ಸೌದಿ ದೊರೆ ಮೊಹಮದ್ ಬಿನ್ ಸಲ್ಮಾನ್ ಪ್ರವಾಸ ಭಾರತಕ್ಕೆ ಮಹತ್ವ ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಸೌದಿ ಅರೇಬಿಯಾ ದೊರೆ ಮೊಹಮದ್ ಬಿನ್ ಸಲ್ಮಾನ್ ಅವರು ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಇದು ಭಾರತದ ಪಾಲಿಗೆ ಮಹತ್ವದ್ದಾಗಿದೆ. ಇತ್ತೀಚೆಗೆ ಪುಲ್ವಾಮದಲ್ಲಿ ನಡೆದ ಸಿಆರ್ ಪಿಎಫ್ ಯೋಧರ ಮೇಲಿನ ಉಗ್ರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಬರೆ ಎಳೆಯುವುದರ ಜತೆಗೆ ತೈಲ, ವಿದೇಶಿ ಬಂಡವಾಳ ಹೂಡಿಕೆ, ಉಗ್ರರ ವಿರುದ್ಧದ ಹೋರಾಟ, ಕಡಲ ತೀರದ ಭದ್ರತೆ ವಿಚಾರವಾಗಿ ಸಾಕಷ್ಟು ಮಹತ್ವವಿದೆ.

ಹೌದು, ಏಷ್ಯಾ ಭಾಗದಲ್ಲಿ ಭಾರತಕ್ಕೆ ಸೌದಿ ಅರೇಬಿಯಾ ರಾಜತಾಂತ್ರಿಕ ಮಿತ್ರ ರಾಷ್ಟ್ರ ಎಂದೇ ಹೇಳಬಹುದು. ಮಂಗಳವಾರ ರಾತ್ರಿ ಭಾರತಕ್ಕೆ ಆಗಮಿಸಿದ ಸಲ್ಮಾನ್ ಅವರನ್ನು ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಅದ್ಧೂರಿ ಸ್ವಾಗತ ಕೋರಿದರು. ಉಭಯ ದೇಶಗಳ ನಾಯಕರು ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ವಿಚಾರವಾಗಿ ಮಾತುಕತೆ ನಡೆಸಲಿದ್ದಾರೆ.

ಭಾರತದ ನಂತರ ಸಲ್ಮಾನ್ ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಹೀಗಾಗಿ ಅವರ ಈ ಪ್ರವಾಸ ಪ್ರಸ್ತುತ ಪರಿಸ್ಥಿತಿಯಲ್ಲಿ ಗಮನ ಸೆಳೆದಿದೆ. ಮೂಲಗಳ ಪ್ರಕಾರ ಸಲ್ಮಾನ್ ಅವರು ಪಾಕಿಸ್ತಾನದಿಂದ ಸೌದಿಗೆ ತೆರಳಿ ಮರುದಿನವೇ ಮತ್ತೇ ಭಾರತಕ್ಕೆ ಆಗಮಿಸಲಿದ್ದಾರೆ. ಇದಕ್ಕೆ ಕಾರಣ ಪುಲ್ವಾಮ ದಾಳಿಯಿಂದ ಆಗಿರುವ ನೋವಿಗೆ ಸಂಭಂದಿಸಿದಂತೆ ಭಾರತೀಯರ ಭಾವನೆಗೆ ಗೌರವ ನೀಡುವ ಉದ್ದೇಶವಾಗಿದೆ ಎಂದು ಹೇಳಲಾಗಿದೆ. ಸದ್ಯ ಈಗಿನ ಪ್ರವಾಸದಲ್ಲಿ ಸಲ್ಮಾನ್ ಹಾಗೂ ಮೋದಿ ಅವರ ನಡುವೆ ಯಾವ ಚರ್ಚೆ ನಡೆಯಲಿವೆ ಎಂಬುದನ್ನು ನೋಡುವುದಾದರೆ…

ತೈಲ ಮತ್ತು ಇತರೆ ಇಂಧನ ಬೇಡಿಕೆ:
ಸಾಧ್ಯ ಭಾರತ ತನ್ನ ಅಗತ್ಯದ ಶೇ.20 ರಷ್ಟು ತೈಲವನ್ನು ಸೌದಿಯಿಂದ ಪಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತ ಅತಿ ದೊಡ್ಡ ತೈಲ ಗ್ರಾಹಕ ರಾಷ್ಟ್ರವಾಗಿದೆ. ಸದ್ಯ ತೈಲ ವಿಚಾರದಲ್ಲಿ ಭಾರತ ಹಾಗೂ ಸೌದಿ ಗ್ರಾಹಕ ಹಾಗೂ ವರ್ತಕ ಸಂಬಂಧ ಹೊಂದಿದೆ. ಇದನ್ನು ಅಭಿವೃದ್ಧಿಗೊಳಿಸಲು ಸೌದಿ ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿದೆ. ಕಳೆದ ವರ್ಷ ಸೌದಿಯ ಜಾಗತಿಕ ತೈಲ ಕಂಪೆನಿ ಅರಮ್ಕೊ, ಯುಎಇಯ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪೆನಿಯು ಮಹಾರಾಷ್ಟ್ರದ ರತ್ನಗಿರಿಯಲ್ಲಿ 44 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಜಗತ್ತಿನ ಅತಿದೊಡ್ಡ ಪೆಟ್ರೋಲಿಯಂ ಶುದ್ದೀಕರಣ ಘಟಕ ಸ್ಥಾಪನೆ ಮಾಡುವುದಾಗಿ ಘೋಷಿಸಿದೆ. ಈ ಘಟಕಕ್ಕೆ ಸೌದಿ ಶೇ.50ರಷ್ಟು ಕಚ್ಛಾ ತೈಲ ಪೂರೈಸಿದೆ. ಇದು ಭಾರತದ ತೈಲ ಆಮದಿಗೆ ದೊಡ್ಡ ಲಾಭ. ಇನ್ನು ಉಭಯ ದೇಶಗಳ ನಾಯಕರು ನೈಸರ್ಗಿಕ ಅನಿಲ, ಸೌರ ಶಕ್ತಿ ವಿಚಾರವಾಗಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.

ವಿದೇಶಿ ಬಂಡವಾಳ ಹೂಡಿಕೆ:
ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ನಡುವಣ ಸಂಬಂಧ ಗಟ್ಟಿಯಾಗುತ್ತಾ ಬಂದಿದೆ. 2017-18ನೇ ಸಾಲಿನಲ್ಲೇ ಉಭಯ ದೇಶಗಳ ನಡುವಿನ ವ್ಯಾಪಾರ 27.48 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಎತ್ತರಕ್ಕೆ ತಲುಪಿದೆ. ಇದರೊಂದಿಗೆ ಸೌದಿ ಅರೇಬಿಯಾ ಭಾರತದ ನಾಲ್ಕನೇ ಅತಿ ದೊಡ್ಡ ವ್ಯಾಪಾರ ಸ್ನೇಹಿ ರಾಷ್ಟ್ರವಾಗಿದೆ. ಸೌದಿ ತನ್ನ ರಾಷ್ಟ್ರೀಯ ಬಂಡವಾಳ ಮತ್ತು ಮೂಲ ಸೌಕರ್ಯ ನಿಧಿಯಿಂದ ಭಾರತದಲ್ಲಿ ಹೂಡಿಕೆಗೆ ಮುಂದಾಗಿದ್ದು, ಇದರಿಂದ ದೇಶದಲ್ಲಿ ಹೆದ್ದಾರಿ, ಬಂದರು ಹಾಗೂ ಇತರೆ ಮೂಲ ಸೌಕರ್ಯ ಯೋಜನೆಗಳಿಗೆ ಮಹತ್ವದ ಉತ್ತೇಜನ ಸಿಗಲಿದೆ.

ಸೌದಿಯಲ್ಲಿರುವ ಭಾರತೀಯರ ಕ್ಷೇಮ:
ಸುಮಾರು 30 ಲಕ್ಷಕ್ಕೂ ಹೆಚ್ಚು ಭಾರತೀಯರು ಸೌದಿಯಲ್ಲಿ ನೆಲೆಸಿ ಕೆಲಸ ಮಾಡುತ್ತಿದ್ದಾರೆ. ಇವರು ಪ್ರತಿ ವರ್ಷ ಸುಮಾರು 10 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಭಾರತಕ್ಕೆ ಕಳುಹಿಸುತ್ತಿದ್ದಾರೆ. ಇದು ಆರ್ಥಿಕತೆಗೆ ಉತ್ತಮ ಪ್ರೋತ್ಸಾಹ ನೀಡಿದೆ. ಇನ್ನು ಸೌದಿ ಭಾರತೀಯ ಉದ್ದಿಮೆದಾರರಿಗೆ ದೊಡ್ಡ ಪ್ರಮಾಣದಲ್ಲಿ ಅವಕಾಶ ನೀಡಿದ್ದು, ಎರಡು ದೇಶಗಳ ನಡುವಣ ವ್ಯಾಪಾರ ಒಪ್ಪಂದ ಅಲ್ಲಿರುವ ಭಾರತೀಯರಿಗೆ ಅನುಕೂಲವಾಗಲಿದೆ.

ಭಯೋತ್ಪಾದನೆ ನಿಗ್ರಹಕ್ಕೆ ಬೆಂಬಲ:
ಪುಲ್ವಾಮ ದಾಳಿಯ ಬೆನ್ನಲ್ಲೇ ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಅದೆಲ್ ಅಲ್ ಜುಬೈರ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಣ ತಿಕ್ಕಾಟ ಶಮನಕ್ಕೆ ಪ್ರಯತ್ನಿಸಿದ್ದಾರೆ. ಇನ್ನು ಪಿಟಿಐ ಸುದ್ದಿ ಸಂಸ್ಥೆಯ ವರದಿಯಲ್ಲಿ ‘ಸೌದಿ ಅರೇಬಿಯಾ ಕಾಶ್ಮೀರ ಹಾಗೂ ಗಡಿಯಲ್ಲಿ ಉಗ್ರ ಚಟುವಟಿಕೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ವಾದವನ್ನು ತಳ್ಳಿ ಹಾಕಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಪ್ರಧಾನಿ ಮೋದಿ ಸೌದಿ ದೊರೆ ಜತೆಗಿನ ಮಾತುಕತೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಉಭಯ ನಾಯಕರು ಭಯೋತ್ಪಾದನೆ ವಿರುದ್ಧ ಜಂಟಿ ಹೇಳಿಕೆ ಬಿಡುಗಡೆ ಮಾಡಲಿದ್ದಾರೆ. ಇದು ಸಹಜವಾಗಿ ಪಾಕಿಸ್ತಾನಕ್ಕೆ ಮುಖಭಂಗವಾಗಲಿದೆ.

Leave a Reply