ಸರ್ಕಾರ ಬೇಡ ಎಂದರೆ ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಆಡಲ್ಲ: ಬಿಸಿಸಿಐ

ಡಿಜಿಟಲ್ ಕನ್ನಡ ಟೀಮ್:

ಮೇ 30ರಿಂದ ಆಂಗ್ಲರ ನೆಲದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ ಆಡುವುದು ಬೇಡ ಎಂದು ಸರ್ಕಾರ ಸೂಚಿಸಿದರೆ ನಾವು ಆಡುವುದಿಲ್ಲ ಎಂದು ಬಿಸಿಸಿಐ ತಿಳಿಸಿರುವುದಾಗಿ ವರದಿಗಳು ಬಂದಿವೆ.

ಪುಲ್ವಾಮ ದಾಳಿಯ ಬೆನ್ನಲ್ಲೇ ವಿಶ್ವಕಪ್ ನಲ್ಲಿ ಭಾರತ ತಂಡ ಯಾವುದೇ ಕಾರಣಕ್ಕೂ ಪಾಕಿಸ್ತಾನದ ವಿರುದ್ಧ ಆಡಬಾರದು ಎಂಬ ಕೂಗು ಬಲವಾಗಿ ಕೇಳಿಬರುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಿದೆ.

‘ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡುವುದು ಬೇಡ ಎಂದು ನಿರ್ಧರಿಸಿದರೆ ಖಂಡಿತಾ ತಾನು ಆ ದೇಶದ ತಂಡದ ವಿರುದ್ಧ ಕ್ರಿಕೆಟ್ ಆಡುವುದಿಲ್ಲ ಎಂದು ಬಿಸಿಸಿಐ ಪದಾಧಿಕಾರಿಗಳು ತಮ್ಮ ಆಂತರಿಕ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧರಾಗಿರಲು ಸಿದ್ಧ ಎಂದು ಬಿಸಿಸಿಐ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.

ಐಸಿಸಿ ವಿಶ್ವಕಪ್ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಈಗಾಗಲೇ ವಿಶ್ವಕಪ್ ಸರಣಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ಈಗಾಗಲೇ ಸರಣಿಯ ಸಿದ್ಧತಾ ಕಾರ್ಯಗಳು ಶುರುವಾಗಿದ್ದು, ಈ ಹಂತದಲ್ಲಿ ಐಸಿಸಿ ಕೂಡ ಏನೂ ಮಾಡಲು ಸಾಧ್ಯವಿಲ್ಲ. ಅಂತೆಯೇ ಭಾರತ ಸರ್ಕಾರ ನಿರ್ಣಯ ಕೈಗೊಂಡರೆ ಅದರ ಸಂಬಂಧವೂ ಐಸಿಸಿ ನಿರ್ಣಯ ಕೈಗೊಳ್ಳಲಿದೆ. ವಿಶ್ವಕಪ್ ಸರಣಿ ಆರಂಭಕ್ಕೆ ಕೆಲ ತಿಂಗಳುಗಳ ಕಾಲ ಬಾಕಿ ಇದ್ದು, ಅಷ್ಟು ಹೊತ್ತಿಗಾಗಲೇ ಪರಿಸ್ಥಿತಿ ತಿಳಿಗೊಳ್ಳುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ಬಿಸಿಸಿಐ ವ್ಯಕ್ತಪಡಿಸಿದೆ.

Leave a Reply