ರಾಜ್ಯ ರಾಜಕಾರಣದಲ್ಲಿ ಪ್ರತಿಭಟನೆ ತಂತ್ರ ಪ್ರತಿತಂತ್ರಗಳ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಆಡಿಯೋ ಪ್ರಕರಣದಲ್ಲಿ ಆಗುತ್ತಿರುವ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿಯು ನಿನ್ನೆ ಹಾಸನ ಶಾಸಕ ಪ್ರೀತಂ ಗೌಡ ಅವರ ಮನೆ ಮೇಲೆ ನಡೆದ ದಾಳಿಯನ್ನು ಬಳಸಿಕೊಳ್ಳುತ್ತಿದೆ. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಕೂಡ ಪ್ರತಿಪಕ್ಷ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಮುಳ್ಳನ್ನು ಮುಳ್ಳಿಂದಲೇ ತೆಗೆಯುವ ತಂತ್ರಕ್ಕೆ ಮುಂದಾಗಿದ್ದು, ಪರಿಣಾಮ ರಾಜ್ಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಏನಿದ್ದರೂ ಪ್ರತಿಭಟನೆ ಹವಾ ಜೋರಾಗಲಿದೆ.

ಶಾಸನದಲ್ಲಿ ಜೆಡಿಎಸ್ ಕಾರ್ಯಕರ್ತರು ಶಾಸಕ ಪ್ರೀತಂ ಗೌಡ ಅವರ ಮನೆ ಮುಂದೆ ಪ್ರತಿಭಟನೆ ಮಾಡುವಾಗ ಕಲ್ಲು ತೂರಾಟ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಹಾಸನ ಸೇರಿದಂತೆ ರಾಜ್ಯವ್ಯಾಪಿ ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ.

ಆಪರೇಷನ್ ಆಡಿಯೋ ಪ್ರಕರಣವನ್ನು ಸರ್ಕಾರ ಕೈಬಿಡುವಂತೆ ಪರೋಕ್ಷವಾಗಿ ಒತ್ತಡ ಹೇರಲು ಬಿಜೆಪಿ ಪ್ರತಿಭಟನೆಯ ತಂತ್ರ ರೂಪಿಸಿದೆ. ಇದೇ ಕಾರಣಕ್ಕೆ ಕಲ್ಲು ತೂರಾಟ ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿ ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ ಕ್ರಮಕ್ಕೆ ಆದೇಶ ನೀಡಿದ್ದರೂ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ.

ಬಿಜೆಪಿಯ ಈ ನಡೆಯಿಂದ ಕೆಂಡಾಮಂಡಲವಾಗಿರುವ ಕುಮಾರಸ್ವಾಮಿ ತಾವು ಕೂಡ ಬಿಜೆಪಿಯ ವಿರುದ್ಧದ ಪ್ರತಿಭಟನೆಗೆ ಮುಂದಾಗಿದೆ. ಆಡಿಯೋದಲ್ಲಿ ಜೆಡಿಎಸ್ ಪಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಸಾವಿನ ವಿಚಾರವಾಗಿ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ ಜೆಡಿಎಸ್ ಪ್ರತಿಭಟನೆ ನಡೆಸುವ ಬಗ್ಗೆ ಕುಮಾರಸ್ವಾಮಿ ಆಪ್ತರ ಬಳಿ ಚರ್ಚಿಸಿದ್ದಾರೆ.

ರಾಜ್ಯ ಮೈತ್ರಿ ಸರ್ಕಾರದಿಂದ ಈ ರೀತಿಯ ಯೋಜನೆ ಒಂದು ಸೈಲೆಂಟ್ ಆಗಿ ರೆಡಿ ಆಗ್ತಿದೆ ಅನ್ನೋ ಮಾಹಿತಿ ಸಿಕ್ಕಿದೆ. ಬಿಸಿ ಇದ್ದಾಗಲೇ ಕಬ್ಬಿಣ ತಟ್ಟಬೇಕು ಅನ್ನೊ ಗಾದೆ ಮಾತಿನಂತೆ ಬಿಸಿಯಲ್ಲೇ ಬಿಜೆಪಿಯನ್ನು ಬಗ್ಗಿಸಲು ಸ್ವತಃ ಸಿಎಂ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ನಾಯಕರ ಜೊತೆಗೂ ಚರ್ಚಿಸಿ, ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಹೇಳಿಕೆ ಬಗ್ಗೆ ಪ್ರತಿಭಟಿಸಿ ಲೋಕಸಭಾ ಚುನಾವಣೆಯಲ್ಲಿ ಜನರ ಮನಸ್ಸು ಮೈತ್ರಿ ಸರ್ಕಾರದ ಕಡೆಗೆ ವಾಲುವಂತೆ ಮಾಡಬೇಕು. ಈ ಮೂಲಕ ಬಿಜೆಪಿಯ ಕೆಟ್ಟತನವನ್ನು ಪ್ರಚಾರ ಮಾಡ್ಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಎಲ್ಲವೂ ಯೋಜನೆಯಂತೆ ಆದರೆ ಮುಂದಿನ ವಾರದಿಂದ ಪ್ರತಿಭಟನಾ ರ‌್ಯಾಲಿಗಳು ಆರಂಭವಾಗಲಿವೆ.

Leave a Reply