ಯೋಧ ಸಾಯುವ ಮೊದಲು ಹೆಂಡತಿ ಮಾತನಾಡಲಿಲ್ಲ ಯಾಕೆ..!?

ಡಿಜಿಟಲ್ ಕನ್ನಡ ಟೀಮ್:

ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು 40ಕ್ಕೂ ಹೆಚ್ಚು ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ ಅದರಲ್ಲಿ ನಮ್ಮ ಮಂಡ್ಯ ಜಿಲ್ಲೆಯ ವೀರ ಯೋಧ ಗುರು ಕೂಡ ಒಬ್ಬರು.

ಕಳೆದ ವಾರವಷ್ಟೇ ಹುಟ್ಟೂರಿಗೆ ಬಂದಿದ್ದ ಗುರು, ಕಳೆದ ಭಾನುವಾರ ಕರ್ತವ್ಯಕ್ಕೆ ಹಾಜರಾಗಲು ಜಮ್ಮು ಕಾಶ್ಮೀರಕ್ಕೆ ತೆರಳಿದ್ರು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗುಡಿಗೆರೆ ಕಾಲೋನಿಯ ಹೆಚ್​ ಗುರು, ವೀರಮರಣ ಅಪ್ಪಿದ ಯೋಧನಾಗಿದ್ದಾರೆ. 33 ವರ್ಷದ ಯೋಧ ಗುರು, 2011ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿ ಬೆಟಾಲಿಯನ್​ 82ರಲ್ಲಿ ಕರ್ತವ್ಯ ಮಾಡ್ತಿದ್ರು. ಇತ್ತೀಚಿಗಷ್ಟೇ ರಜೆ ಮೇಲೆ ತವರಿಗೆ ಬಂದಿದ್ದ ಗುರು, ಒಂದು ವಾರ ಹುಟ್ಟೂರಾದ ಗುಡಿಗೆರೆ ಕಾಲೊನಿಯಲ್ಲೇ ಇದ್ದರು. ಇದೀಗ ಉಗ್ರನ ಆತ್ಮಾಹುತಿ‌ ದಾಳಿಗೆ ಜೀವ ಕೊಟ್ಟಿದ್ದಾನೆ.

ತಂದೆ ಹೊನ್ನಯ್ಯ, ತಾಯಿ ಚಿಕ್ಕೋಳಮ್ಮ, ಅವರ ಮೂವರು ಗಂಡುಮಕ್ಕಳಲ್ಲಿ ಹುತಾತ್ಮ ಯೋಧ ಗುರು ಹಿರಿಯವರಾಗಿದ್ದು, ಸೇನೆಗೆ ಸೇರುವಾಗ ಪೊಲೀಸ್​ ಕೆಲಸಕ್ಕೆ ಎಂದು ಮನೆಯವರಿಗೆ ಸುಳ್ಳು ಹೇಳಿದ್ರಂತೆ. ಬಳಿಕ ಟ್ರೈನಿಂಗ್​ ಮುಗಿಸಿಕೊಂಡು ಸೇನೆಯ ಕರ್ತವ್ಯಕ್ಕೆ ತೆರಳುವಾಗ ಪೋಷಕರಿಗೆ ನಾನು ಸೈನಿಕನಾಗಿ ತೆರಳುತ್ತಿದ್ದೇನೆ ಎಂದು ತಿಳಿಸಿದ್ದರು ಎನ್ನುತ್ತಾರೆ ತಂದೆ ಹೊನ್ನಯ್ಯ.

ಶ್ರೀನಗರದ 82ನೇ ಬೆಟಾಲಿಯನ್​ನಲ್ಲಿ ಕರ್ತವ್ಯ ನಿರ್ವಹಿಸ್ತಿದ್ದ ಯೋಧ ಗುರು ಅವರಿಗೆ, ಮಧು ಹಾಗೂ ಆನಂದ್ ಎಂಬ ಇಬ್ಬರು ಸಹೋದರಿದ್ದು, ಮನೆಯ ಜವಾಬ್ದಾರಿ ಗುರು ಹೊತ್ತಿದ್ರು. ಕಳೆದ ವರ್ಷ ಹೊಸ ಮನೆ ನಿರ್ಮಾಣ ಮಾಡಿದ್ದ ಗುರು ಕುಟುಂಬ, ಸಾಸಲಾಪುರ ಗ್ರಾಮದ ಸೋದರಮಾವನ ಮಗಳು ಕಲಾವತಿ ಅವರನ್ನು ತಂದು ವಿವಾಹ ಮಾಡಿದ್ದರು.

ಮಗ ಕರ್ತವ್ಯಕ್ಕೆಂದು‌ ಹೊರಟು ನಿಂತಾಗ ಮಗನೇ ಇವತ್ತು ಬೇಡ ನಾಳೆ ಹೋಗು ಎಂದಿದ್ರಂತೆ. ಇವತ್ತು ಯಾಕೋ ಬೇಡ ಎನಿಸುತ್ತಿದೆ, ಕಾಗೆ ಬೇರೆ ಅಪಶಕುನ ಹೇಳುತ್ತಿದೆ ಎಂದು ತಾಯಿ ಎಚ್ಚರಿಸಿದರಂತೆ. ಜಗತ್ತಿನಲ್ಲಿ ನೀನೊಬ್ಬಳೆನಾ ಮಗನನ್ನು ಹೆತ್ತಿರುವವಳು ಎಂದ ಗುರು ದೇಶಸೇವೆಗೆ ಕಟಿಬದ್ಧರಾಗಿ ಹೊರಟಿದ್ರಂತೆ. ಇನ್ನು ಪ್ರತಿದಿನ ಮೂರು ಬಾರಿ ಹೆಂಡತಿ‌ಕರೆ ಮಾಡುತ್ತಿದ್ದ ಯೋಧ ಗುರು ನಿನ್ನೆ ಉಗ್ರರ ದಾಳಿಗೂ ಮುನ್ನ ಪತ್ನಿ ಕಲಾವತಿಗೆ ಕರೆ ಮಾಡಿದ್ರಂತೆ. ಬೆಳಗ್ಗೆ11 ಗಂಟೆಗೆ ಯೋಧ ಗುರು ಕರೆ ಮಾಡಿದ್ರು, ಪತ್ನಿ ಸ್ವಲ್ಪ ಕೆಲಸದ ಒತ್ತಡದಿಂದ ಸಂಜೆ ಮಾತನಾಡ್ತೇನೆ ಎಂದಷ್ಟೇ ಹೇಳಿ ಫೋನ್ ಕಟ್ ಮಾಡಿದ್ರಂತೆ. ಆ ಬಳಿಕ ಸಂಜೆ 6 ಗಂಟೆಗೆ ಫೋನ್ ಮಾಡಿದ್ರೆ ರೀಚ್ ಆಗಲಿಲ್ಲ. ಅವರು ಕೊನೆಯ ಬಾರಿ‌ ಕರೆ ಮಾಡಿದಾಗ ನಾನು ಮಾತನಾಡಬೇಕಿತ್ತು ಅಂತ ಕಣ್ಣೀರಿಡುತ್ತಾರೆ ಕಲಾವತಿ. ಒಟ್ಟಾರೆ ಯೋಧನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲು ಸಕಲ ತಯಾರಿ ನಡೆಯುತ್ತಿದೆ.

Leave a Reply