ಕಾಶ್ಮೀರದಲ್ಲಿ ಉಗ್ರರ ದಾಳಿ: 40ಕ್ಕೂ ಹೆಚ್ಚು ಯೋಧರು ಹುತಾತ್ಮ

ಡಿಜಿಟಲ್ ಕನ್ನಡ ಟೀಮ್:

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಜಿಹಾದಿಗಳ ಅಟ್ಟಹಾಸ ಮೆರೆದಿದ್ದು, 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ.

ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಜೈಶ್ ಇ ಮೊಹಮದ್ ಸಂಘಟನೆ ಉಗ್ರರು ಐಇಡಿ ಬಾಂಬ್ ಸ್ಫೋಟಿಸಿದ್ದಾರೆ. ಆದಿಲ್ ಅಹ್ಮದ್ ಎಂಬ ಉಗ್ರ ಆತ್ಮಾಹುತಿ ವಾಹನವನ್ನು ಚಲಾಯಿಸಿಕೊಂಡು ಯೋಧರು ಪ್ರಯಾಣಿಸುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಿದ್ದಾನೆ. ಸ್ಕಾರ್ಪಿಯೋ ಕಾರಿನಲ್ಲಿ 350 ಕೆಜಿ ಸ್ಪೋಟಕ ಇತ್ತು. ಈ ದಾಳಿ ಕಳೆದ ಒಂದು ದಶಕದ ಅವಧಿಯಲ್ಲಿ ದೊಡ್ಡ ದಾಳಿ ಆಗಿದೆ.

ತೀವ್ರ ಪ್ರಮಾಣದಲ್ಲಿ ಐಇಡಿ ಸ್ಫೋಟಗೊಂಡ ಕಾರಣ ಹಲವು ಯೋಧರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್‌ ಉಗ್ರ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ.

ಸುಮಾರು 2500 ಸಿಆರ್ ಪಿಎಫ್ ಯೋಧರು ತಮ್ಮ ಕರ್ತವ್ಯ ಮುಗಿಸಿ ಅವಂತಿಪುರದ ಶ್ರೀನಗರ- ಜಮ್ಮು ಹೆದ್ದಾರಿಯಲ್ಲಿ ಸಾಗುವಾಗ ಈ ದಾಳಿ ನಡೆದಿದೆ. ಈ ಯೋಧರು ಒಟ್ಟು 78 ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು ಎಂದು ವರದಿಗಳು ಬಂದಿವೆ.  ಘಟನಾ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಯನ್ನು ರವಾನಿಸಲಾಗಿದ್ದು, ಇಡೀ ಪ್ರದೇಶವನ್ನು ಈಗ ಸುತ್ತುವರಿಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ನಿನ್ನೆಯಷ್ಟೇ ಜಮ್ಮು ಕಾಶ್ಮೀರದ ಬಡಗಾಂವ್‌ನಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್‌ ನಡೆಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ಉಗ್ರರು ಈ ದಾಳಿ ನಡೆಸಿದ್ದಾರೆ.

ಈ ದಾಳಿಯನ್ನು ಎಲ್ಲ ಪಕ್ಷಗಳ ನಾಯಕರು ಖಂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ನಡೆ ಹೇಗಿರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

Leave a Reply