ರಾಜ್ಯದಲ್ಲಿ ದೋಸ್ತಿಗಳ ನಡುವೆ ಟಿಕೆಟ್ ಫೈಟ್..!?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದೇ ಲೋಕಸಭಾ‌ ಚುನಾವಣೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು. ಒಂದು ವೇಳೆ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಅಧಿಕಾರಕ್ಕೆ ಬಂದರೆ ಈಗಿನ ಸ್ಥಾನಗಳನ್ನೂ ಉಳಿಸಿಕೊಳ್ಳೋದು ಕಷ್ಟ ಎನ್ನುವುದು ಕಾಂಗ್ರೆಸ್ ನಾಯಕರ ಮಾತಾಗಿತ್ತು. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಜೆಡಿಎಸ್‌ಗೆ ಬೇಷರತ್ ಬೆಂಬಲ ಎನ್ನುವ ಪ್ರಸ್ತಾವಕ್ಕೆ ಜೆಡಿಎಸ್ ಮರುಮಾತನಾಡದಂತೆ ತಂತ್ರಗಾರಿಕೆ ಮಾಡಿತ್ತು.‌ ಆ ಬಳಿಕ ಅಧಿಕಾರ ಹಂಚಿಕೆ ವೇಳೆ ಸೂತ್ರ ಹಿಡಿದು ಬಂದ ಕಾಂಗ್ರೆಸ್ ಎರಡು ಭಾಗ, ಜೆಡಿಎಸ್‌ಗೆ ಒಂದು ಭಾಗ ಎಂದು ಹೇಳುವ ಮೂಲಕ 22 ಸಚಿವ ಸ್ಥಾನ ಕಾಂಗ್ರೆಸ್ ಹಾಗೂ 11 ಸಚಿವ ಸ್ಥಾನ ಜೆಡಿಎಸ್‌ಗೆ ಎಂದಿತ್ತು.‌ ಇದೀಗ ಅದೇ ಸೂತ್ರವನ್ನು ಆಧರಿಸಿ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ 30 ನಿಗಮಗಳನ್ನು ಪಡೆದುಕೊಂಡರೆ ಜೆಡಿಎಸ್ 20 ನಿಗಮಗಳನ್ನು ಪಡೆದಿದೆ. ಇದೀಗ ಅದೇ ಸೂತ್ರ ಕಾಂಗ್ರೆಸ್ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ.

ಹೌದು, ಕಾಂಗ್ರೆಸ್ ಅಸ್ತ್ರವನ್ನೂ ಕಾಂಗ್ರೆಸ್‌ಗೆ ಮರಳಿಸಿರುವ ಜೆಡಿಎಸ್ ನಾಯಕರು, 18 ಸ್ಥಾನಗಳಲ್ಲಿ ನೀವು ಸ್ಪರ್ಧೆ ಮಾಡಿ, ಆದರೆ ನಮ್ಮ ಜೆಡಿಎಸ್ ಪಕ್ಷ ಪ್ರಾಬಲ್ಯ ಹೊಂದಿರುವ ಹಳೇ ಮೈಸೂರು ಭಾಗದಲ್ಲಿ ನಮಗೆ 10 ಕ್ಷೇತ್ರಗಳನ್ನು ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದೇ ಕಾರಣಕ್ಕೆ ಕಳೆದ ಬಾರಿ ಸಭೆ ನಡೆಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಲವೊಂದು ಸಂಧರ್ಭದಲ್ಲಿ ತ್ಯಾಗ ಮಾಡಲು ಸಜ್ಜಾಗಿ ಇರಬೇಕಾಗುತ್ತದೆ ಎನ್ನುವ ಮೂಲಕ ಜೆಡಿಎಸ್‌ಗೆ ಕೆಲವೊಂದು ಕ್ಷೇತ್ರಗಳನ್ನು ಬಿಟ್ಟುಕೊಡಬೇಕಾಗಬಹುದು ಎಂಬ ಸುಳಿವನ್ನು ಬಿಟ್ಟುಕೊಟ್ಟಿದ್ರು. ಆ ಬಳಿಕವೂ ಕಾಂಗ್ರೆಸ್‌ನ ಹಾಲಿ ಸಂಸದರು ಸ್ಥಾನ ಬಿಟ್ಟು ಕೊಡಲು ಸಂಪೂರ್ಣವಾಗಿ ಸಹಮತ ವ್ಯಕ್ತಪಡಿಸಿರಲಿಲ್ಲ. ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಅಂತಿಮವಾಗಿ ಸಭೆ ನಡೆಸಿ, ಎಲ್ಲರ ಅಭಿಪ್ರಾಯ ಪಡೆದುಕೊಂಡಿದ್ದಾರೆ. ನಾವು ಹಾಲಿ ಇರುವ ಎಲ್ಲಾ ಕ್ಷೇತ್ರದ ಸಂಸದರಿಗೂ ಟಿಕೆಟ್ ಕೊಡಿಸಲು ಯತ್ನಿಸುವುದಾಗಿ ಕಾಂಗ್ರೆಸ್ ನಾಯಕರ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಬೇಕು ಅನ್ನೋ ಸಲಹೆಯನ್ನೂ ನೀಡಿರೋದು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.

ಕಾಂಗ್ರೆಸ್ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ತುಮಕೂರು ಕ್ಷೇತ್ರದಲ್ಲಿ ಮೋದಿ ಅಲೆ ನಡುವೆಯೂ ಗೆಲುವು ಸಾಧಿಸಿದೆ. ಈ ಐದು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ, ತೆನೆಹೊತ್ತ ಮಹಿಳೆ ಗೆಲುವು ಸಾಧಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಜೊತೆಗೆ ಮೈಸೂರು, ಮಂಡ್ಯ, ಹಾಸನವೂ ಜೆಡಿಎಸ್ ಪಾಲಾಗಲಿದ್ದು, ಇನ್ನು ರಾಯಚೂರು ಹಾಗೂ ವಿಜಯಪುರ, ಬೀದರ್ ಕ್ಷೇತ್ರದಲ್ಲೂ ಸ್ಪರ್ಧೆಗೆ ಜೆಡಿಎಸ್ ಒಲವು ತೋರಿಸಿದೆ. ಹೀಗಾಗಿ ಕಾಂಗ್ರೆಸ್ ಕನಿಷ್ಟ ಆರರಿಂದ ಏಳು ಸ್ಥಾನಗಳನ್ನು ಬಿಟ್ಟು ಕೊಡಲು ಮನಸ್ಸು ಮಾಡಿದೆ ಅನ್ನೋದು ಗೊತ್ತಾಗಿದ್ದು, ಯಾರೆಲ್ಲಾ ಕ್ಷೇತ್ರಗಳನ್ನು‌ ಕಳೆದುಕೊಳ್ತಾರೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಇನ್ನು ಈಗಾಗಲೇ ಜೆಡಿಎಸ್ ಜೊತೆಗಿನ ಮೈತ್ರಿಗಾಗಿ ನಾನು ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದು ಸಂಸದ ಡಿಕೆ ಸುರೇಶ್ ಘೋಷಣೆ ಮಾಡಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ರಾಜಕೀಯ ನಿವೃತ್ತಿಯ ಮಾತುಗಳು ಕೇಳಿ ಬರುತ್ತಿವೆ. ಇನ್ನು ಹಾಲಿ ಸಂಸದರು ಯಾರೆಲ್ಲಾ ಅವಕಾಶ ವಂಚಿತರಾಗ್ತಾರೆ ಅನ್ನೋದು, ದೆಹಲಿಯಲ್ಲಿ ರಾಹುಲ್ ಜತೆ ದೇವೇಗೌಡರ ಸಭೆ ಬಳಿಕ ಫೈನಲ್ ಆಗಲಿದೆ.

Leave a Reply