ಈ ತಪ್ಪಿಗೆ ಸೂಕ್ತ ಬೆಲೆ ತೆರುತ್ತೀರಿ ಎಂದು ಪಾಕ್ ಗೆ ಎಚ್ಚರಿಕೆ ಕೊಟ್ರು ಮೋದಿ!

ಡಿಜಿಟಲ್ ಕನ್ನಡ ಟೀಮ್:

ಸಿಆರ್ ಪಿಎಫ್ ಯೋಧರ ಮೇಲೆ ಪಾಕ್ ಬೆಂಬಲಿತ ಜೈಶ್ ಇ ಮೊಹಮದ್ ಸಂಘಟನೆ ನಡೆಸಿದ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು, ‘ಈ ತಪ್ಪಿಗೆ ಪ್ರತಿಯಾಗಿ ದೊಡ್ಡ ಬೆಲೆ ತೆರುತ್ತೀರಿ’ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟ ಹಾಕಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಗುರುವಾರ ಜಮ್ಮು ಕಾಶ್ಮೀರದ ಅವಾಂತಿಪುರಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದ ಮೋದಿ, ಯೋಧರ ತ್ಯಾಗವನ್ನು ಸ್ಮರಿಸಿ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು…

“ಪುಲ್ವಾಮಾ ದಾಳಿಯಲ್ಲಿ ಜೀವ ಕಳೆದುಕೊಂಡ ಯೋಧರಿಗೆ ನಮನ ಸಲ್ಲಿಸುತ್ತೇನೆ. ನಮ್ಮ ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಲಾಗಿದೆ. ಅವರ ಪರಾಕ್ರಮದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಈ ದಾಳಿಯ ನಂತರ ದೇಶದ ಜನರ ರಕ್ತ ಕುದಿಯುತ್ತಿದೆ. ಹೀಗಾಗಿ ಭಯೋತ್ಪಾದಕರನ್ನು ಮಟ್ಟ ಹಾಕಲು ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಲಾಗುವುದು.

ಇಂಥ ದುಷ್ಕೃತ್ಯಗಳು ನಮ್ಮನ್ನು ದುರ್ಬಲಗೊಳಿಸಬಲ್ಲವು ಎಂದು ನಮ್ಮ ನೆರೆ ದೇಶ ಚಿಂತಿಸುತ್ತದೆ, ಆದರೆ ಅದರೆ ಅವರ ಯೋಜನೆಗಳು ಎಂದಿಗೂ ಫಲಿಸವು. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದವರ ಕುಟುಂಬಗಳಿಗೆ ನನ್ನ ಶ್ರದ್ಧಾಂಜಲಿ ಇರಲಿದೆ. ಭಯೋತ್ಪಾದಕ ದಾಳಿಗಳ ಹಿಂದೆ ಇದ್ದವರನ್ನು ಶಿಕ್ಷಿಸಲಾಗುವುದು.

ಈ ದಾಳಿ ಮೂಲಕ ಪಾಕಿಸ್ತಾನ ದೊಡ್ಡ ತಪ್ಪು ಮಾಡಿದೆ. ಇದಕ್ಕೆ ತಕ್ಕ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇಡೀ ದೇಶಕ್ಕೇ ಇದೊಂದು ಭಾವನಾತ್ಮಕ ಘಳಿಗೆಯಾಗಿದ್ದು, ದಾಳಿ ವಿರುದ್ಧ ಇಡೀ ದೇಶ ಒಟ್ಟಾಗಿ ನಿಲ್ಲುತ್ತದೆ. ನಾವು ಯುದ್ಧವನ್ನು ಒಟ್ಟಾಗಿ ಎದುರಿಸಲಿದ್ದೇವೆ. ಈ ದಾಳಿ ಹಿಂದಿರುವ ಶಕ್ತಿಗಳು ಹಾಗು ಜವಾಬ್ದಾರರಾದವನ್ನು ಶಿಕ್ಷಿಸಲಾಗುವುದು.

ಪುಲ್ವಾಮಾ ದಾಳಿಯನ್ನು ಖಂಡಿಸಿದ ದೇಶಗಳಿಗೆ ಧನ್ಯವಾದ ತಿಳಿಸಿದ ಪ್ರಧಾನಿ, ಭಯೋತ್ಪಾದನೆಯನ್ನು ಮಟ್ಟ ಹಾಕಲು ಎಲ್ಲ ಒಟ್ಟಾಗಿ ಬರಬೇಕು. ನನ್ನ ಜೀವನದ ಪ್ರತಿ ಕ್ಷಣವನ್ನೂ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರ ಸಮೃದ್ಧತೆ ಹಾಗು ಭದ್ರತೆಗಳೆಂಬ ಎರಡು ಕನಸುಗಳನ್ನು ಸಾಕಾರಗೊಳಿಸಲು ಕಳೆಯಲು ಇಚ್ಛಿಸುತ್ತೇನೆ.”

Leave a Reply