ಪಾಕ್ ಜೊತೆ ಯುದ್ಧ ಘೋಷಣೆ ಮಾಡ್ತಾರಾ ಮೋದಿ..?

ಡಿಜಿಟಲ್ ಕನ್ನಡ ಟೀಮ್:

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್ ಯೋಧರನ್ನು ಉಗ್ರರು ಹತ್ಯೆ ಮಾಡಿದ ಬಳಿಕ ಪಾಕಿಸ್ತಾನದ ಜೊತೆ ಯುದ್ಧ ಮಾಡಬೇಕು ಅನ್ನೋದು ಸಣ್ಣ ಸಣ್ಣ ಗಲ್ಲಿಯಲ್ಲೂ ಕೇಳಿ ಬರುತ್ತಿರುವ ವಿಚಾರ. ಆದ್ರೆ ಒಂದು ದೇಶ ಯುದ್ಧ ಮಾಡಬೇಕು ಅಂದರೆ ಸಾಮಾನ್ಯ ವಿಚಾರವಲ್ಲ.‌ ಅದಕ್ಕಾಗಿ ಬಹುಕೋಟಿ ಹಣವನ್ನು ವೆಚ್ಚಮಾಡಬೇಕಾಗದ ಅನಿವಾರ್ಯತೆ ಎದುರಾಗುತ್ತದೆ. ಅದಕ್ಕಾಗಿ ದೇಶ ಹಲವು ವರ್ಷಗಳ ಕಾಲ ಸಂಕಷ್ಟ ಎದುರಿಸಬೇಕಾಗಿ ಬಂದರು ಅಚ್ಚರಿಯಲ್ಲ. ಆದರೂ ದೇಶದ ಜನರ ಆಶಯದಂತೆ ಮೋದಿ ಯುದ್ಧ ಘೋಷಣೆ ಮಾಡಿಬಿಡ್ತಾರಾ ಅನ್ನೋ ಮಾತುಗಳು ದಟ್ಟವಾಗಿವೆ. ಈ ರೀತಿಯ ಮಾತುಗಳಿಗೆ ಮೋದಿ ಮಾಡುತ್ತಿರುವ ಒಂದೊಂದೇ ಕಾರ್ಯಗಳು ಪ್ರೇರಣೆಯಾಗಿವೆ.

ನಮ್ಮ ಯೋಧರ ತ್ಯಾಗ ಬಲಿದಾನ ವ್ಯರ್ಥವಾಗಲು ಬಿಡಲ್ಲ

ಮೊನ್ನೆ ಗುರುವಾರ ಘಟನೆ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಮಾತಿದು. ನಮ್ಮ ಸೈನಿಕರ ತ್ಯಾಗ ಬಲಿದಾನ ವ್ಯರ್ಥವಾಗಲು ಬಿಡಲ್ಲ ಎಂದು ಘೋಷಣೆ ಮಾಡಿದರು.‌ ಆ ಬಳಿಕ ಸಾಕಷ್ಟು ಬಾರಿ ಇದೇ ಮಾತನ್ನು ಹೇಳಿದ್ದಾರೆ. ಜೊತೆಗೆ ಸಿಆರ್‌ಪಿಎಫ್ ಅಧಿಕೃತವಾಗಿ ಹೇಳಿಕೆ ನೀಡಿದ್ದು, ನಾವೂ ಈ ಘಟನೆಯನ್ನು ಎಂದಿಗೂ ಕ್ಷಮಿಸಲ್ಲ, ಎಂದಿಗೂ ಮರೆಯೋದಿಲ್ಲ ಎಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸೋಕೆ ಭಾರತಕ್ಕೂ ಸಾಧ್ಯವಿಲ್ಲ. ಯಾಕಂದರೆ ಪಾಕಿಸ್ತಾನ ಕೂಡ ತಯಾರಿ ಮಾಡಿಕೊಂಡು ಕಾಯುತ್ತಿರುತ್ತದೆ.‌ ಆದರೆ ಅಧಿಕೃತವಾಗಿ ಘೋಷಣೆ ಮಾಡಿ ಯುದ್ಧ ಮಾಡಲು ಯಾವುದೇ ತೊಂದರೆ ಇಲ್ಲ. ಅದಕ್ಕಾಗಿ ಯುದ್ಧವನ್ನೇ ಮಾಡಿಬಿಡ್ತಾರೆ ಅನ್ನೋ ಮಾತುಗಳು ಚಾಲ್ತಿಯಲ್ಲಿವೆ.

ಇನ್ನೂ ವಿದೇಶಾಂಗ ಕಾರ್ಯದರ್ಶಿ ಸ್ನೇಹಿತ ರಾಷ್ಟ್ರಗಳ ಜೊತೆ ಪಾಕಿಸ್ತಾನದ ಹೀನ ಕೃತ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುವುದಕ್ಕೆ ಪ್ರಯತ್ನ ನಡೆಸಿದ್ದಾರೆ. ಸಾಕಷ್ಟು ದೇಶಗಳು ನಾವು ನಿಮ್ಮ ಜೊತೆ ಇರುತ್ತೇವೆ ಅನ್ನೋ ಭರವಸೆಯ ಮಾತನಾಡಿದ್ದು, ಭಾರತದ ನೈತಿಕ‌ ಬಲವನ್ನು ಹೆಚ್ಷಿಸಿದೆ. ಈ ನಡುವೆ ಭಾರತ ಪಾಕಿಸ್ತಾನದಿಂದ ಆಮದು ಆಗುವ ಹಣ್ಣು ಹಾಗೂ ಸಿಮೆಂಟ್ ಮೇಲಿನ ಆಮದು ಸುಂಕವನ್ನು ಶೇ. 200 ರಷ್ಟು ಹೇರಿಕೆ ಮಾಡಿ ಆದೇಶ ಮಾಡಿದೆ. ಜೊತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯರ ಜೊತೆಗೆ ಚರ್ಚೆ ನಡೆಸುತ್ತಿದೆ. ಜೊತೆಗೆ ಕಳೆದ 5 ವರ್ಷದಲ್ಲಿ ಒಮ್ಮೆಯೂ ಸರ್ವಪಕ್ಷ ಸಭೆಯನ್ನೇ ಕರೆಯದಿದ್ದ ಪ್ರಧಾನಿ ಮೋದಿ ಈ ಬಾರಿ ಸರ್ವಪಕ್ಷ ಸಭೆ ನಡೆಸಿದ್ದಾರೆ. ಇದೆಲ್ಲವನ್ನು ನೋಡಿದರೆ ಮೋದಿ ಯುದ್ಧ ಘೋಷಣೆ ಮಾಡ್ತಾರೆ ಎನಿಸುತ್ತದೆ.

ರಾಜಕೀಯ ಲೆಕ್ಕಾಚಾರ

ಚುನಾವಣೆ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ‌ ಮೋದಿ ಈಗಾಗಲೇ ಘೋಷಣೆ ಮಾಡಿರುವ ಹಾಗೆ ನಮ್ಮ ಸೈನಿಕರ ಬಲಿದಾನ ಹಾಗೂ ತ್ಯಾಗ ವ್ಯರ್ಥ ಆಗಬಾರದು. ಇದೇ ಹುಮ್ಮಸ್ಸಿನಲ್ಲಿ ಮೋದಿ‌ ಸರ್ಕಾರ ಯುದ್ಧ ಘೋಷಣೆ ಮಾಡಿದರೆ, ಚುನಾವಣೆಯನ್ನೇ ಮುಂದೂಡಲು ಅವಕಾಶವಿದೆ. ಇನ್ನು ಚುನಾವಣೆಗೆ ಕೇವಲ ಘೋಷಣೆ ಜೊತೆ ಬಂದರೆ ಕೇವಲ ಮಾತುಗಾರ ಎನಿಸಿಕೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಪಾಕಿಸ್ತಾನದ ಮೇಲೆ ಯುದ್ಧ ಘೋಷಣೆ ಮಾಡಿ ಗೆಲುವು ಸಾಧಿಸಿ ಚುನಾವಣೆಗೆ ಬಂದರೆ ಮತ್ತೊಂದು ಅವಧಿಗೆ ಪ್ರಧಾನಿ ಆಗುವುದು ಕಟ್ಟಿಟ್ಟ ಬುತ್ತಿ. ಇಡೀ ದೇಶವೇ ಪ್ರಧಾನಿ ಮೋದಿ ಬೆನ್ನಿಗೆ ನಿಲ್ಲೋದ್ರಲ್ಲಿ‌ ಅನುಮಾನವಿಲ್ಲ. ಈ ಎಲ್ಲಾ‌ ಆಯಾಮಗಳಲ್ಲಿ ಚಿಂತನೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ‌ ಚುನಾವಣೆ ಘೋಷಣೆಗೂ ಮೊದಲೇ ಯುದ್ಧ ಘೋಷಣೆ ಮಾಡ್ತಾರಾ‌ ಅನ್ನೋ ಅನುಮಾನ ಹುಟ್ಟುವಂತೆ ಮಾಡಿದೆ. ಇದಿಷ್ಟು ಲಾಭದ ಲೆಕ್ಕಾಚಾರ. ಆದ್ರೆ ಯುದ್ಧದಿಂದ ರಾಜಕೀಯವಾಗಿ ನಷ್ಟವೂ ಎದುರಾಗುವ ಸಾಧ್ಯತೆ ಇವೆ.

ಯುದ್ಧ ಘೋಷಣೆ ಮಾಡಿದ್ದೇ ಆದರೆ ಅದು ಆರ್ಥಿಕತೆ, ಸಾಮಾಜಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಯೋಧರ ಬಲಿದಾನ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುತ್ತದೆ. ಇನ್ನು ಪ್ರತಿಪಕ್ಷಗಳು ಮೋದಿ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಒತ್ತಡ ಹೇರಿ, ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಆದ್ಯತೆ ನೀಡಿ ಅಲ್ಲಿನ ಜನರು ಇಟ್ಟುಕೊಂಡಿರುವ ಪಾಕ್ ಪರ ಒಲವು ಅಳಿಸುವ, ಗಡಿಯಲ್ಲಿ ಯೋಧರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಭದ್ರತೆ ಹೆಚ್ಚಿಸುವ ಅವಕಾಶವಿದ್ದರೂ ರಾಜಕೀಯ ಸ್ವಾರ್ಥಕ್ಕೆ ಯುದ್ಧ ಮಾಡಿದರು ಎಂಬ ಆರೋಪ ಮಾಡುವ ಸಾಧ್ಯತೆಯೂ ಹೆಚ್ಚಿದೆ.

Leave a Reply