡಾಫೆ ಮಾತುಗಳನ್ನು ಆಡಿದ್ದರು. ಬಜೆಟ್ ದಿನ ಬಿಡುಗಡೆಯಾದ ಆಡಿಯೋದಲ್ಲಿ ಈ ಮಾತುಗಳನ್ನು ಬಹಿರಂಗ ಮಾಡಿರಲಿಲ್ಲ. ಆದ್ರೆ ಇಂದು ಬಿಡುಗಡೆಯಾದ 80 ನಿಮಿಷದ ಸಂಭಾಷಣೆಯಲ್ಲಿ ದೇವೇಗೌಡರ ಸಾವಿನ ಬಗ್ಗೆ ಪ್ರೀತಂಗೌಡ ಪ್ರಸ್ತಾಪ ಮಾಡಿರೋದು ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿದೆ. ಶಾಸಕನ ಮನೆ ಮೇಲೆ ದಾಳಿ ಮಾಡಿದ ಪ್ರಕರಣವನ್ನು ಸರ್ಕಾರದ ವಿರುದ್ಧದ ಅಸ್ತ್ರವಾಗಿ ಪ್ರಯೋಗಿಸಲು ಬಿಜೆಪಿ ಮುಂದಾಗಿದೆ. ಆದರೆ ಆಡಿಯೋ ದಲ್ಲಿ ಜೆಡಿಎಸ್ ಹಾಗೂ ಆದರ ಹಿರಿಯ ನಾಯಕರ ಬಗ್ಗೆ ಪ್ರೀತಂ ಲಘುವಾಗಿ ಮಾತನಾಡಿರುವ ಬಗ್ಗೆ ಬಿಜೆಪಿ ನಾಯಕರು ಉಸಿರು ಎತ್ತುತ್ತಿಲ್ಲ.

ಈ ಘಟನೆ ಕುರಿತು ಸಿಎಂ ಜಿಲ್ಲಾಡಳಿತಕ್ಕೆ ಘಟನೆ ಬಗ್ಗೆ ಕ್ಲಾಸ್ ತೆಗೆದುಕೊಳ್ತಿದ್ದ ಹಾಗೆ ತನಿಖೆ ವಿಚಾರಣೆ ಚುರುಕಾಗಿದ್ದು ಹಾಸನ ಶಾಸಕ ಪ್ರೀತಂಗೌಡ ಮನೆ ಎದುರು ಗಲಾಟೆ ಮಾಡಿದ್ದ 8 ಮಂದಿ ಜೆಡಿಎಸ್ ಕಾರ್ಯಕರ್ತರ ವಿರುದ್ದ ಎಫ್‌ಐಆರ್ ದಾಖಲು ಮಾಡಲಾಗಿದೆ. ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಜೊತೆಗೆ ಬಿಜೆಪಿಯ 5 ಕಾರ್ಯಕರ್ತರ ವಿರುದ್ದವೂ ಎಫ್ಐಆರ್ ಮಾಡಲಾಗಿದೆ.

ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದರೂ ಬಿಜೆಪಿ ಇದನ್ನೇ ಇನ್ನಷ್ಟು ದೊಡ್ಡದಾಗಿ ಜಗ್ಗಾಡುತ್ತಿದೆ. ಕಾರಣ, ಆಡಿಯೋ ಪ್ರಕರಣದಿಂದ ಮಾನ ಹರಾಜಾಗುತ್ತಿರುವ ಹೊತ್ತಲ್ಲಿ ಜನರ ಗಮನ ಬೇರೆಡೆಗೆ ಸೆಳೆಯುವುದು. ಸದ್ಯ ಇದು ಬಿಜೆಪಿ ನಾಯಕರ ಮುಂದಿರುವ ಏಕೈಕ ದಾರಿ.

ಈ ಪ್ರಕರಣದಲ್ಲಿ ಶಾಸಕನ ಮನೆ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಶಿಕ್ಷೆಯಾಗುವುದು ಎಷ್ಟು ಮುಖ್ಯವೋ ಈಗಷ್ಟೇ ರಾಜಕೀಯಕ್ಕೆ ಕಾಲಿಟ್ಟಿರುವ ಯುವ ನಾಯಕರಿಗೆ ಹಿರಿಯ ನಾಯಕರಿಗೆ ಗೌರವ ನೀಡುವ ಸಂಸ್ಕೃತಿಯನ್ನು ಬಿಜೆಪಿ ಹೇಳಿಕೊಡಬೇಕಿರುವುದು ಅಷ್ಟೇ ಮುಖ್ಯ.

Leave a Reply