ಬಾಟೆಲ್ ಫೈಟ್: ಕಂಪ್ಲಿ ಶಾಸಕ ಗಣೇಶ್ ಬಂಧನ!

ಡಿಜಿಟಲ್ ಕನ್ನಡ ಟೀಮ್:

ಈಗಲ್ಟನ್​ ರೆಸಾರ್ಟ್​ನಲ್ಲಿ ಹೊಸಪೇಟೆಯ ಕಾಂಗ್ರೆಸ್​ ಶಾಸಕ ಆನಂದ್​ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಂಪ್ಲಿ ಶಾಸಕ ಜೆ.ಎನ್​. ಗಣೇಶ್​ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ಗಣೇಶ್ ನನ್ನು ಬಿಡದಿ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ. ಗಣೇಶ್​ ಅವರನ್ನು ಇಂದು ಸಂಜೆ ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ.

ಈ ಘಟನೆ ನಡೆದ ನಂತರ ಕಂಪ್ಲಿ ಗಣೇಶ್​ ಅವರನ್ನು ಕಾಂಗ್ರೆಸ್​ ಹಿರಿಯ ನಾಯಕರು ಪಕ್ಷದಿಂದ ಅಮಾನತು ಮಾಡಿ ಶಿಸ್ತು ಕ್ರಮ ಜರುಗಿಸಿದ್ದರು. ಘಟನೆ ನಂತರ ಪರಾರಿಯಾಗಿದ್ದ ಗಣೇಶ್, ಕಾಂಗ್ರೆಸ್ ನ ಸಿಎಲ್ ಪಿ ಸಭೆ ಬಜೆಟ್ ಅಧಿವೇಷನಕ್ಕೂ ಬಾರದೆ ಕಣ್ಮರೆಯಾಗಿದ್ದರು. ಹೀಗಾಗಿ, ಬಿಡದಿ ಪೊಲೀಸರು ಗಣೇಶ್ ಅವರನ್ನು ಬಂಧಿಸಲು ಮಹಾರಾಷ್ಟ್ರ, ಗೋವಾ, ಹೈದರಾಬಾದ್​ ಸೇರಿದಂತೆ ಅನೇಕ ಹುಡುಕಾಟ ನಡೆಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ.

ಇವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ ಗಣೇಶ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಸಿಕ್ಕಿದ್ದು ಹೇಗೆ?

ಕಂಪ್ಲಿ ಶಾಸಕ ಗಣೇಶ್ ಬಂಧನಕ್ಕೆ
ಪೊಲೀಸರು ಒಂದು ತಿಂಗಳಿನಿಂದ ಹುಡುಕಾಟ ನಡೆಸುತ್ತಿದ್ದರು. ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ರಾಜ್ಯಗಳಲ್ಲಿ ತೀವ್ರ ಶೋಧ ನಡೆಸಲಾಗಿತ್ತು. ಕಳೆದ ವಾರದಿಂದ ಗಣೇಶ್ ಸಂಬಂಧಿಕರ ಮನೆ ಮೇಲೆ ಬಿಡದಿ ಪೊಲೀಸರು ಕಣ್ಣಿಟ್ಟಿದ್ದರು. ವಾರದ ಹಿಂದೆ ಕಂಪ್ಲಿ ಗಣೇಶ್​ ತನ್ನ ಪತ್ನಿಗೆ ಕರೆ ಮಾಡಿದ್ದು, ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಹುಡುಕಾಟ ನಡೆಸಿ ಬಂಧಿಸಿದ್ದಾರೆ.

Leave a Reply