ರಾಹುಲ್ ಗೆಲ್ಲಿಸಿದರೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನಿಶ್ಚಿತ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಗಲು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ, ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿಯಾಗಿ ಮಾಡಬೇಕೆಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ಆಂಧ್ರ-ಕರ್ನಾಟಕ ಗಡಿಭಾಗದ ಅನಂತಪುರ ಜಿಲ್ಲೆಯ ಮಡಕಶಿರಾದಲ್ಲಿ ಮಾಜಿ ಸಿಎಂ ದಿವಂಗತ ವೈ.ಎಸ್. ರಾಜಶೇಖರರೆಡ್ಡಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪ್ರತ್ಯೇಕ ಹೋದಾ ಭರವಸಾ ಪ್ರಜಾ ಯಾತ್ರೆಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದರು.

ಆಂಧ್ರ ಜನರಿಗೆ ಈ ಹಿಂದೆ ಪಕ್ಷದ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಈಗ ಆಂಧ್ರ ಸಮಗ್ರ ಪ್ರಗತಿಗೆ ಅನುವಾಗುವಂತೆ ನೀವೆಲ್ಲರೂ ಕಾಂಗ್ರೆಸ್ ಕೈ ಹಿಡಿಯಬೇಕು. ಕಾಂಗ್ರಸ್ಸಿಗೆ ಶಕ್ತಿ ತುಂಬಬೇಕು. ಹಿಂದೆ ಪಕ್ಷ ಕಷ್ಟದಲ್ಲಿದ್ದಾಗ 38 ಸ್ಥಾನಗಳನ್ನು ತಂದು ಕೊಟ್ಟು, ಅಧಿಕಾರ ಹಿಡಿಯುವಂತೆ ಮಾಡಿದಿರಿ. ಈಗ ಅದರ ಪುನಾರವರ್ತನೆ ಮಾಡಿ ಎಂದು ಮನವಿ ಮಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರ ಕಾಂಗ್ರೆಸ್ ಮತ್ತದರ ಮುಖಂಡರು ದೇಶಕ್ಕಾಗಿ ಅನುಪಮ ಕೊಡುಗೆ ನೀಡಿದ್ದಾರೆ. ನೆಹರೂ ಅವರ ಕುಟುಂಬ ಈ ದೇಶದ ಪ್ರಗತಿಗೆ ಅವಿರತ ದುಡಿದಿದೆ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ವಗಾಂಧಿ ತಮ್ಮ ಜೀವ ತೆತ್ತಿದ್ದಾರೆ. ದೇಶ ಮತ್ತು ಆಂಧ್ರ ಪ್ರದೇಶದ ರಕ್ಷಣೆ, ಐಕ್ಯತೆ, ಶಾಂತಿ, ಅಭಿವೃದ್ಧಿಗೆ ಅವರ ಕುಟುಂಬದವರೇ ಆದ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದು ನಮ್ಮ, ನಿಮ್ಮೆಲ್ಲರ ಹೊಣೆ ಎಂದು ಹೇಳಿದರು.

ಮಾಜಿ ಸಿ.ಎಂ. ರಾಜಶೇಖರರೆಡ್ಡಿ ಅವರು ಯಾರೊಬ್ಬರ ಮನೆಯ ಆಸ್ತಿ ಅಲ್ಲ. ಅವರು ಕಾಂಗ್ರೆಸ್ ಆಸ್ತಿ. ಇಡೀ ಆಂಧ್ರದ ಆಸ್ತಿ. ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಅವರು ಕೂಡ ಪಕ್ಷಕ್ಕೆ ದುಡಿದಿದ್ದಾರೆ. ಯಾರೋ ಒಬ್ಬರು ಅವರ ಹೆಸರನ್ನು ಹೈಜಾಕ್ ಮಾಡಿದರೆ ಆಂಧ್ರ ಜನ ಅದನ್ನು ನೋಡಿಕೊಂಡು ಸುಮ್ಮನೆ ಇರುವುದಿಲ್ಲ ಎಂದರು.

ರಾಜಕೀಯದಲ್ಲಿ ಮುನ್ನಡೆ, ಹಿನ್ನಡೆ ಇದ್ದದ್ದೇ. ಅದಕ್ಕೆ ಯಾರೂ ಧೃತಿಗೆಡುವ ಅಗತ್ಯವಿಲ್ಲ. ದೇವೇಗೌಡರು, ವಾಜಪೇಯಿಯವರು ಏಳುಬೀಳುಗಳ ನಡುವೆ ಪ್ರಧಾನಿ ಹುದ್ದೆಗೇರಿದ ನಿದರ್ಶನ ನಮ್ಮೆಲ್ಲರ ಕಣ್ಣೆದುರಿಗೇ ಇದೆ. ಹೀಗಾಗಿ ಹಿಂದಿನ ಚುನಾವಣೆಯಲ್ಲಿ ಆದ ಹಿನ್ನಡೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಮುಂದೆ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಕಾಂಗ್ರೆಸ್. ನೀವು ಬರೀ ಪ್ರೀತಿ ತೋರಿಸಿದರೆ ಸಾಲದು. ಆ ಪ್ರೀತಿ ಮತಗಳಾಗಿ ಪರಿವರ್ತನೆ ಆಗಬೇಕು. ವೈಎಸ್ಸಾರ್ ಪಾರ್ಟಿ, ಟಿಡಿಪಿ ಏನಾದರೂ ಹೇಳಿಕೊಳ್ಳಲಿ. ಆದರೆ ಈ ದೇಶದ ಪ್ರಗತಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಆಂಧ್ರಕ್ಕೆ ಪ್ರತ್ಯೇಕ ಸ್ಥಾನಮಾನ ಸಿಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮಾತನಾಡಿ,
ಮೋದಿಯಿಂದ ಅಚ್ಚೇದಿನ್ ಬರುವುದಿಲ್ಲ.‌ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಈ ದೇಶಕ್ಕೆ ಅಚ್ಚೇದಿನ್ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಸುಳ್ಳು ಆಶ್ವಾಸನೆ ನೀಡಿ ಐದು ವರ್ಷ ಅತ್ಯಂತ ಕೆಟ್ಟ ಆಡಳಿತ ನೀಡಿದ್ದಾರೆ. ಯುವಕರಿಗೆ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ, ಯಾವುದನ್ನೂ ಈಡೇರಿಸಿಲ್ಲ. ಹಾಗಿದ್ದರೆ ಅಚ್ಚೇದಿನ್ ಯಾವಾಗ ಬರಲಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಚ್ಚೇದಿನ್ ಅನ್ನುವುದು ಕನಸಿನ ಮಾತು. ದೇಶದ ಅಭಿವೃದ್ಧಿಯ ಮಂತ್ರ ಪಠಿಸುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮಾತ್ರ ಅಚ್ಚೇದಿನ್ ಬರಲಿದೆ. ನಮ್ಮ ಯುವನಾಯಕ ರಾಹುಲ್‌ಗಾಂಧಿ ಅವರು ಪ್ರಧಾನಿಯಾದರೆ ಬಹುತೇಕ ಎಲ್ಲ ಭರವಸೆಯನ್ನು ಈಡೇರಿಸಲಿದ್ದಾರೆ ಎಂದರು.

ಐದು ವರ್ಷ ಹುಸಿ ಭರವಸೆಯಲ್ಲೇ ಆಡಳಿತ ನಡೆಸಿದ ಮೋದಿ ಈಗ ಮತ್ತೊಮ್ಮೆ ಮತ ಕೇಳಲು ಬರುತ್ತಿದ್ದಾರೆ. ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಮಾಜಿ ಸಿಎಂ ಉಮನ್ ಚಾಂಡಿ, ಆಂಧ್ರ ಕಾಂಗ್ರೆಸ್ ಅಧ್ಯಕ್ಷ ರಘುವೀರರೆಡ್ಡಿ ಮತ್ತಿತರರು ಹಾಜರಿದ್ದರು.

Leave a Reply