ಡಿಜಿಟಲ್ ಕನ್ನಡ ಟೀಮ್:
ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ 24 ತಾಸುಗಳು ಕಳೆಯುವಷ್ಟರಲ್ಲಿ ತಮ್ಮ ನಿಲುವು ಬದಲಿಸಿಬಿಟ್ಟರೆ? ಇಂತಹದೊಂದು ಪ್ರಶ್ನೆ ಈಗ ಬಹುತೇಕರನ್ನು ಕಾಡುತ್ತಿದೆ. ಕಾರಣ, ಇಂದು ಲೋಕಸಭೆಯಲ್ಲಿ ಭಾಷಣ ಮಾಡಿದ ಮುಲಾಯಂ, ‘ಮೋದಿ ಮತ್ತೇ ಪ್ರಧಾನಿಯಾಗಬೇಕು’ ಎಂದು ನೀಡಿರುವ ಹೇಳಿಕೆ.
ಹೌದು, ಬುಧವಾರ ಸಂಸತ್ತಿನಲ್ಲಿ ಬಜೆಟ್ ಅಧಿವೇಶನದ ಕಡೆಯ ದಿನದ ಕಲಾಪ ವೇಳೆ ಮಾತನಾಡಿದ ಮುಲಾಯಂ ಸಿಂಗ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಪಕ್ಕದಲ್ಲಿ ಕೂತು ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಹೇಳಿದಾಗ, ಸದನದಲ್ಲಿ ಉಪಸ್ಥಿತರಿದ್ದ ಬಿಜೆಪಿ ಹಾಗೂ ಬೆಂಬಲಿತ ಪಕ್ಷದ ಸದಸ್ಯರು ಮೇಜು ತಟ್ಟಿದರು. ಆದರೆ ಸೋನಿಯಾ ಗಾಂಧಿ ಸೇರಿದಂತೆ ಇತರೆ ಪ್ರತಿಪಕ್ಷದ ನಾಯಕರು ಮುಲಾಯಂ ಅವರ ಮಾತುಗಳಿಗೆ ಅಚ್ಚರಿಗೊಂಡು ಮಂದಹಾಸ ಬೀರಿದರು.
ಅತ್ತ ವಿಪಕ್ಷಗಳೆಲ್ಲಾ ಒಂದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎದುರಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ, ಇತ್ತ ಸಮಾಜವಾದಿ ಪಕ್ಷದ ವರಿಷ್ಠ ಮಲಾಯಂ ಸಿಂಗ್ ಯಾದವ್ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದನ್ನು ನೋಡಲು ಬಯಸಿದ್ದಾರೆ.
ಲೋಕಸಭೆಯಲ್ಲಿ ಮೋದಿ ಪರ ಬ್ಯಾಟಿಂಗ್ ಮಾಡಿದ ಮುಲಾಯಂ ಸಿಂಗ್ ಹೇಳಿದ್ದಿಷ್ಟು…
“ಪ್ರತಿಯೊಬ್ಬರನ್ನೂ ಜತೆಯಲ್ಲಿ ಮುಂದೆ ಕರೆದುಕೊಂಡು ಹೋಗುತ್ತಿರುವುದಕ್ಕೆ ಪ್ರಧಾನ ಮಂತ್ರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಪ್ರಧಾನಿ ಮೋದಿಗೆ ಸ್ವಚ್ಛ ರೆಕಾರ್ಡ್ ಇದೆ. ಲೋಕಸಭೆಯಲ್ಲಿ ಇದೇ ಸಂಸದರನ್ನು ನೋಡುವ ಹಾಗು ಪ್ರಧಾನಿಯಾಗಿ ಮೋದಿ ಮರಳುವುದನ್ನು ನೋಡಲು ಬಯಸುತ್ತೇನೆ.
ಮೋದಿ ಅವರು ಅತ್ಯುತ್ತಮ ಕೆಲಸ ಮಾಡಿದ್ದು, ಆ ವಿಚಾರವಾಗಿ ಯಾರೂ ಬೆರಳು ತೋರುವಂತಿಲ್ಲ. ಹೀಗಾಗಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಬಯಸುತ್ತೇವೆ.”
ಉತ್ತರ ಪ್ರದೇಶದ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಪೈಪೋಟಿ ನೀಡಲು ಖುದ್ದು ಮುಲಾಯಂ ಪುತ್ರ ಅಖಿಲೇಶ್ ಹಾಗು ಮಾಯಾವತಿರ SP ಹಾಗು BSP ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಈ ಹೊತ್ತಲ್ಲಿ ಮುಲಾಯಂ ಸಿಂಗ್ ಬಹಿರಂಗವಾಗಿ ಮೋದಿಗೆ ಬೆಂಬಲ ನೀಡಿರುವುದು ಅಚ್ಚರಿ ಮೂಡಿಸಿದೆ.
ಎರಡು ವರ್ಷಗಳ ಹಿಂದೆ ನಡೆದಿದ್ದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷದಲ್ಲಿ ಅಖಿಲೇಶ್ ಹಾಗು ಮುಲಾಯಂ ನಡುವೆ ಸಾಕಷ್ಟು ತಿಕ್ಕಾಟಗಳು ಕಂಡುಬಂದು, ಪಕ್ಷ ಎರಡು ಬಣಗಳಾಗಿಬಿಟ್ಟಿತ್ತು. ಈಗಲೂ ಸಮಾಜವಾದಿ ಪಕ್ಷದಲ್ಲಿ ದ್ವಂದ್ವ ನಿಲುವು ಇದೆಯೇ? ಬಿಎಸ್ ಪಿ ಜತೆಗೆ ಪುತ್ರ ಅಖಿಲೇಶ್ ಮೈತ್ರಿ ಕುರಿತು ಮುಲಾಯಂಗೆ ಅಸಮಾಧಾನವೇ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳಲು ಮುಲಾಯಂ ಮಾತುಗಳು ದಾರಿ ಮಾಡಿಕೊಟ್ಟಿವೆ.