ಹುಟ್ಟೂರಲ್ಲಿ ಹುತಾತ್ಮ ಯೋಧ ಗುರು ಲೀನ

ಡಿಜಿಟಲ್ ಕನ್ನಡ ಟೀಮ್:

ಗುರುವಾರ ಉಗ್ರರ ದುಷ್ಕೃತ್ಯಕ್ಕೆ ಬಲಿಯಾದ ಯೋಧ ಗುರು, ಹುಟ್ಟೂರು ಮಂಡ್ಯ ಜಿಲ್ಲೆ ಮದ್ದೂರಿನ ಗುಡಿಗೆರೆಯಲ್ಲಿ ಲೀನವಾಗಿದ್ದಾನೆ. ಮಧ್ಯಾಹ್ನ 1 ಗಂಟೆ ವೇಳೆಗೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯೋಧ ಗುರು ಪಾರ್ಥಿವ ಶರೀರವನ್ನ ಸರ್ಕಾರ ಗೌರವಪೂರ್ವಕವಾಗಿ ಸ್ವಾಗತಿಸಿ, ಅಂತಿಮ ನಮನ ಸಲ್ಲಿಸಿದ್ರು. ಅಂತಿಮ ದರ್ಶನ ಪಡೆದು ಮಾತನಾಡಿದ ಸಿಎಂ ಕುಮಾರಸ್ವಾಮಿ, ಪಾರ್ಥಿವ ಶರೀರ ಬರೋದು ತಡವಾಗಿದೆ. ಹೀಗಾಗಿ ವಾಯುಪಡೆಯ ಹೆಲಿಕಾಪ್ಟರ್ ವ್ಯವಸ್ಥೆ ಮಾಡುವಂತೆ ರಕ್ಷಣಾ ಇಲಾಖೆಗೆ ಮನವಿ ಮಾಡಿದ್ದೆ, ಆದರೆ ಎಲ್ಲರನ್ನೂ ರಸ್ತೆ ಮೂಲಕವೇ ಕೊಂಡೊಯ್ಯಲಾಗಿದ್ದು, ಇವರಿಗೆ ಹೆಲಿಕಾಪ್ಟರ್ ವ್ಯವಸ್ಥೆ ಸಾಧ್ಯವಿಲ್ಲ ಎಂದಿದ್ದಾರೆ ಹಾಗಾಗಿ ಸಾಧ್ಯವಾದಷ್ಟು ಬೇಗ ಹುಟ್ಟೂರಿಗೆ ರವಾನಿಸ್ತೇವೆ ಎಂದ್ರು. ಜೊತೆಗೆ ಹುತಾತ್ಮ ಯೋಧ ಗುರು ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ 25 ಲಕ್ಷ ಪರಿಹಾರ ಹಾಗೂ ಯೋಧ ಗುರುವಿನ ಪತ್ನಿ ಕಲಾವತಿ ಅವರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ತಿಳಿಸಿದ್ದಾರೆ.

ಮಧ್ಯಾಹ್ನದ ಬಳಿಕ ಹುತಾತ್ಮ ಯೋಧ ಗುರು ಪಾರ್ಥಿವ ಶರೀರ ಹೊತ್ತ ಸೇನಾವಾಹನ ಹೆಚ್‌ಎಎಲ್‌ನಿಂದ ಎಂಜಿ ರಸ್ತೆ, ಪುರಭವನ, ಕೆಆರ್ ಮಾರ್ಕೆಟ್ ಮೇಲ್ಸೇತುವೆ ಮೂಲಕ ಮೈಸೂರು ರಸ್ತೆ ತಲುಪಿ, ರಾಮನಗರ, ಚನ್ನಪಟ್ಟಣ ಮಾರ್ಗವಾಗಿ ಮದ್ದೂರು ತಲುಪಿತು. ಅಲ್ಲಿಂದ ಕೆಎಂ ದೊಡ್ಡಿ ಮೂಲಕ ಗುಡಿಗೆರೆ ಗ್ರಾಮಕ್ಕೆ ತಲುಪಿತು. ರಸ್ತೆಯುದ್ದಕ್ಕೂ ಸಾವಿರಾರು ಜನ ಹುತಾತ್ಮ ಯೊಧನಿಗೆ ಅಂತಿಮ ನಮನ ಸಲ್ಲಿಸಿದರು. ಮನೆ ಬಳಿಗೆ ಪಾರ್ಥಿವ ಶರೀರ ಆಗಮಿಸ್ತಿದ್ದ ಹಾಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಅಷ್ಟೊರೊಳಗೆ ಸಮಯ 5.30ಕ್ಕೆ ಆಗಿದ್ರಿಂದ ಅಂತಿಮ ದರ್ಶನ ಹಾಗೂ ಅಂತಿಮ ಪೂಜಾ ವಿಧಿವಿಧಾನಕ್ಕೆ ಜಿಲಾಡಳಿತ ನಿಗದಿ ಮಾಡಿದಷ್ಟು ಸಮಯ ನೀಡಲು ಸಾಧ್ಯವಾಗಲಿಲ್ಲ. ನಂತರ ಸಂಜೆ 6.30 ರ ಹೊತ್ತಿಗೆ ಮೆಲ್ಲಹಳ್ಳಿ ಬಳಿಯ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಪಾರ್ಥಿವ ಶರೀರ ತರಲಾಯ್ತು. ಕುಟುಂಬಸ್ಥರನ್ನೂ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಕರೆತರಲಾಯ್ತು. ಸಾವಿರಾರು ಜನ ವೀರ ಯೋಧ ಗುರುಗೆ ಜೈಕಾರ ಕೂಗಿದರು. ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೊದಲಿಗೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ವೀರ ಯೋಧ ಗುರುಗೆ ಪುಷ್ಪನಮನ ಸಲ್ಲಿಸಿದ್ರು‌. ನಂತರ ಕೇಂದ್ರ ಸಚಿವ ಸದಾನಂದಗೌಡ, ರಾಜ್ಯ ಸಚಿವರಾದ ಸಿ.ಎಸ್ ಪುಟ್ಟರಾಜು, ಡಿ.ಸಿ ತಮ್ಮಣ್ಣ, ಸಾರಾ ಮಹೇಶ್, ಶಾಸಕರಾದ ಸುರೇಶ್ ಗೌಡ, ಎಂ ಶ್ರೀನಿವಾಸ್, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಂಡ್ಯ ಡಿಸಿ ಮಂಜುಶ್ರೀ, ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಅಂತಿಮ ನಮನ ಸಲ್ಲಿಸಿದರು. ಇನ್ನು ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಿದ ಬಳಿಕ ಮೂರು ಸುತ್ತು ಕುಶಾಲತೋಪು ಸಿಡಿಸಿ ಜಿಲ್ಲಾಡಳಿತ ಗೌರವ ಸಲ್ಲಿಸಿತು. ಬಳಿಕ ಸೇನಾ ಗೌರವ ಅರ್ಪಿಸಿ ರಾಷ್ಟ್ರಧ್ವಜವನ್ನು ಕುಟುಂಬಸ್ಥರಿಗೆ ಸಿಎಂ ಕುಮಾರಸ್ವಾಮಿ ಮೂಲಕ ಹಸ್ತಾಂತರ ಮಾಡಲಾಯ್ತು. ಇದೇ ವೇಳೆ ಸಿಎಂ ಕುಮಾರಸ್ವಾಮಿ 25 ಲಕ್ಷ ರೂಪಾಯಿ ಪರಿಹಾರದ ಹಣವನ್ನು ಯೋಧ ಗುರು ಪತ್ನಿ ಕಲಾವತಿಗೆ ಚೆಕ್ ನೀಡಿ ಸಮಾಧಾನದ ಮಾತನಾಡಿದ್ರು. ನಂತರ ಮಡಿವಾಳ ಸಂಪ್ರದಾಯದ ಪ್ರಕಾರ ಚಿತೆಗೆ ಅಗ್ನಿಸ್ಪರ್ಶ ಮಾಡಲಾಯ್ತು. ಯೋಧ ಗುರು ಸಹೋದರ ಮಧು ಚಿತೆಗೆ ಅಗ್ನಿಸ್ಪರ್ಶ ಮಾಡಿದ್ರು. ಈ ಮೂಲಕ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಯೋಧ ಮಂಡ್ಯದ ಗಂಡು ಗುರು ಪಂಚಭೂತಗಳಲ್ಲಿ ಲೀನವಾದರು. ಗುರು ಅಮರ್ ರಹೇ ಗುರು ಅಮರ್ ರಹೇ ಅನ್ನೋ ಘೋಷವಾಕ್ಯ ಮೊಳಗುತ್ತಿದೆ.

Leave a Reply