ಉಗ್ರರ ವಿರುದ್ಧ ಕಾರ್ಯಾಚರಣೆ: ಪುಲ್ವಾಮದಲ್ಲಿ ಮತ್ತೆ ನಾಲ್ವರು ಯೋಧರು ಹುತಾತ್ಮ!

ಡಿಜಿಟಲ್ ಕನ್ನಡ ಟೀಮ್:

ಕರಾಳ ಫೆಬ್ರವರಿ 14ರಂದು ಸಿಆರ್ ಪಿಎಫ್ ಯೋಧರ ಮೇಲಿನ ದಾಳಿಯ ಕಿಚ್ಚು ಭಾರತೀಯರ ಮನದಲ್ಲಿ ಕುದಿಯುತ್ತಿರುವಾಗಲೇ ಮತ್ತೇ ನಾಲ್ವರು ವೀರ ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ.

ಪುಲ್ವಾಮದ ಪಿಂಗ್ಲಾ ಪ್ರಾಂತ್ಯದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸಿದ್ದು, ಓರ್ವ ಮೇಜರ್ ಸೇರಿದಂತೆ ಭಾರತೀಯ ಸೇನೆಯ ನಾಲ್ಕು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ.
ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದು, ‘ಉಗ್ರರು ಹಾಗೂ ಸೈನಿಕರ ನಡುವೆ ಭೀಕರ ಚಕಮಕಿ ನಡೆಯುತ್ತಿದ್ದು, ಈ ವೇಳೆ ಸೇನೆಯ ನಾಲ್ಕು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಅಂತೆಯೇ ಹಲವು ಸೈನಿಕರು ಗಾಯಗೊಂಡಿದ್ದು, ಗಾಯಾಳು ಸೈನಿಕರನ್ನು ಸಮೀಪದ ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪಿಂಗ್ಲಾ ಪ್ರಾಂತ್ಯದಲ್ಲಿ 4ಕ್ಕೂ ಅಧಿಕ ಉಗ್ರರು ಅಡಗಿರುವ ಶಂಕೆ ಮೇರೆಗೆ ಅಲ್ಲಿ ಸೇನೆ ಶೋಧ ಕಾರ್ಯಕ್ಕೆ ಮುಂದಾಗಿತ್ತು. ಈ ವೇಳೆ ಸೈನಿಕರು ಆಗಮಿಸುತ್ತಿದ್ದಂತೆಯೇ ಅಡಗಿದ್ದ ಉಗ್ರರು ಏಕಾಏಕಿ ಸೈನಿಕರತ್ತ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲೇ ನಾಲ್ಕು ಮಂದಿ ಸೈನಿಕರ ಸಾವನ್ನಪ್ಪಿದ್ದು, ಈ ಪೈಕಿ ಓರ್ವ ಮೇಜರ್ ಹುದ್ದೆಯ ಸೈನಿಕಾಧಿಕಾರಿ ಕೂಡ ಸೇರಿದ್ದಾರೆ’ ಎಂದಿದ್ದಾರೆ.

ಹುತಾತ್ಮ ಯೋಧರನ್ನು ಮೇಜರ್ ವಿ ಎಸ್ ಧೌಂಡಿಯಾಲ್, ಹವಾಲ್ದಾರ್ ಶಿಯೋ ರಾಮ್, ಸಿಪಾಯಿ ಅಜಯ್ ಕುಮಾರ್ ಮತ್ತು ಸಿಪಾಯಿ ಹರಿ ಸಿಂಗ್ ಎಂದು ಗುರುತಿಸಲಾಗಿದೆ.

Leave a Reply