ಸ್ವತಂತ್ರ ಕಾಶ್ಮೀರ ಜನಾಭಿಪ್ರಾಯದ ಬಗ್ಗೆ ಮಾತನಾಡಿ ಜನರಿಂದ ಉಗಿಸಿಕೊಳ್ಳುತ್ತಿರುವ ಕಮಲ್ ಹಾಸನ್!

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಸ್ವತಂತ್ರ್ಯ ಕಾಶ್ಮೀರವನ್ನಾಗಿ ಘೋಷಣೆ ಮಾಡಿ, ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಣೆ ಮಾಡಬೇಕು ಎಂದು ಅಪ್ರಬುದ್ಧ ಹೇಳಿಕೆ ನೀಡಿರುವ  ಖ್ಯಾತ ನಟ ಹಾಗೂ ಎಂಎನ್ಎಂ ಪಕ್ಷದ ಸಂಸ್ಛಾಪಕ ಕಮಲ್ ಹಾಸನ್ ಗೆ ನೆಟ್ಟಿಗರು ಚಳಿ ಬಿಡಿಸಿದ್ದಾರೆ.

ಚೆನ್ನೈನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಕಮಲ್ ಹಾಸನ್ ಅವರು, ಭಾರತ ಮತ್ತು ಪಾಕಿಸ್ತಾನದ ರಾಜಕಾರಣಿಗಳು ಜವಾಬ್ದಾರಿತನದಿಂದ ವರ್ತಿಸಿದರೆ, ಖಂಡಿತಾ ಪುಲ್ವಾಮ ಉಗ್ರ ದಾಳಿಯಂತಹ ಘಟನೆಗಳು ನಡೆಯುವುದಿಲ್ಲ. ಗಡಿ ಪ್ರದೇಶದಲ್ಲಿ ಹಿಂಸಾಚಾರ ತಲೆ ಎತ್ತುವುದಿಲ್ಲ. ನನ್ನ ಪ್ರಕಾರ ಕಣಿವೆ ರಾಜ್ಯದಲ್ಲಿ ಜನಾಭಿಪ್ರಾಯದ ಸಂಗ್ರಹಣ ಅನಿವಾರ್ಯವಾಗಿದೆ. ಅಲ್ಲಿನ ಜನರ ಆಶೋತ್ತರಗಳಿಗೆ ಕೇಂದ್ರ ಸರ್ಕಾರ ತುರ್ತಾಗಿ ಸ್ಪಂದಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗುವ ಸಾಧ್ಯತೆಗಳಿವೆ. ಪುಲ್ವಾಮ ಉಗ್ರ ದಾಳಿಯಲ್ಲಿ ಸೈನಿಕರ ಸಾವು ನಿಜಕ್ಕೂ ನನಗೆ ಅತೀವ ನೋವು ತಂದಿದೆ. ಸೈನಿಕರು ಕಾಶ್ಮೀರಕ್ಕೆ ಸಾಯಲೆಂದೇ ಹೋಗುತ್ತಾರೆಯೇ..? ಇದಕ್ಕೆ ಪರಿಹಾರವೇ ಇಲ್ಲವೇ.. ಸರ್ಕಾರವೇಕೆ ಅಲ್ಲಿನ ಜನಗಳ ಜನಾಭಿಪ್ರಾಯಕ್ಕೆ ಹಿಂದೇಟು ಹಾಕುತ್ತಿದೆ ಎಂಬುದು ತಮಗೆ ತಿಳಿಯುತ್ತಿಲ್ಲ.

ಅಂತೆಯೇ ಗಡಿಯಲ್ಲಿ ಸೈನಿಕರು ಸತ್ತರೆ, ಉಭಯ ದೇಶಗಳ ರಾಜಕಾರಣಿಗಳು ಸಂಯಮದಿಂದ ವರ್ತಿಸಬೇಕು. ಅದನ್ನು ಬಿಟ್ಟು ಪ್ರಚೋಧನಾತ್ಮಕ ಹೇಳಿಕೆಗಳನ್ನು ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು. ಪಿಒಕೆಯನ್ನು ಸ್ವತಂತ್ರ್ಯ ಕಾಶ್ಮೀರವಾಗಿ ಘೋಷಣೆ ಮಾಡಿ ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದಲ್ಲಿ ಸರ್ಕಾರ ಜನಾಭಿಪ್ರಾಯ ಸಂಗ್ರಹಣೆಗೆ ಮುಂದಾಗಬೇಕು. ಅವರ ಆಶೋತ್ತರಗಳಿಗೆ ಸ್ಪಂದಿಸಿ ಹೊಸ ರಾಜಕೀಯ ವ್ಯವಸ್ಛೆ ಮತ್ತು ಹೊಸ ಸಂಸ್ಕೃತಿಯನ್ನು ಬೆಳಸಬೇಕು’ ಎಂದು ಹೇಳಿದ್ದಾರೆ.

ಕಾಶ್ಮೀರ ವಿಚಾರವಾಗಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಅನೇಕ ದಶಕಗಳಿಂದ ತಿಕ್ಕಾಟ ಮುಂದುವರಿಯುತ್ತಿದ್ದು, ವಿಶ್ವಸಂಸ್ಥೆ ಇಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೆ ಷರತ್ತುಗಳನ್ನು ಹಾಕಿ ಸಲಹೆ ನೀಡಿತ್ತು. ಈಗ ಇದನ್ನೇ ಅಸ್ತ್ರವಾಗಟ್ಟುಕೊಂಡು ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವ ಕಮಲ್ ಕಾಶ್ಮೀರವನ್ನು ಸ್ವಾಂತ್ರವನ್ನಾಗಿ ಮಾಡಿ ಜನಾಭಿಪ್ರಾಯ ಸಂಗ್ರಹಿಸಲು ಕೇಂದ್ರ ಸರ್ಕಾರಕ್ಕೆ ಧೈರ್ಯವಿಲ್ಲ ಯಾಕೆ? ಎಂದು ಪ್ರಶ್ನಿಸಿ ರಾಜಕೀಯ ಮಾಡಲು ಮುಂದಾಗಿದ್ದಾರೆ.

ಕಮಲ್ ಅವರು ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಮನಸೋ ಇಚ್ಛೆ ನಿಂದಿಸುತ್ತಿದ್ದಾರೆ. ಇಲ್ಲಿ ಕಮಲ್ ಅವರು ಭಾರತದ ಹಿತಾಸಕ್ತಿಯನ್ನು ಬದಿಗಿಟ್ಟು ಈ ಹೇಳಿಕೆ ನೀಡಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕಾರಣ, ಪಾಕ್ ಆಕ್ರಮಿತ ಪ್ರದೇಶ ಸೇರಿದಂತೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಇದನ್ನೇ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಳುತ್ತಾ ಬಂದಿದೆ. ಆದರೆ ಪ್ರತ್ಯೇಕತಾವಾದಿಗಳು, ಪಾಕ್ ಪ್ರಾಯೋಜಿತ ಭಯೋತ್ಪಾದಕರು ಹಾಗೂ ಮತಾಂದರು ಕಾಶ್ಮೀರದ ಜನರನ್ನು ತಲೆ ಕೆಡಿಸಿ ಭಾರತದ ವಿರುದ್ಧವೇ ಎತ್ತಿಕಟ್ಟುತಿದ್ದಾರೆ. ಇನ್ನು ವಿಶ್ವಸಂಸ್ಥೆ ಷರತ್ತುಗಳ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರದಿಂದಪಾಕಿಸ್ತಾನ ಸೇನೆ ಹಿಂದಕ್ಕೆ ಹೋಗಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಪ್ರಮಾಣ ತಗ್ಗಿಸಿ ನಂತರ ಜನಾಭಿಪ್ರಾಯ ಸಂಗ್ರಹಿಸಬೇಕು ಎಂದು ಹೇಳಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಸೇನೆ ಪಾಕ್ ಆಕ್ರಮಿತ ಪ್ರದೇಶದಿಂದ ಹಿಂದೆ ಸರಿಯುತ್ತಿಲ್ಲ. ಹೀಗಿರುವಾಗ ಭಾರತ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗುವುದು ನಮ್ಮ ದೇಶದ ಹಿತಾಸಕ್ತಿಗೆ ವ್ಯತಿರಕ್ತ ನಿರ್ಧಾರವಾಗಲಿದೆ. ಈ ಸಮಾನ್ಯ ಪ್ರಜ್ಞೆಯನ್ನು ಇಟ್ಟುಕೊಳ್ಳದೇ ಮಾತನಾಡಿರುವ ಕಮಲ್ ಹಾಸನ್ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Leave a Reply